ಬುಧವಾರ, ಮಾರ್ಚ್ 29, 2023
30 °C

ರಾಜಕೀಯ ಸ್ಥಿತ್ಯಂತರಕ್ಕೆ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಸ್ಥಿತ್ಯಂತರಕ್ಕೆ ದಾರಿ

ಬೆಂಗಳೂರು: ‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಉಪ ಚುನಾವಣೆಗಳಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದಿತ್ತು. ಈಗ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ ಬಿಜೆಪಿ ದೂಳೀಪಟವಾಗಲಿದ್ದು, ಜೆಡಿಎಸ್ ಮೊದಲ ಸ್ಥಾನಕ್ಕೆ ಏರುತ್ತದೆ’.



- ಇವು ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆತ್ಮವಿಶ್ವಾಸದ ಮಾತುಗಳು. ಈ ಬಾರಿ ಪಕ್ಷದ ಪ್ರಭಾವವನ್ನು ರಾಜ್ಯವ್ಯಾಪಿ ವಿಸ್ತರಿಸುವ ಯೋಜನೆ ಹಾಕಿಕೊಂಡಿರುವ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.



ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಯೋಚನೆ, ಯೋಜನೆ ಮತ್ತು ನಿರೀಕ್ಷೆಗಳನ್ನು ಹಂಚಿಕೊಂಡ ಅವರು, ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಬೆಳವಣಿಗೆ ಆರಂಭವಾಗಲಿದೆ ಎಂಬ ಸುಳಿವು ನೀಡಿದರು.



*ಈ ಚುನಾವಣೆಯಲ್ಲಿ ನಿಮ್ಮ ಪಕ್ಷಕ್ಕೆ ಜನರ ಬೆಂಬಲ ಹೇಗಿದೆ?

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಜನತೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂಬ ಕೆಲವರ ವಿಶ್ಲೇಷಣೆಯನ್ನು ಮತದಾರರು ಈ ಬಾರಿ ಸುಳ್ಳು ಮಾಡುತ್ತಾರೆ. ರಾಜ್ಯದ ಎಲ್ಲ ಭಾಗಗಳಲ್ಲೂ ನಮ್ಮ ಪಕ್ಷ ಮುನ್ನಡೆ ಸಾಧಿಸುವುದು ಖಚಿತ.



*ಬಂಗಾರಪ್ಪ ಆಗಮನದಿಂದ ಜೆಡಿಎಸ್‌ಗೆ ಲಾಭ ಆಗುತ್ತಾ?

ಖಂಡಿತವಾಗಿಯೂ ಬಂಗಾರಪ್ಪ ಅವರ ಆಗಮನದಿಂದ ನಮ್ಮ ಪಕ್ಷಕ್ಕೆ ದೊಡ್ಡ ಲಾಭ ಇದೆ. ಮೈಸೂರು ಭಾಗದ ಪ್ರಮುಖ ವೀರಶೈವ ಮುಖಂಡ ಎಂ.ಮಹದೇವು ಕೂಡ ಜೆಡಿಎಸ್‌ಗೆ ಬಂದಿದ್ದಾರೆ. ಸ್ಥಳೀಯ ಕಾರ್ಯಕರ್ತರಿಂದ ರಾಜ್ಯಮಟ್ಟದ ನಾಯಕರವರೆಗೆ ನಿತ್ಯವೂ ನಮ್ಮ ಪಕ್ಷ ಸೇರುತ್ತಿದ್ದಾರೆ. ಇದು ಜೆಡಿಎಸ್ ಬಲವರ್ಧನೆಯ ಸಂಕೇತ.



*ನಿಮ್ಮ ಕುಟುಂಬ ‘ಲಿಂಗಾಯತ ಮುಖ್ಯಮಂತ್ರಿಗಳ ವಿರೋಧಿ’ ಎಂಬ ಆರೋಪ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೇ?

ನಮ್ಮ ಕುಟುಂಬ ಲಿಂಗಾಯತ ಮುಖ್ಯಮಂತ್ರಿಗಳ ವಿರೋಧಿ ಎಂಬುದು ಕೆಲವರು ಮಾಡಿರುವ ಅಪಪ್ರಚಾರ. ಅದರಲ್ಲಿ ಸತ್ಯಾಂಶ ಇಲ್ಲ. ಈ ರಾಜ್ಯದಲ್ಲಿ ಲಿಂಗಾಯತ ನಾಯಕರಿಗೆ ಹೆಚ್ಚು ಬೆಂಬಲ ನೀಡಿದವರಲ್ಲಿ ದೇವೇಗೌಡರೇ ಮೊದಲಿಗರು. ಆದ್ದರಿಂದ ನಾವು ‘ಲಿಂಗಾಯತ ಮುಖ್ಯಮಂತ್ರಿಗಳ ವಿರೋಧಿಗಳು’ ಎಂಬ ಆರೋಪ ಚುನಾವಣೆ ಮೇಲೆ ಎಳ್ಳಷ್ಟೂ ಪರಿಣಾಮ ಬೀರುವುದಿಲ್ಲ.



* ನಿಮ್ಮ ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳೇನು?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನ ಮತ್ತು ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಎರಡು ಬಜೆಟ್‌ಗಳಲ್ಲಿ ನೂರಾರು ಭರವಸೆಗಳನ್ನು ಪ್ರಕಟಿಸಿದ್ದರು. ಈಗಲೂ ಎಲ್ಲವೂ ಘೋಷಣೆಗಳಾಗಿಯೇ ಉಳಿದಿವೆ. ಈ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ. ಬಿಜೆಪಿಯ ಕೆಲವರ ಅಭಿವೃದ್ಧಿ ಆಗುತ್ತಿದೆ. ಈ ವಿಚಾರಗಳನ್ನು ಜನತೆಯ ಮುಂದಿಟ್ಟು ಮತ ಕೇಳುತ್ತೇವೆ.



* ಯಡಿಯೂರಪ್ಪ ಅವರ ವಿರುದ್ಧ ಈ ಹಿಂದೆ ನೀವು ಮಾಡಿರುವ ಭೂ ಹಗರಣದ ಆರೋಪಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸುತ್ತೀರಾ?

ಭೂ ಹಗರಣದ ವಿಷಯವೂ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪವಾಗಲಿದೆ. ಅದು ಒಂದು ಭಾಗವಷ್ಟೇ. ಉಳಿದ ವಿಷಯಗಳನ್ನೂ ಪ್ರಚಾರದಲ್ಲಿ ಬಳಸುತ್ತೇವೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಕರ್ನಾಟಕವನ್ನು ಆಂದೋಲನದಿಂದ ಹೊರಗಿಟ್ಟಿದ್ದಾರೆ. ಇಲ್ಲಿಗೆ ಬಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವುದನ್ನು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಈ ವಿಷಯವನ್ನೂ ಜನತೆಗೆ ತಿಳಿಸುತ್ತೇವೆ.



*ಎಷ್ಟು ಜಿಲ್ಲೆಗಳಲ್ಲಿ ಜೆಡಿಎಸ್ ಬಹುಮತ ಪಡೆಯುವ ನಿರೀಕ್ಷೆ ಇದೆ?

14ರಿಂದ 16 ಜಿಲ್ಲೆಗಳಲ್ಲಿ ನಮ್ಮ ಪಕ್ಷ ಸ್ವತಂತ್ರವಾಗಿ ಬಹುಮತ ಪಡೆಯಲಿದೆ. 4-5 ಜಿಲ್ಲೆಗಳಲ್ಲಿ ಜೆಡಿಎಸ್ ಬೆಂಬಲ ಅನಿವಾರ್ಯ ಆಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ.



* ಜನತಾ ಪರಿವಾರದ ಒಗ್ಗೂಡಿಕೆ ವಿಷಯ ಯಾವ ಹಂತದಲ್ಲಿದೆ?

ಜನತಾ ಪರಿವಾರದಿಂದ ಸಿಡಿದು ಹೋಗಿರುವ ಹಲವು ರಾಜ್ಯಮಟ್ಟದ ನಾಯಕರು ಬೇರೆ ಬೇರೆ ಪಕ್ಷಗಳಲ್ಲಿದ್ದಾರೆ. ಈಗ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಾವು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಅನೇಕರು ಜೆಡಿಎಸ್‌ಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷವನ್ನು ಬೆಂಬಲಿಸಿ ಬರುವವರಿಗೆ ನಾವು ಮುಕ್ತ ಸ್ವಾಗತ ನೀಡುತ್ತೇವೆ.



* ಸಿದ್ದರಾಮಯ್ಯ ಪಕ್ಷಕ್ಕೆ ಬಂದರೆ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಸಿದ್ಧರಿದ್ದೀರಾ?

ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ಗೆ ಕರೆತರುವ ಬಗ್ಗೆ ಯಾವುದೇ ಚರ್ಚೆಯನ್ನೂ ನಾನು ನಡೆಸಿಲ್ಲ. ಕೆಲವರು ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಸಿದ್ದರಾಮಯ್ಯ ಒಂದು ರಾಷ್ಟ್ರೀಯ ಪಕ್ಷದಲ್ಲಿದ್ದು, ಶಾಸಕಾಂಗ ಪಕ್ಷದ ನಾಯಕನ ಹುದ್ದೆಯಲ್ಲಿದ್ದಾರೆ. ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ನಾವು ಮಾತನಾಡಿದರೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಸಿದ್ದರಾಮಯ್ಯ ಬಗ್ಗೆ ಅನುಮಾನ ಪಡುವಂತಾಗುತ್ತದೆ. ಉಳಿದದ್ದು ಸಿದ್ದರಾಮಯ್ಯನವರ ಸ್ವಂತ ನಿರ್ಧಾರಕ್ಕೆ ಬಿಟ್ಟದ್ದು.



*ಬಿಜೆಪಿ ಸರ್ಕಾರದ ವಿರುದ್ಧದ ನಿಮ್ಮ ಹೋರಾಟ ಮುಂದುವರಿಸುತ್ತೀರಾ?

ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸರ್ಕಾರದ ವಿರುದ್ಧದ ಹೋರಾಟವನ್ನು ಮತ್ತೆ ಆರಂಭಿಸುತ್ತೇನೆ. ಫಲಿತಾಂಶ ಪ್ರಕಟವಾದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಸರ್ಕಾರದ ಭ್ರಷ್ಟಾಚಾರ ಮತ್ತು ಭೂ ಹಗರಣಗಳ ಕುರಿತು ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಆಂದೋಲನ ನಡೆಸಲೂ ನಿರ್ಧರಿಸಿದ್ದೇನೆ.



* ಕೇಂದ್ರ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ ಏಕೆ ಸಕ್ರಿಯವಾಗಿಲ್ಲ?

ರಾಜ್ಯದ ವಿಷಯದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಆದ್ದರಿಂದ ಇಲ್ಲಿನ ಸರ್ಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸುತ್ತಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. 2ಜಿ ತರಂಗಾಂತರ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ನೇಮಕ ಮಾಡಬೇಕೆಂಬ ಬೇಡಿಕೆಯನ್ನು ಜೆಡಿಎಸ್ ಬೆಂಬಲಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.