ರಾಜಧಾನಿ ಸುತ್ತುವರೆದ ವಿರೋಧಿ ಗುಂಪು: ಗಡಾಫಿ ನಿಷ್ಠರ ಜತೆ ಕಾಳಗಕ್ಕೆ ಸಜ್ಜು

7

ರಾಜಧಾನಿ ಸುತ್ತುವರೆದ ವಿರೋಧಿ ಗುಂಪು: ಗಡಾಫಿ ನಿಷ್ಠರ ಜತೆ ಕಾಳಗಕ್ಕೆ ಸಜ್ಜು

Published:
Updated:
ರಾಜಧಾನಿ ಸುತ್ತುವರೆದ ವಿರೋಧಿ ಗುಂಪು: ಗಡಾಫಿ ನಿಷ್ಠರ ಜತೆ ಕಾಳಗಕ್ಕೆ ಸಜ್ಜು

ಕೈರೋ/ವಾಷಿಂಗ್ಟನ್ (ಪಿಟಿಐ): ಅಧ್ಯಕ್ಷ ಮುಅಮ್ಮರ್ ಗಡಾಫಿ ಪದಚ್ಯುತಿಗೆ ಆಗ್ರಹಿಸುತ್ತಿರುವ ವಿರೋಧಿ ಗುಂಪಿನವರು ರಾಜಧಾನಿ ಟ್ರಿಪೊಲಿಯನ್ನು ಸುತ್ತುವರೆದಿದ್ದು, ಗಡಾಫಿಗೆ ನಿಷ್ಠರಾಗಿರುವ ಸೇನೆಯ ಜತೆ ಕಾಳಗಕ್ಕೆ ಸಜ್ಜಾಗಿದ್ದಾರೆ.ಈ ನಡುವೆ ಇನ್ನೂ ಹೆಚ್ಚಿನ ನಾಗರಿಕ ಹತ್ಯೆಯನ್ನು ತಡೆಯುವ ಸಲುವಾಗಿ ಅಮೆರಿಕ ಮತ್ತು ಯುರೋಪ್‌ನ ಯುದ್ಧ ವಿಮಾನಗಳು ರಾಜಧಾನಿ ಮೇಲೆ ವಿಮಾನ ಹಾರಾಟ ಆರಂಭಿಸಿದ್ದು, ಈ ಪ್ರದೇಶವನ್ನು ‘ಹಾರಾಟ ನಿಷೇಧಿತ ವಲಯ’ವನ್ನಾಗಿ ಮಾಡಲು ಯತ್ನಿಸಿವೆ.ಟ್ರಿಪೊಲಿಯ ಪೂರ್ವ ಭಾಗದ ಮೂರು ಪ್ರದೇಶಗಳಲ್ಲಿ ವಿರೋಧಿ ಗುಂಪಿನವರು ನುಗ್ಗಿದ್ದಾರೆ. ರಾಜಧಾನಿಗೆ ಕೇವಲ ಐವತ್ತು ಕಿ.ಮೀ. ದೂರದಲ್ಲಿರುವ ಅಜ್-ಜ್ವಾಯ್‌ಹ್ ನಗರವನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಅಲ್- ಜರೀರಾ ಟಿವಿ ವರದಿ ಮಾಡಿದೆ.ಲಿಬಿಯಾದಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಲು ಒಬಾಮ ಆಡಳಿತ ಯೂರೋಪ್ ಮತ್ತು ಇತರ ದೇಶಗಳೊಂದಿಗೆ ಸತತ ಸಂಪರ್ಕದಲ್ಲಿದೆ.ಅಲ್ಲದೇ ಅಮೆರಿಕ ತನ್ನ ಸೇನೆಯನ್ನು ಟ್ರಿಪೊಲಿಯಲ್ಲಿ ನಿಯೋಜನೆ ಮಾಡಿ ಗಡಾಫಿ ಟಿವಿ ಮೂಲಕ ಭಾಷಣ ಮಾಡುವುದನ್ನು ತಡೆಯಲು ಚಿಂತನೆ ನಡೆಸಿದೆ.ಬ್ರಿಟನ್, ಜರ್ಮನಿ ರಹಸ್ಯ ವಿಮಾನ ಕಾರ್ಯಾಚರಣೆ: (ಲಂಡನ್ ವರದಿ): ಗಡಾಫಿ ನಿರಂಕುಶ ಆಡಳಿತದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಬಿಗಿ ನಿಲುವು ತಾಳುತ್ತಿರುವ ಬೆನ್ನಲ್ಲೆ, ಬ್ರಿಟಿಷ್ ಮತ್ತು ಜರ್ಮನಿಯ ಸೇನಾ ವಿಮಾನಗಳು ಲಿಬಿಯಾದ ಮರುಭೂಮಿಯತ್ತ ರಹಸ್ಯವಾಗಿ ತೆರಳಿದ್ದು, ಅಲ್ಲಿ ಸಿಕ್ಕಿಹಾಕಿಕೊಂಡಿರುವ ನೂರಾರು ನಾಗರಿಕರ ರಕ್ಷಣೆಗೆ ಮುಂದಾಗಿವೆ.ಬ್ರಿಟನ್ ಮತ್ತು ಜರ್ಮನಿಯ ಈ ಸೇನಾ ವಿಮಾನಗಳು ಲಿಬಿಯಾ ಮರುಭೂಮಿಯ ದೂರ ದೂರದ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರ ರಕ್ಷಣೆಯನ್ನು ಮಾಡುತ್ತಿವೆ ಎಂದು ‘ದಿ ಸಂಡೆ ಟೆಲಿಗ್ರಾಫ್’ ವರದಿ ಮಾಡಿದೆ.ಲಕ್ಷ ಮಂದಿ ಪಲಾಯನ: ಜಿನಿವಾ (ಡಿಪಿಎ):  ಲಿಬಿಯಾದಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣದ ಪರಿಣಾಮ ಕಳೆದ ಒಂದು ವಾರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ ಯುಎನ್‌ಎಚ್‌ಸಿಆರ್ ಅಂದಾಜು ಮಾಡಿದೆ.ಪಲಾಯನ ಮಾಡಿರುವ ಹೆಚ್ಚಿನ ನಿರಾಶ್ರಿತರು ನೆರೆಯ ಟ್ಯುನಿಶಿಯಾ ಮತ್ತು ಈಜಿಪ್ಟ್‌ಗಳಿಗೆ ತೆರಳಿದ್ದಾರೆ. ಈ ದೇಶಗಳಲ್ಲಿಯೂ ನಿರಂಕುಶ ಆಡಳಿತದ ವಿರುದ್ಧ ದಂಗೆ ನಡೆದು ಈಗ ಶಾಂತಿಯ ವಾತಾವರಣಕ್ಕೆ ಮರುಳುತ್ತಿವೆ. ಟ್ಯುನಿಷಿಯಾ ಮತ್ತು ಈಜಿಪ್ಟ್‌ಗೆ ಪಲಾಯನ ಮಾಡಿರುವ ನಿರಾಶ್ರಿತರಿಗೆ ಮಾನವೀಯ ನೆಲೆಯಲ್ಲಿ ಎಲ್ಲಾ ರೀತಿಯ ನೆರವು ಒದಗಿಸಲು ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿರುವುದಾಗಿಯೂ ವಿಶ್ವಸಂಸ್ಥೆಯ ಹೈಕಮಿಷನರ್ ಆಂಟೋನಿಯೊ ಗುಟೆರರ್ ತಿಳಿಸಿದ್ದಾರೆ.ಐವತ್ತು ಸಾವಿರ ನಿರಾಶ್ರಿತರು ಟ್ಯುನಿಷಿಯಾ ಗಡಿ ಒಳಗೆ ಬಂದಿದ್ದರೆ, ಸುಮಾರು 55 ಸಾವಿರ ಜನರು ಈಜಿಪ್ಟ್‌ಗೆ ತೆರಳಿದ್ದಾರೆ. ಇವರಲ್ಲಿ ಟ್ಯುನಿಷಿಯ, ಈಜಿಪ್ಟ್, ಲಿಬಿಯಾ. ಚೀನಾ ಮತ್ತು ಇತರ ದೇಶಗಳ ನಿರಾಶ್ರಿತರು ಸೇರಿದ್ದಾರೆ ಎಂದು ಯುಎನ್‌ಎಚ್‌ಸಿಆರ್ ಅಂದಾಜು ಮಾಡಿದೆ.ಕೆನಡಾ ನಿರ್ಬಂಧ: ಲಿಬಿಯಾ ಮೇಲೆ ವಿಶ್ವಸಂಸ್ಥೆ ನಿರ್ಬಂಧ ಹೇರಿದ ಬೆನ್ನಲ್ಲೇ ಕೆನಡಾ ಸಹ ನಿರ್ಬಂಧ ವಿಧಿಸಿದೆ. ಜತೆಗೆ ಕೆನಡಾ ಬ್ಯಾಂಕ್‌ಗಳಲ್ಲಿ ಮೊಅಮ್ಮರ್ ಗಡಾಫಿ ಮತ್ತು ಕುಟುಂಬದವರು ಹೊಂದಿರುವ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದು, ಹಣದ ವ್ಯವಹಾರದ ಮೇಲೆ ನಿರ್ಬಂಧ ವಿಸ್ತರಿಸಲಾಗಿದೆ. ಇದರಿಂದಾಗಿ ಲಿಬಿಯಾದಲ್ಲಿ ಹಲವಾರು ಕಾಮಗಾರಿಗಳನ್ನು ನಡೆಸುತ್ತಿರುವ ಕೆನಡಾದ ಕಂಪೆನಿ ಎಸ್‌ಎನ್‌ಸಿ-ಲಾವಲಿನ್ ಸಂಸ್ಥೆಯ ವ್ಯವಹಾರಕ್ಕೆ ಭಾರಿ ಹಿನ್ನೆಡೆಯಾಗಿದೆ.ಗಡಾಫಿ ರಾಜೀನಾಮೆಗೆ ರಾಯಭಾರಿ ಆಗ್ರಹ:  ಜಗತ್ತಿನ ಹಲವೆಡೆ ಇರುವ  ಲಿಬಿಯಾದ ರಾಜತಾಂತ್ರಿಕರು ಅಧ್ಯಕ್ಷ ಗಡಾಫಿ ಆಡಳಿತ ಕೊನೆಗೊಳ್ಳಬೇಕು ಎನ್ನುವ ಒತ್ತಾಯ ಮಾಡಿರುವ ಜತೆಗೆ, ದಕ್ಷಿಣ ಆಫ್ರಿಕಾದಲ್ಲಿರುವ ಲಿಬಿಯಾ ಪ್ರತಿನಿಧಿ ಅಬ್ದುಲ್ಲಾ ಅಲ್‌ಜುಬೇದಿ ಸಹ ಗಡಾಫಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗಡಾಫಿ ಮತ್ತು ಸಂಬಂಧಿಕರ ಮೇಲೆ ಮೇಲೆ ಆರ್ಥಿಕ, ಶಸ್ತ್ರಾಸ್ತ್ರ ಮತ್ತು ಇತರ ನಿರ್ಬಂಧ ಹೇರಿರುವುದನ್ನು ವಿಶ್ವಸಂಸ್ಥೆಯಲ್ಲಿರುವ ಲಿಬಿಯಾ ದೂತವರ್ಗ ಸಹ ಬೆಂಬಲಿಸಿದೆ.ಭಾರತೀಯರ ರಕ್ಷಣೆ

ಮುಂಬೈ/ನವದೆಹಲಿ (ಐಎಎನ್‌ಎಸ್): ಲಿಬಿಯಾದಿಂದ ಭಾರತೀಯರ ಮೂರನೇ ತಂಡದಲ್ಲಿ 68 ಮಂದಿ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಗಲ್ಫ್ ವಿಮಾನದಲ್ಲಿ ಇವರೆಲ್ಲಾ ಸೋಮವಾರ ಬೆಳಿಗ್ಗೆ ಮುಂಬೈಗೆ ಆಗಮಿಸಿದ್ದು, ಇನ್ನೂ 600 ಮಂದಿ ಸೋಮವಾರ ತಡ ರಾತ್ರಿ ವೇಳೆಗೆ ಏರ್ ಇಂಡಿಯಾದ ಎರಡು ವಿಶೇಷ ವಿಮಾನಗಳಲ್ಲಿ ಹಿಂತಿರುಗಲಿದ್ದಾರೆ.ವಿಮಾನ ಇಳಿಸಲು ಅನುಮತಿಗೆ ಭಾರತದ ಮನವಿ:  ಆಡಳಿತ ವಿರೋಧಿ ಪ್ರತಿಭಟನೆಯಿಂದಾಗಿ ಲಿಬಿಯಾದ ಸೆಹ್ಬಾದಲ್ಲಿ ಸಿಲುಕಿರುವ ಸುಮಾರು ಒಂದು ಸಾವಿರ ಮಂದಿ ಭಾರತೀಯರನ್ನು ಕರೆ ತರಲು ವಿಮಾನ ಇಳಿಯುವ ಹಕ್ಕು ನೀಡಬೇಕೆಂದು ಕೋರಿ ಕೇಂದ್ರ ಸರ್ಕಾರ ಸೋಮವಾರ ಕೋರಿದೆ.‘ಸೆಹ್ಬಾದಲ್ಲಿ ವಿಮಾನಗಳು ಇಳಿಯಲು ಅನುಮತಿ ನೀಡುವಂತೆ ನಮ್ಮ ರಾಯಭಾರಿ ಲಿಬಿಯಾ ಸರ್ಕಾರವನ್ನು ಕೋರಿದ್ದಾರೆ’ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಭಾರತೀಯರನ್ನು ಕರೆತರಲು ವಿಮಾನಯಾನವನ್ನು ಮಾತ್ರ ಅವಲಂಬಿಸಬೇಕಿದೆ ರೈಲು ಸಂಪರ್ಕ ಜಾಲವಿಲ್ಲ,  ರಸ್ತೆ ಪ್ರಯಾಣ ಸುರಕ್ಷಿತವಲ್ಲವೆಂದು ಪರಿಗಣಿಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry