ಗುರುವಾರ , ಮೇ 26, 2022
30 °C

ರಾಜತಾಂತ್ರಿಕ ರಕ್ಷಣೆ ಮಾಹಿತಿ ಕೋರಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್ ಅವರಿಗೆ ದೇಶದ ಕಾನೂನುಗಳು ಅನ್ವಯವಾಗದ `ರಾಜತಾಂತ್ರಿಕ ರಕ್ಷಣೆ~ ಇದೆಯೇ ಎಂಬುದರ ಬಗ್ಗೆ ನಗರ ಪೊಲೀಸರು ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಮಾಹಿತಿ ಕೋರಿದ್ದಾರೆ.`ಪಾಸ್ಕಲ್ ಅವರು ರಾಜತಾಂತ್ರಿಕ ರಕ್ಷಣೆಗೆ ಒಳಪಡುವ ಅಧಿಕಾರಿಯೇ ಎಂಬ ಬಗ್ಗೆ ಗೊಂದಲವಿದೆ. ಆದ್ದರಿಂದ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಮಾಹಿತಿ ಕೋರಿದ್ದೇವೆ. ಅಲ್ಲದೆ ಪಾಸ್ಕಲ್ ಅವರು ಕಾನ್ಸುಲ್ ಜನರಲ್ ಕಚೇರಿಯಲ್ಲಿ ಯಾವ ದರ್ಜೆಯ ಅಧಿಕಾರಿ ಎಂಬ ಬಗ್ಗೆಯೂ ಮಾಹಿತಿ ಕೇಳಲಾಗಿದೆ.

 

ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಸೋಮವಾರ ವರದಿ ಬರುವ ಸಾಧ್ಯತೆ ಇದೆ~ ಎಂದು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ತಿಳಿಸಿದರು.`ಪಾಸ್ಕಲ್ ಅವರನ್ನು ಬೆಂಗಳೂರಿನಲ್ಲಿರುವ ಫ್ರಾನ್ಸ್‌ನ ಕಾನ್ಸುಲ್ ಜನರಲ್ ಕಚೇರಿಯ ಡೆಪ್ಯೂಟಿ ಕಾನ್ಸುಲ್ ವಿನ್ಸೆಂಟ್ ಕೌಮಾಟೆಂಟ್ ಅವರ ವಶಕ್ಕೆ ಒಪ್ಪಿಸಲಾಗಿದೆ. ಪಾಸ್ಕಲ್ ನಗರದಲ್ಲೇ ಇದ್ದು, ಅವರ ರಕ್ಷಣೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಡೆಪ್ಯೂಟಿ ಕಾನ್ಸುಲ್ ವಿನ್ಸೆಂಟ್ ಅವರೇ ಕ್ರಮ ಕೈಗೊಳ್ಳಲಿದ್ದಾರೆ~ ಎಂದು ಅವರು ಮಾಹಿತಿ ನೀಡಿದರು.ಆರೋಪದಲ್ಲಿ ಹುರಳಿಲ್ಲ: `ಮಗಳ ಮೇಲೆ ಅತ್ಯಾಚಾರ ಮಾಡಿಲ್ಲ. ಪತ್ನಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾಳೆ. ಪತ್ನಿಯ ಆರೋಪದಲ್ಲಿ ಹುರುಳಿಲ್ಲ~ ಎಂದು ಪಾಸ್ಕಲ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪ್ರಕರಣದ ತನಿಖಾಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.`ಸುಜಾ ಅವರು ಆರೋಪಿಸಿರುವಂತೆ ಅತ್ಯಾಚಾರ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಅಂದರೆ ಜೂ.13ರಂದು ಪಾಸ್ಕಲ್ ಮತ್ತು ಅವರ ಮಗಳು ಧರಿಸಿದ್ದ ಬಟ್ಟೆಗಳನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ.ಫಾಸ್ಕಲ್ ಮತ್ತು ಅವರ ಮಗಳ ವೈದ್ಯಕೀಯ ಪರೀಕ್ಷೆ ನಡೆಸಿರುವ ಬೌರಿಂಗ್ ಆಸ್ಪತ್ರೆ ವೈದ್ಯರು ಸೋಮವಾರ ವರದಿ ನೀಡುವ ಸಾಧ್ಯತೆ ಇದೆ. ಎಫ್‌ಎಸ್‌ಎಲ್ ಹಾಗೂ ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ~ ಎಂದು ಅವರು ಹೇಳಿದರು.`ಸುಜಾ ಅವರ ಮಗಳನ್ನು ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಘಟನೆ ನಡೆದು ಮೂರ‌್ನಾಲ್ಕು ದಿನಗಳಾಗಿರುವುದರಿಂದ ಅತ್ಯಾಚಾರ ನಡೆದಿದೆಯೇ ಎಂಬುದನ್ನು ಪತ್ತೆ ಮಾಡುವುದು ಕಷ್ಟಸಾಧ್ಯ~ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.ಪೊಲೀಸರ ಕಾಲಹರಣ: `ಪಾಸ್ಕಲ್ ಮುಜುರಿಯರ್ ಅವರದು ರಾಜತಾಂತ್ರಿಕ ರಕ್ಷಣೆಗೆ ಒಳಪಡುವ ಹುದ್ದೆಯಲ್ಲ. ಅವರನ್ನು ಬಂಧಿಸುವುದನ್ನು ಬಿಟ್ಟು ಪೊಲೀಸರು ಕಾಲಹರಣ ಮಾಡುತ್ತಿದ್ದಾರೆ~ ಎಂದು ಸುಜಾ ಪರ ವಕೀಲೆ ಗೀತಾ ಮೆನನ್ ಆರೋಪಿಸಿದ್ದಾರೆ.`ಅತ್ಯಾಚಾರ ನಡೆದಿದೆ ಎನ್ನಲಾದ ದಿನವೇ (ಜೂ 13) ಮಗುವನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅತ್ಯಾಚಾರ ನಡೆದಿರುವ ಬಗ್ಗೆ ಸಾಕಷ್ಟು ದಾಖಲೆಗಳು ಅದೇ ಆಸ್ಪತ್ರೆಯಲ್ಲಿ ದೊರೆತಿದ್ದರೂ, ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಏನಿತ್ತು. ಪೊಲೀಸರ ಈ ವರ್ತನೆ ಅಕ್ಷಮ್ಯ. ಕೂಡಲೇ ಫ್ರಾನ್ಸ್ ಕಾನ್ಸುಲ್ ಕಚೇರಿ ಮಧ್ಯೆಪ್ರವೇಶಿಸಿ ತಾಯಿ ಹಾಗೂ ಮಗುವಿಗೆ ನೆರವು ನೀಡಬೇಕು~ ಎಂದು ಗೀತಾ ಮೆನನ್ ಒತ್ತಾಯಿಸಿದ್ದಾರೆ. `ಕಾನೂನಿನ ಮುಂದೆ ಎಲ್ಲರೂ ಸಮಾನರು. ಆರೋಪಿ ರಾಜತಾಂತ್ರಿಕ ರಕ್ಷಣೆ ಹೊಂದಿರುವ ವ್ಯಕ್ತಿಯಾಗಿದ್ದರೂ ಕೂಡ ಆರೋಪ ಸಾಬೀತಾದರೆ ಆತನನ್ನು ಪೊಲೀಸರು ಬಂಧಿಸಬಹುದು. ಆದರೆ, ಬಂಧಿಸುವುದಕ್ಕೂ ಮುನ್ನ ಫ್ರಾನ್ಸ್ ರಾಯಭಾರ ಕಚೇರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು~ ಎಂದು ವಕೀಲರಾದ ಎಂ.ಟಿ.ನಾಣಯ್ಯ `ಪ್ರಜಾವಾಣಿ~ಗೆ ತಿಳಿಸಿದರು. 

 

ಸರ್ಕಾರಕ್ಕೆ ಪತ್ರ

`ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪತಿ ದೇಶ ಬಿಟ್ಟು ಹೋಗಲು ಅವಕಾಶ ಕೊಡಬಾರದು~ ಎಂದು ಪಾಸ್ಕಲ್ ಮುಜುರಿಯರ್ ಪತ್ನಿ ಸುಜಾ ಜೋನ್ಸ್ ಅವರು ಕೆಂದ್ರ ಗೃಹ ಸಚಿವ ಪಿ.ಚಿದಂಬರಂ ಮತ್ತು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಪತ್ರ ಬರೆದಿದ್ದಾರೆ.`ತಾನೂ ನಿರುದ್ಯೋಗಿಯಾಗಿರುವುದರಿಂದ ಫ್ರಾನ್ಸ್ ರಾಯಭಾರಿ ಕಚೇರಿಯೂ ತನಗೆ ಕಾನೂನಿನ ಹಾಗೂ ಹಣಕಾಸಿನ ನೆರವು ನೀಡಬೇಕು~ ಎಂದು ಸುಜಾ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.