ರಾಜಕೀಯ ಶಕ್ತಿಯಾಗಲು ದಲಿತರಿಗೆ ಅವಕಾಶ

7

ರಾಜಕೀಯ ಶಕ್ತಿಯಾಗಲು ದಲಿತರಿಗೆ ಅವಕಾಶ

Published:
Updated:
ರಾಜಕೀಯ ಶಕ್ತಿಯಾಗಲು ದಲಿತರಿಗೆ ಅವಕಾಶ

ಬೆಂಗಳೂರು:  ದಲಿತರು ಉಪ ಜಾತಿ, ಎಡಗೈ-ಮೇಲುಗೈ ಎಂಬ ಭಾವನೆ ತೊರೆದು ಒಗ್ಗೂಡಿದಲ್ಲಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಬಹುದು ಎಂದು ಸಾಹಿತಿ ಡಾ. ಸುಮತೀಂದ್ರ ನಾಡಿಗ ಸಲಹೆ ಮಾಡಿ ದರು.ದಲಿತ ಅಭಿವೃದ್ಧಿ ಸಂಸ್ಥೆಯು ಶೇಷಾದ್ರಿಪುರದ ಕೆನ್ ಕಲಾ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕವಿ ಡಾ. ಸಿದ್ದಲಿಂಗಯ್ಯನವರ ವೆಬ್‌ಸೈಟ್ ಬಿಡುಗಡೆ ಮಾಡಿ ಮಾತನಾಡಿದ ಅವರು, `ಸಮಾಜದಲ್ಲಿ ನಿರ್ಲಕ್ಷ್ಯ, ಅವಗಣನೆಗೆ ಒಳಗಾಗುತ್ತಿರುವ ದಲಿತರು ದೊಡ್ಡ ಪಿರಮಿಡ್ ಮಾದರಿಯಲ್ಲಿ ಒಗ್ಗೂಡಿ ಎದ್ದು ನಿಲ್ಲಬೇಕು~ ಎಂದು ಕರೆ ನೀಡಿದರು.`ದಲಿತ ಸಂಘರ್ಷ ಸಮಿತಿಗಳು ಸಂಘರ್ಷ  ಬಿಟ್ಟು ಒಗ್ಗೂಡಿದಲ್ಲಿ ಬಿಜೆಪಿ-ಕಾಂಗ್ರೆಸ್‌ಗಳಿಗಿಂತ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಬಹುದು. ದಲಿತರ ಉದ್ಧಾರ ಹಾಗೂ ಆತ್ಮರಕ್ಷಣೆಗಾಗಿಯಾದರೂ ಸಂಘಟನೆಗಳು ಒಂದಾಗಬೇಕು~ ಎಂದರು. `ಯುದ್ಧಕ್ಕೆ ಹೊರಟಾಗ ಸೈನ್ಯ ತುಂಡು-ತುಂಡಾದರೆ ಗೆಲ್ಲುವುದು ಕಷ್ಟ. ದಲಿತ ಸಂಘಟನೆಗಳು ಕೂಡ ಹಾಗೇ. ಬೇರೆ ಬೇರೆ ಕಾರಣಗಳಿಂದ ಸಂಘಟನೆಗಳು ಇಬ್ಭಾಗವಾದಂತೆಲ್ಲಾ ಸಮುದಾಯ ಶೋಷಣೆಗೊಳಗಾಗುತ್ತದೆ. ಅಲ್ಲದೆ, ಅವಕಾಶಗಳಿಂದಲೂ ವಂಚಿತವಾಗಬೇಕಾಗುತ್ತದೆ~ ಎಂದರು.ಬರವಣಿಗೆ ಮುಂದುವರಿಸುವೆ:  ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಡಾ. ಸಿದ್ದಲಿಂಗಯ್ಯ, `ಇನ್ನು ಮುಂದೆ ನಾನು ಬರವಣಿಗೆ ನಿಲ್ಲಿಸುವುದಿಲ್ಲ. ಸ್ಥಾನಮಾನ ತಾತ್ಕಾಲಿಕ. ಅದು ಯಾವಾಗ ಬರುತ್ತೆ ಅಥವಾ ಹೋಗುತ್ತೆ ಎಂಬುದು ನಮಗೇ ಗೊತ್ತಾಗುವುದಿಲ್ಲ. ಸ್ಥಾನಮಾನ ಸಿಕ್ಕಾಗ ಆ ಸ್ಥಾನಕ್ಕೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಬರವಣಿಗೆ ಶಾಶ್ವತ ಎಂಬುದರ ಅರಿವು ನನಗೂ ಇದೆ~ ಎಂದರು.`ನನ್ನ ಹಿಂದಿನ ಹೋರಾಟದ ಬದುಕನ್ನು ವೆಬ್‌ಸೈಟ್‌ನಲ್ಲಿ ನೋಡಿದಾಗ ಎಲ್ಲ ಬಡ-ಶೋಷಿತರ ಪರ ಮತ್ತೆ ಹೋರಾಟ ನಡೆಸಬೇಕೆಂಬ ಸ್ಫೂರ್ತಿ ಬರುತ್ತಿದೆ. ಪ್ರತಿ ದಿನ ನಾಲ್ಕೈದು ಗಂಟೆ ಓದುತ್ತೇನೆ. ಆದರೆ, ಓದು ಬರವಣಿಗೆಯ ಶತ್ರುವಾಗಿ ಪರಿಣಮಿಸಿದೆ. ಇನ್ನು ಮುಂದೆ ಓದುವುದಕ್ಕಿಂತ ಬರವಣಿಗೆಗೆ ಹೆಚ್ಚು ಆದ್ಯತೆ ನೀಡುತ್ತೇನೆ~ ಎಂದರು.ಸಮತಾ ಸೈನಿಕದಳದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಉದ್ಯಮಿ ಭಕ್ತವತ್ಸಲಂ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.ವೆಬ್‌ಸೈಟ್‌ನಲ್ಲಿ ಕವಿ ಸಿದ್ದಲಿಂಗಯ್ಯನವರ ಬದುಕಿನ ಚರಿತ್ರೆ  ಅನಾವರಣಗೊಳಿಸಲಾಗಿದೆ. ಪ್ರಸ್ತುತ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುವ ಮಾಹಿತಿ ತಿಂಗಳಲ್ಲಿ ಕನ್ನಡ ಹಾಗೂ ಹಿಂದಿಗೂ ಅಳವಡಿಸಲಾಗುವುದು ಎಂದು ದಲಿತ ಅಭಿವೃದ್ಧಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಜಿ. ಶಿವಕುಮಾರ್ ತಿಳಿಸಿದರು.  ಸಿದ್ದಲಿಂಗಯ್ಯನವರ ವೆಬ್‌ಸೈಟ್ ವಿಳಾಸ: www.kavisiddalingaiah.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry