ರಾಜಧಾನಿಯಲ್ಲಿ ಲಾರಿ ನಿಲುಗಡೆಗೆ ಸ್ಥಳಾಭಾವ

7

ರಾಜಧಾನಿಯಲ್ಲಿ ಲಾರಿ ನಿಲುಗಡೆಗೆ ಸ್ಥಳಾಭಾವ

Published:
Updated:

ಬೆಂಗಳೂರು: ಪ್ರತಿದಿನ ಬೆಂಗಳೂರಿಗೆ ಸುಮಾರು 10,000 ಲಾರಿಗಳು ಹೊರರಾಜ್ಯಗಳಿಂದ ಆಗಮಿಸುತ್ತಿದ್ದು, ಅವುಗಳಿಗೆ ನಿಲ್ದಾಣ ಇಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗಿದೆ. ಸರ್ಕಾರ ಹಳೆ ಮದರಾಸು ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ ಹಾಗೂ ಸರ್ಜಾಪುರ ರಸ್ತೆಯಲ್ಲಿ ನಿಲ್ದಾಣ ನಿರ್ಮಿಸಬೇಕು ಎಂದು ಬೆಂಗಳೂರು ಸಿಟಿ ಲಾರಿ ಟ್ರಾನ್ಸ್‌ಪೋರ್ಟಿಂಗ್ ಏಜೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾರಿಗಳಿಗೆ ಸೂಕ್ತ ನಿಲ್ದಾಣ ಇಲ್ಲದೇ ಇರುವುದರಿಂದ ನಗರದಲ್ಲಿ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ಹೆಚ್ಚುತ್ತದೆ. ಲಾರಿ ಚಾಲಕರು ಹಾಗೂ ಕ್ಲೀನರ್‌ಗಳಿಗೆ ವಿಶ್ರಾಂತಿ ಪಡೆಯಲೂ ಆಗುತ್ತಿಲ್ಲ. ಲಾರಿಯಲ್ಲಿರುವ ವಸ್ತುಗಳ ಕಳ್ಳತನವೂ ಹೆಚ್ಚುತ್ತಿದೆ. ಆದ್ದರಿಂದ ಲಾರಿಗಳಿಗೆ ಕೂಡಲೇ ನಿಲ್ದಾಣ ಒದಗಿಸಬೇಕು ಎಂದು ಆಗ್ರಹಿಸಿದರು.ಲಾರಿ ಡ್ರೈವರ್‌ಗಳಿಗೆ ಭದ್ರತಾ ಯೋಜನೆಗಳು ಇಲ್ಲದೇ ಇರುವುದರಿಂದ ಡ್ರೈವರ್‌ಗಳೇ ಸಿಗುತ್ತಿಲ್ಲ. ಸರ್ಕಾರವು ಇವರಿಗೆ ವಿಮಾ ಯೋಜನೆಯನ್ನು ಜಾರಿಗೊಳಿಸಬೇಕು. ಸರ್ಕಾರ ಬಯಸಿದರೆ ಲಾರಿ ಮಾಲೀಕರು ಇದಕ್ಕೆ ಒಂದು ಭಾಗದ ಹಣವನ್ನು ನೀಡಲಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷ ರವಿಶಂಕರ್ ಮಾತನಾಡಿ, ‘ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಲಾರಿಗಳನ್ನು ತಡೆದು ನಿಲ್ಲಿಸಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಟೋಲ್‌ನಾಕಾಗಳ ಸಂಖ್ಯೆಯನ್ನೂ ಹೆಚ್ಚು ಮಾಡಿ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry