ರಾಜಧಾನಿಯಲ್ಲಿ ಎನ್‌ಕೌಂಟರ್: ರೌಡಿ ಹತ್ಯೆ

7

ರಾಜಧಾನಿಯಲ್ಲಿ ಎನ್‌ಕೌಂಟರ್: ರೌಡಿ ಹತ್ಯೆ

Published:
Updated:

ಬೆಂಗಳೂರು: ರಾಮಮೂರ್ತಿನಗರದ ಕಲ್ಕೆರೆ ಸಮೀಪ ಮಂಗಳವಾರ ನಸುಕಿನಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕುಖ್ಯಾತ ರೌಡಿ ನಲ್ಲ ನಾಗೇಂದ್ರರೆಡ್ಡಿ ಅಲಿಯಾಸ್ ನಾಗಿ ರೆಡ್ಡಿ (30) ಸಾವನ್ನಪ್ಪಿದ್ದಾನೆ.ಕೊಲೆ ಮತ್ತು ದರೋಡೆ ಸೇರಿದಂತೆ 13ಕ್ಕೂ ಹೆಚ್ಚು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಾಗೇಂದ್ರರೆಡ್ಡಿಯನ್ನು ಬಂಧಿಸಲು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಹಲವು ತಿಂಗಳಿಂದ ಪ್ರಯತ್ನಿಸುತ್ತಿದ್ದರು.ಆಂಧ್ರಪ್ರದೇಶ ಮೂಲದ ನಾಗೇಂದ್ರರೆಡ್ಡಿ ಡಿಪ್ಲೊಮಾ ಓದಿದ್ದ. ವೆಬ್ ವಿನ್ಯಾಸಕನಾಗಿ          (ಡಿಸೈನರ್) ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ಅಲ್ಲಿಯೇ ತನ್ನ ಸ್ನೇಹಿತ ರಾಧಾಕೃಷ್ಣ ಚೆಪೂರ್ ಎಂಬಾತನನ್ನು ಕೊಲೆ ಮಾಡುವ ಮೂಲಕ ಅಪರಾಧ ಕೃತ್ಯಗಳನ್ನು ಆರಂಭಿಸಿದ್ದ.‘ನಾಗೇಂದ್ರರೆಡ್ಡಿ ಮಂಗಳವಾರ ಬೆಳಗಿನ ಜಾವ ರಾಮಮೂರ್ತಿನಗರ ಸಮೀಪ ಕಾರಿನಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಎಸಿಪಿ ಬಿ.ಎನ್.ನ್ಯಾಮಗೌಡ, ಇನ್‌ಸ್ಪೆಕ್ಟರ್‌ಗಳಾದ ಬಾಳೇಗೌಡ, ಅಶೋಕನ್, ಮಾಲತೇಶ್ ಮತ್ತು ಸಿಬ್ಬಂದಿ ಆತನನ್ನು ಬಂಧಿಸುವ ಸಲುವಾಗಿ ಕಲ್ಕೆರೆ ಮುಖ್ಯರಸ್ತೆಯಲ್ಲಿ ಕಾಯುತ್ತಿದ್ದರು. ಅದೇ ಮಾರ್ಗವಾಗಿ ಬಂದ ಆತನ ವಾಹನವನ್ನು ಅಡ್ಡಗಟ್ಟಿದ ಪೊಲೀಸರು ಶರಣಾಗುವಂತೆ ಸೂಚಿಸಿದರು’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.‘ಈ ಸಂದರ್ಭದಲ್ಲಿ ನಾಗೇಂದ್ರರೆಡ್ಡಿ ಪೊಲೀಸ್ ವಾಹನ ಹಾಗೂ ಸಿಬ್ಬಂದಿ ಮೇಲೆ ರಿವಾಲ್ವರ್‌ನಿಂದ ಮೂರು ಸುತ್ತು ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ಹಂತದಲ್ಲಿ ಬಾಳೇಗೌಡ ಅವರು ಪ್ರಾಣರಕ್ಷಣೆಗಾಗಿ ಆತನ ಮೇಲೆ ಪಿಸ್ತೂಲ್‌ನಿಂದ ಒಂದು ಸುತ್ತು ಗುಂಡು ಹಾರಿಸಿದರು. ಆ ಗುಂಡು ಕತ್ತಿನ ಭಾಗಕ್ಕೆ ಹೊಕ್ಕಿದ್ದರಿಂದ ಆತ ಕುಸಿದು ಬಿದ್ದ. ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ’ ಎಂದರು.ವಾರೆಂಟ್ ಜಾರಿಯಾಗಿತ್ತು: ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ‘ನಾಗೇಂದ್ರರೆಡ್ಡಿ ಬೆಂಗಳೂರು, ಮಂಡ್ಯ, ಬೆಳಗಾವಿ, ಆಂಧ್ರಪ್ರದೇಶ, ಒಡಿಶಾ ಹಾಗೂ ಇಂಗ್ಲೆಂಡ್ ಸೇರಿದಂತೆ ಹಲವೆಡೆ ಅಪರಾಧ ಕೃತ್ಯಗಳನ್ನು ಎಸಗಿದ್ದ. ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆತನನ್ನು ಫೆ.10ರೊಳಗೆ ಬಂಧಿಸಿ ಕರೆತರುವಂತೆ ನಗರದ ಮೂರನೇ ತ್ವರಿತ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು’ ಎಂದರು.‘ತಲೆಮರೆಸಿಕೊಂಡಿದ್ದ ಆತ ನಗರದ ಬಹುರಾಷ್ಟ್ರೀಯ ಬ್ಯಾಂಕ್‌ವೊಂದರಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಡಿ.ಡಿ.ರವಿ ಎಂಬ ಕೈದಿಯ ನೆರವು ಪಡೆದುಕೊಳ್ಳಲು ಉದ್ದೇಶಿಸಿದ್ದ. ಅದಕ್ಕಾಗಿ ನಾಗೇಂದ್ರರೆಡ್ಡಿ, ರವಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಬೆಂಗಳೂರಿಗೆ ಬಂದಿದ್ದ’ ಎಂದು ಬಿದರಿ ಹೇಳಿದರು. ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಪೂರ್ವ ವಿಭಾಗದ ಡಿಸಿಪಿ ಚಂದ್ರಶೇಖರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry