ಬುಧವಾರ, ನವೆಂಬರ್ 13, 2019
23 °C

ರಾಜಕೀಯ ಶುದ್ಧೀಕರಣ ಅಗತ್ಯ: ರಾಜಶೇಖರನ್

Published:
Updated:

ಮದ್ದೂರು: ಮಿತಿ ಮೀರಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತೀಯತೆ, ವಿವಿಧ ಪ್ರಲೋಭನೆಗಳಿಂದ ಪ್ರಸ್ತುತದ ರಾಜಕೀಯ ವ್ಯವಸ್ಥೆ ಹೇಳಲಾರದಷ್ಟು ಕಲುಷಿತಗೊಂಡಿದ್ದು, ಯುವ ಜನರು ರಾಜಕೀಯ ಶುದ್ಧೀಕರಣಕ್ಕೆ ಮುಂದಾಗಬೇಕು ಎಂದು ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕೌಡ್ಲೆ ಗ್ರಾಮದ ಜನತಾ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ `ಶಿಕ್ಷಣ ಹಕ್ಕು ಕಾಯ್ದೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಸಚ್ಚಾರಿತ್ರ್ಯ ವ್ಯಕ್ತಿಗಳ ಆಯ್ಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಶಿಕ್ಷಣ ಹಕ್ಕು ಕಾಯಿದೆ ಜಾರಿ ಕೇವಲ ಕಾಯಿದೆಯಾಗಿ ಜಾರಿಗೊಂಡರೆ ಸಾಲದು. ಸಮರ್ಪಕವಾಗಿ ಅನುಷ್ಠಾನಗೊಳಿಸುವತ್ತ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದಲ್ಲಿ ಕಾಯಿದೆ ಕೇವಲ ಕಾಗದದ ಮೇಲಿನ ಕಾಯಿದೆಯಾಗಿ ಉಳಿಯುವುದು ಖಂಡಿತ ಎಂದು ಆತಂಕ ವ್ಯಕ್ತಪಡಿಸಿದರು.ಮಂಡ್ಯ ಪಿಇಟಿ ಸಂಸ್ಥೆ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ ಅವರು ಗೌರವ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಗೊಂಡಿರುವುದು ಸ್ವಾಗತಾರ್ಹ. ಆದರೆ ಸರ್ಕಾರ ಕಾಯಿದೆಯಲ್ಲಿನ ಕೆಲವು ತೊಡಕುಗಳ ನಿವಾರಣೆಗೆ ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.ಜನತಾ ವಿದ್ಯಾಸಂಸ್ಥೆ ಅಧ್ಯಕ್ಷ ಕೌಡ್ಲೆ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಸಿ.ವಿ.ತಿರುಮಲರಾವ್, ಮೇಲುಕೋಟೆ ಯದುಶೈಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಬಿ.ನರಸಿಂಹೇಗೌಡ, ಬೆಂಗಳೂರಿನ ಆಯೆಷಾ ಆಂಗ್ಲಮಾಧ್ಯಮ ಶಾಲೆ ಕಾರ್ಯದರ್ಶಿ ಕುವೆಂಡ ಅಮ್ಜಾದುಲ್ಲಾ, ವಿಜಯ ವಿದ್ಯಾಸಂಸ್ಥೆ ಅಧ್ಯಕ್ಷ ಬೋರಯ್ಯ, ವಿಶ್ರಾಂತ ಪ್ರಾಂಶುಪಾಲ ಡಾ.ಅರ್ಜುನಪುರಿ ಅಪ್ಪಾಜಿಗೌಡ, ಶಿಕ್ಷಣ ತಜ್ಞ ಲಿಂಗಣ್ಣ ಬಂಧೂಕಾರ್ ಸಂಕಿರಣದಲ್ಲಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಶಿವಲಿಂಗೇಗೌಡ, ನಗರಸಭಾ ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮಲ್ಲಾರಾಧ್ಯ ಪ್ರಸನ್ನ, ಮುಖ್ಯಶಿಕ್ಷಕ  ಕೆ.ಕೃಷ್ಣಪ್ಪ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)