ಬುಧವಾರ, ಆಗಸ್ಟ್ 21, 2019
24 °C

ರಾಜಕೀಯ ಲಾಭಕ್ಕೆ ಧರ್ಮದ ಬಳಕೆ ಸಲ್ಲ: ಸಿ.ಎಂ

Published:
Updated:
ರಾಜಕೀಯ ಲಾಭಕ್ಕೆ ಧರ್ಮದ ಬಳಕೆ ಸಲ್ಲ: ಸಿ.ಎಂ

ಬೆಂಗಳೂರು: ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯಲು ಕೆಲವರು ಯತ್ನಿಸುತ್ತಿದ್ದಾರೆ. ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಿ ದೇಶವನ್ನು ರಕ್ಷಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ರಂಜಾನ್ ಮಾಸಾಚರಣೆ ಪ್ರಯುಕ್ತ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಸಂಜೆ ತಾವು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು. ಧರ್ಮವನ್ನು ಬಳಸಿಕೊಂಡು ಮನಸ್ಸುಗಳನ್ನು ಒಡೆದು ರಾಜಕೀಯ ಲಾಭ ಪಡೆಯುವ ಪ್ರವೃತ್ತಿ ಸಲ್ಲ. ಈ ರೀತಿ ಸಮಾಜ ಮತ್ತು ದೇಶ ಒಡೆಯಲು ಪ್ರಯತ್ನಿಸುವವರಿಗೆ ಜನರು ಒಗ್ಗೂಡಿ ಸರಿಯಾದ ಪಾಠ ಕಲಿಸಬೇಕಿದೆ ಎಂದರು.`ನಿರ್ದಿಷ್ಟ ಧರ್ಮದಲ್ಲೇ ತಾವು ಜನಿಸಬೇಕು ಎಂದು ಯಾರೂ ಬಯಸುವುದಿಲ್ಲ. ಮನುಷ್ಯರಾಗಿ ಹುಟ್ಟಿದಾಗ ಎಲ್ಲರೂ ಒಂದು ಧರ್ಮಕ್ಕೆ ಸೇರಿದವರಾಗುತ್ತಾರೆ. ಆದರೆ, ದೇಶದ ಸಂವಿಧಾನದ ದೃಷ್ಟಿಯಿಂದ ಯಾವ ಧರ್ಮವೂ ಮೇಲಲ್ಲ, ಕೀಳೂ ಅಲ್ಲ. ಸಂವಿಧಾನವು ಎಲ್ಲಾ ಧರ್ಮಗಳಿಗೆ ಸಮಾನ ಗೌರವವನ್ನು ನೀಡುತ್ತದೆ. ಎಲ್ಲಾ ಧರ್ಮಗಳ ಅಂತಿಮ ಆಶಯ ಕೂಡ ಒಂದೇ ಆಗಿದೆ. ಇದನ್ನು ಅರಿತು ಬಾಳುವುದು ಮುಖ್ಯ' ಎಂದು ಹೇಳಿದರು.ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಮುಸ್ಲಿಂ ಸಮುದಾಯದವರಿಗೆ ರಂಜಾನ್ ಶುಭಾಶಯ ಕೋರಿದರು.

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಆಂಜನೇಯ, ಖಮರುಲ್ ಇಸ್ಲಾಂ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್, ಶಾಸಕ ಆರ್.ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Post Comments (+)