ಬುಧವಾರ, ಅಕ್ಟೋಬರ್ 16, 2019
28 °C

ರಾಜಧಾನಿಯ ಸಪ್ತದಿಕ್ಕುಗಳಿಗೆ ಮೆಟ್ರೊ ಜಾಲ

Published:
Updated:
ರಾಜಧಾನಿಯ ಸಪ್ತದಿಕ್ಕುಗಳಿಗೆ ಮೆಟ್ರೊ  ಜಾಲ

ಬೆಂಗಳೂರು: `ನಮ್ಮ ಮೆಟ್ರೊ~ದ ಒಂದನೇ ಮತ್ತು ಎರಡನೇ ಹಂತದ ಯೋಜನೆಗಳು ಪೂರ್ಣಗೊಂಡಾಗ ಒಟ್ಟು 114.30 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ಸಿದ್ಧವಾಗಲಿದೆ. ಇದರಿಂದ ರಾಜಧಾನಿಯ ಬಹುತೇಕ ಬಡಾವಣೆಗಳ ನಾಗರಿಕರಿಗೆ ಮೆಟ್ರೊ ರೈಲಿನ ಸುಗಮ ಪ್ರಯಾಣದ ಪ್ರಯೋಜನ ಸಿಗಲಿದೆ.ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ಪ್ರಮುಖ ರಸ್ತೆಗಳಲ್ಲಿ ಮೆಟ್ರೊ ಮಾರ್ಗಗಳು ನಿರ್ಮಾಣವಾಗಲಿವೆ. ವಿವಿಧ ಕಾರಿಡಾರ್‌ಗಳ ಮೂಲಕ ಮೆಟ್ರೊ ಮಾರ್ಗಗಳು ನಗರದ ವರ್ತುಲ (ರಿಂಗ್) ರಸ್ತೆಯನ್ನು ಏಳು ಕಡೆ ಸಂಧಿಸಲಿವೆ. ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಐದು ಕಡೆ ನೈಸ್ ಪೆರಿಫೆರಲ್ ರಸ್ತೆ ಸಮೀಪದವರೆಗೆ ಮೆಟ್ರೊ ಮಾರ್ಗಗಳು ಸಂಪರ್ಕ ಏರ್ಪಡಿಸಲಿವೆ. ಹೊರ ಊರುಗಳಿಂದ ಬರುವವರು ನಗರದ ಒಳಭಾಗದ ಬಡಾವಣೆಗಳಿಗೆ ಹೋಗಿ ಬರಲು ಮೆಟ್ರೊ ನೆಚ್ಚಿನ ಸಾರಿಗೆ ವ್ಯವಸ್ಥೆಯಾಗಲಿದೆ.ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ- ಗಳಲ್ಲಿ ಮೆಟ್ರೊ ಮಾರ್ಗಗಳ ನಿರ್ಮಾಣದಿಂದಾಗಿ ದಕ್ಷಿಣ ಭಾಗದ ಬಡಾವಣೆಗಳ ನಾಗರಿಕರು ಮೆಟ್ರೊ ಪ್ರಯಾಣದ ಗರಿಷ್ಠ ಪ್ರಯೋಜನ ಪಡೆಯಲಿದ್ದಾರೆ. ಜಯನಗರ ಪ್ರದೇಶ ಒಂದರಲ್ಲೇ ಎರಡು `ಇಂಟರ್ ಚೇಂಜ್~ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿರುವುದು ಗಮನಾರ್ಹ.ಎರಡು ಮಾರ್ಗಗಳ (ಲೈನ್) ನಡುವೆ ಸಂಪರ್ಕ ಕಲ್ಪಿಸುವ ನಿಲ್ದಾಣವನ್ನು `ಇಂಟರ್‌ಚೇಂಜ್ ನಿಲ್ದಾಣ~ ಎಂದು ಕರೆಯಲಾಗುತ್ತದೆ. ಇಂತಹ ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಾಲ್ಕು ಬೇರೆ ಬೇರೆ ದಿಕ್ಕಿನ ಕಡೆಗೆ ಹೋಗಿ ಬರಲು ಅವಕಾಶ ಇರುತ್ತದೆ.ನಗರದ ಕೇಂದ್ರ ಭಾಗದಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಹಾತ್ಮ ಗಾಂಧಿ ರಸ್ತೆಯಲ್ಲಿ `ಇಂಟರ್ ಚೇಂಜ್~ ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಇದರಿಂದ ನಗರದ ಯಾವುದೇ ಮೂಲೆಯಿಂದ ಮತ್ತೊಂದು ಮೂಲೆಗೆ ಮೆಟ್ರೊ ಸಂಪರ್ಕ ಸೌಲಭ್ಯ ಸುಲಭ ಸಾಧ್ಯವಾಗಲಿದೆ.ಕೆಂಪೇಗೌಡ ಬಸ್ ನಿಲ್ದಾಣ, ಬೈಯಪ್ಪನಹಳ್ಳಿ, ಪೀಣ್ಯ- ದಾಸರಹಳ್ಳಿ ಬಸ್ ನಿಲ್ದಾಣಗಳ ಮೂಲಕವೇ ಮೆಟ್ರೊ ಮಾರ್ಗ ಹಾದು ಹೋಗುವುದರಿಂದ ಪರ ಸ್ಥಳಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ದೊರಕಲಿದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸಮೀಪದಲ್ಲೇ ದೀಪಾಂಜಲಿ ನಗರದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗುತ್ತಿದೆ. ಇದಲ್ಲದೇ ವಿಜಯನಗರ, ಕೆಂಗೇರಿ, ಬನಶಂಕರಿ, ಯಶವಂತಪುರ, ವೈಟ್‌ಫೀಲ್ಡ್-ಗಳಲ್ಲಿರುವ `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ~ಯ (ಬಿಎಂಟಿಸಿ) `ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರ~ಗಳ (ಟಿಟಿಎಂಸಿ) ಪಕ್ಕದಲ್ಲೇ ಮೆಟ್ರೊ ಮಾರ್ಗಗಳು ಸಾಗಲಿವೆ.ನಗರ ರೈಲು ನಿಲ್ದಾಣ, ದಂಡುಪ್ರದೇಶ, ಯಶವಂತಪುರ, ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳ ಬಳಿಯೇ ಮೆಟ್ರೊ ನಿಲ್ದಾಣಗಳು ಅಸ್ತಿತ್ವಕ್ಕೆ ಬರಲಿವೆ. ಇದರೊಂದಿಗೆ ರೈಲು, ರಾಜ್ಯ ಸಾರಿಗೆ, ಮಹಾನಗರ ಸಾರಿಗೆ ಹಾಗೂ ಮೆಟ್ರೊ ಸಾರಿಗೆ ವ್ಯವಸ್ಥೆಗಳ ಮಹಾ ಸಂಗಮ ಏರ್ಪಡಲಿದೆ.ಸದ್ಯ ಮಹಾನಗರದಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿ ದಿನ 45 ಲಕ್ಷ ಮಂದಿ ಸಂಚರಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳು, ಕಾರುಗಳು ಮೊದಲಾದ ವೈಯಕ್ತಿಕ ವಾಹನಗಳನ್ನು ಬಳಸುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಮೆಟ್ರೊದ ಎರಡೂ ಹಂತಗಳು ಪೂರ್ಣಗೊಂಡ ಮೇಲೆ ಬಸ್ ಮತ್ತು ವೈಯಕ್ತಿಕ ವಾಹನಗಳನ್ನು ಬಳಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.ಒಂದನೇ ಹಂತದ ಯೋಜನೆಯ ಎಲ್ಲ ಕಾಮಗಾರಿಗಳು 2014ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆಗ ಮೆಟ್ರೊದಲ್ಲಿ ನಿತ್ಯ 13 ಲಕ್ಷ ಮಂದಿ ಓಡಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಎರಡನೇ ಹಂತವನ್ನು 2017ರ ವೇಳೆಗೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಆ ಹೊತ್ತಿಗೆ ಮೆಟ್ರೊದಲ್ಲಿ ನಿತ್ಯ ಓಡಾಡುವರ ಸಂಖ್ಯೆ 16 ಲಕ್ಷವನ್ನು ಮೀರಲಿದೆ. 2021ರ ವೇಳೆಗೆ ಪ್ರತಿದಿನ ಮೆಟ್ರೊದಲ್ಲಿ ಪ್ರಯಾಣಿಸುವವರ ಸಂಖ್ಯೆ 19 ಲಕ್ಷ ಆಗಲಿದೆ ಎಂದು ಅಂದಾಜಿಸಲಾಗಿದೆ.

Post Comments (+)