ರಾಜನಗರದಲ್ಲಿ ಮೆರೆದ ದ್ವಿಶತಕದ ಜೋಡಿ

7
ರಣಜಿ ಟ್ರೋಫಿ: ಅಮಿತ್-ಜಯಂತ್ ಅಬ್ಬರಕ್ಕೆ ಸುಸ್ತಾದ ಆತಿಥೇಯರು

ರಾಜನಗರದಲ್ಲಿ ಮೆರೆದ ದ್ವಿಶತಕದ ಜೋಡಿ

Published:
Updated:

ಹುಬ್ಬಳ್ಳಿ: ನೃಪತುಂಗ ಬೆಟ್ಟದಷ್ಟೇ ಗಟ್ಟಿಯಾಗಿ ನಿಂತು `ದ್ವಿಶತಕ'ಗಳನ್ನು ದಾಖಲಿಸಿದ  ಹರಿಯಾಣ ತಂಡದ ನಾಯಕ ಅಮಿತ್ ಮಿಶ್ರಾ ಮತ್ತು ಬಾಲಂಗೋಚಿ ಬ್ಯಾಟ್ಸ್‌ಮನ್ ಜಯಂತ್ ಯಾದವ್ ಆತಿಥೇಯ ಕರ್ನಾಟಕದ ಮುಂದೆ ರನ್ನುಗಳ ಗುಡ್ಡವನ್ನು ನಿರ್ಮಿಸಿದ್ದಾರೆ!ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹರಿಯಾಣ ತಂಡವು  176,4 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 587 ರನ್ ಗಳಿಸಲು, ಅಮಿತ್ ಮತ್ತು ಜಯಂತ್ ಯಾದವ್  8ನೇ ವಿಕೆಟ್‌ಗೆ 392 ರನ್ನುಗಳ ದಾಖಲೆಯ ಜೊತೆಯಾಟ ಕಾರಣವಾಯಿತು. 2002-03ನೇ ಸಾಲಿನಲ್ಲಿ ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ತಮಿಳುನಾಡಿನ ಎಂ.ಆರ್. ಶ್ರೀನಿವಾಸನ್ ಮತ್ತು ಶ್ರೀರಾಮ್ ಎಂಟನೇ ವಿಕೆಟ್‌ಗೆ ಜೊತೆಯಾಟದಲ್ಲಿ ಸೇರಿಸಿದ್ದ 268 ರನ್ನುಗಳ ದಾಖಲೆಯನ್ನು ಅಳಿಸಿ ಹಾಕಿದರು. ಅಮಿತ್ ಮಿಶ್ರಾ (ಔಟಾಗದೇ 202, 374ಎಸೆತ, 21ಬೌಂಡರಿ, 567ನಿಮಿಷ) ಮತ್ತು ಜಯಂತ್  ಯಾದವ್  (211; 451ನಿಮಿಷ, 367ಎಸೆತಗಳು, 26ಬೌಂಡರಿ) ರಣಜಿ ಪಂದ್ಯವೊಂದರಲ್ಲಿ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಬ್ಬರು ದ್ವಿಶತಕ ಗಳಿಸಿದ್ದು ಇದೇ ಮೊದಲು. ಶನಿವಾರ ಕರ್ನಾಟಕದ ಬೌಲಿಂಗ್ ದಾಳಿಗೆ ಸಿಲುಕಿ ಸಂಕಷ್ಟದಲ್ಲಿದ್ದ ಹರಿಯಾಣ ತಂಡಕ್ಕೆ (167ಕ್ಕೆ7) ಏಳನೇ ಕ್ರಮಾಂಕದ ಬ್ಯಾಟ್ಸ್‌ಮನ್ ಅಮಿತ್ ಮತ್ತು 9ನೇ ಕ್ರಮಾಂಕದ ಜಯಂತ್ ಆಸರೆಯಾಗಿದ್ದರು. ಮೊದಲ ದಿನ 293 ರನ್‌ಗಳವರೆಗೆ ಸ್ಕೋರ್ ಬೆಳೆಯಲು ಕಾರಣರಾಗಿದ್ದ ಈ ಜೋಡಿಯು ಎರಡನೇ ದಿನ ಮಧ್ಯಾಹ್ನ 3.51ರವರೆಗೆ ಕರ್ನಾಟಕದ ಬೌಲರ್‌ಗಳ ಬೆವರಿಳಿಸಿದರು. ದಿನದಾಟಕ್ಕೆ ಮೂರು ಓವರ್‌ಗಳು ಬಾಕಿಯಿದ್ದಾಗ ದ್ವಿಶತಕ ಪೂರೈಸಿದ ಅಮಿತ್ ಮಿಶ್ರಾ ಇನಿಂಗ್ಸ್ ಡಿಕ್ಲೆರ್ ಘೋಷಿಸಿದರು. ನಂತರ ಒಂದು ಓವರ್ ಆಡಿದ ಕರ್ನಾಟಕ ವಿಕೆಟ್ ನಷ್ಟವಿಲ್ಲದೇ 11 ರನ್ ಗಳಿಸಿದೆ. ಕೆ.ಎಲ್. ರಾಹುಲ್ (ಬ್ಯಾಟಿಂಗ್ 7; 4ನಿ, 2ಎಸೆತ, 1ಬೌಂಡರಿ) ಮತ್ತು   ರಾಬಿನ್ ಉತ್ತಪ್ಪ (ಬ್ಯಾಟಿಂಗ್ 4; 4ನಿ, 1ಬೌಂಡರಿ) ಕ್ರೀಸ್‌ನಲ್ಲಿದ್ದಾರೆ.ಡಬಲ್ ಧಮಾಕಾ: ರಜೆ ದಿನದಂದು ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಆಟವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಮೂರು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಅಮಿತ್ ಮತ್ತು ಜಯಂತ್ ಆಟಕ್ಕೆ ತಲೆದೂಗಿದರು. ಬೆಳಿಗ್ಗೆ ಅವಧಿಯಲ್ಲಿಯೇ ಹರಿಯಾಣದ ಮೂರು ವಿಕೆಟ್ ಕಬಳಿಸಿ, ತಮ್ಮ ಇನಿಂಗ್ಸ್ ಆರಂಭಿಸುವ ಯೋಜನೆಯಲ್ಲಿದ್ದ ಕರ್ನಾಟಕ ತಂಡದ ನಾಯಕ ಬಿನ್ನಿ ಇಡೀ ದಿನ ತಲೆ ಮೇಲೆ ಕೈಹೊತ್ತು ಹತಾಶರಾಗಿ ನಿಲ್ಲುವಂತಾಯಿತು. ಸುಡುಬಿಸಿಲಿನಲ್ಲಿ ಬೆವರು ಸುರಿಸಿದ ಕರ್ನಾಟಕದ ಹತ್ತು ಬೌಲರ್‌ಗಳ ತಂತ್ರಗಳಿಗೂ ಅಮಿತ್ ಮತ್ತು ಜಯಂತ್ ಬಗ್ಗಲಿಲ್ಲ.  ಬೌನ್ಸ್‌ರ್‌ಗಳನ್ನು ಎಸೆಯುವತ್ತಲೇ ಹೆಚ್ಚು ಗಮನ ನೀಡಿದ ಆತಿಥೇಯ ಮಧ್ಯಮವೇಗಿಗಳು ತಕ್ಕ ಶಿಕ್ಷೆ ಅನುಭವಿಸಿದರು. ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಆಡಿದ ಅತ್ಯುತ್ತಮ ಹುಕ್ ಮತ್ತು ಪುಲ್‌ಗಳಿಗೆ ಸಿಕ್ಕ ಬೌನ್ಸ್‌ರ್‌ಗಳು ಕ್ಷೇತ್ರರಕ್ಷಕರ ತಲೆ ಮೇಲಿಂದ ಹಾಯ್ದು ಬೌಂಡರಿ ಗೆರೆ ದಾಟಿದವು. ಮಧ್ಯಮ ವೇಗಿಗಳ ಎಸೆತಗಳನ್ನು ಬ್ಯಾಕ್‌ಫುಟ್‌ನಲ್ಲಿ ಆಡಿದ ಇಬ್ಬರೂ, ಸ್ಪಿನ್ ಬೌಲಿಂಗ್‌ಗೂ ದಿಟ್ಟ ಉತ್ತರವನ್ನೇ ನೀಡಿದರು.ಆರ್. ವಿನಯಕುಮಾರ್ ಮತ್ತು ಅಭಿಮನ್ಯು ಮಿಥುನ್ ಅವರ ಅನುಪಸ್ಥಿತಿಯು ಪ್ರತಿಯೊಂದು ಓವರ್‌ಗೂ ಕಾಡಿತ್ತು. ಶನಿವಾರ 81 ರನ್ ಳಿಸಿದ್ದ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಕ್ಯಾಚ್ ಬಿಟ್ಟಿದ್ದರಿಂದ ಜೀವದಾನ ಪಡೆದಿದ್ದ ಅಮಿತ್ ಮಿಶ್ರಾ ಭಾನುವಾರ 10ನೇ ಓವರ್ ಬೌಲಿಂಗ್ ಮಾಡಿದ ಸ್ಟುವರ್ಟ್ ಬಿನ್ನಿಯ  ಶಾಟ್‌ಪಿಚ್‌ಎಸೆತವನ್ನು ಲಾಂಗ್ ಆನ್ ಬೌಂಡರಿಗೆ ಅಟ್ಟಿದ ಅಮಿತ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ (100; 158ಎಸೆತ, 12ಬೌಂಡರಿ) ದಾಖಲಿಸಿ ಸಂಭ್ರಮಿಸಿದರು.ಇದರ ನಂತರ ಇನ್ನೊಂದು ಬದಿಯಲ್ಲಿದ್ದ ಜಯಂತ್ ರನ್ ಗಳಿಕೆಯ ಪೈಪೋಟಿಗೆ ಬಿದ್ದರು. ಇನಿಂಗ್ಸ್ 108ನೇ ಓವರ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು, ಎಸ್.ಎಲ್. ಅಕ್ಷಯ್ ಎಸೆತವನ್ನು ಬೌಂಡರಿಗೆ ಕಳಿಸುವ ಮೂಲಕ ಪೂರೈಸಿಕೊಂಡರು. ನಂತರವೂ ಇಬ್ಬರ ಓಟ ನಿಲ್ಲಲಿಲ್ಲ. ಊಟದ ವಿರಾಮದ ವೇಳೆಗೆ ತಂಡದ ಮೊತ್ತ 417ಕ್ಕೆ ತಲುಪುವಂತೆ ನೋಡಿಕೊಂಡರು.ಊಟಕ್ಕೆ ಬಂದ ಅಮಿತ್‌ಗೆ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ಖುಷಿ ಸುದ್ದಿ ಸಿಕ್ಕಿದ್ದೇ ಮತ್ತಷ್ಟು ಉತ್ತೇಜಿತರಾದರು. ನಂತರದ ಅವಧಿಯಲ್ಲಿ ಅಮಿತ್ ವರ್ಮಾ ಎಸೆತವನ್ನು ಸಿಕ್ಸರ್‌ಗೆ ಎತ್ತಿದರು. ಆದರೆ ಅವರಿಗಿಂತ ಹೆಚ್ಚಿನ ವೇಗದಲ್ಲಿ ಜಯಂತ್ ರನ್ ಗಳಿಸುತ್ತಿದ್ದರು. ಅಮಿತ್ 140 ರನ್‌ನಲ್ಲಿದ್ದಾಗಲೇ ಜಯಂತ್ ಶತಕೋತ್ತರ ಅರ್ಧಶತಕ ದಾಖಲಿಸಿದರು.ಸುಡುಬಿಸಿಲಿನಲ್ಲಿ ಬೆಳಿಗ್ಗೆಯಿಂದ ಫೀಲ್ಡಿಂಗ್ ಮಾಡಿ ಸುಸ್ತಾಗಿದ್ದ  ಕರ್ನಾಟಕದ ಆಟಗಾರರು ಕೆಲವು ಬಾರಿ ಕಳಪೆ ಪ್ರದರ್ಶನ ನೀಡಿದರು. 169 ರನ್ ಗಳಿಸಿದ್ದ ಜಯಂತ್ ಕೊಟ್ಟಿದ್ದ ಕ್ಯಾಚ್ ಅನ್ನು ಮಿಡ್‌ಆಫ್‌ನಲ್ಲಿ  ಎಚ್.ಎಸ್. ಶರತ್ ನೆಲಕ್ಕೆ ಚೆಲ್ಲಿದ್ದು ತುಟ್ಟಿಯಾಯಿತು. ಇವರಿಬ್ಬರ ಅಬ್ಬರದ ಆಟಕ್ಕೆ ಚಹಾವಿರಾಮದ ವೇಳೆಗೆ ತಂಡದ ಮೊತ್ತ 529ಕ್ಕೆ ತಲುಪಿತು. ಶರತ್ ಬೌಲಿಂಗ್ ಮಾಡಿದ 162ನೇ ಓವರ್‌ನಲ್ಲಿ ಥರ್ಡ್ ಮ್ಯಾನ್‌ಗೆ ಬೌಂಡರಿ ಬಾರಿಸಿದ ಜಯಂತ್ ದ್ವಿಶತಕ  ಗಳಿಸಿ ವಿಜಯದ ಕೇಕೆ ಹಾಕಿದರು.ತಮ್ಮ ದ್ವಿಶತಕಕ್ಕೆ ಇನ್ನೂ ಹನ್ನೊಂದು ರನ್ ಸೇರಿಸಿದ್ದ ಜಯಂತ್ ರೋನಿತ್ ಮೋರೆ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆಗ ಮಾತ್ರ ಬಿನ್ನಿ ಮುಖದ ಮೇಲೆ ಮಂದಹಾಸ ಸುಳಿಯಿತು. ನಂತರ ಮೋಹಿತ್ ಶರ್ಮಾ 12 ರನ್ ಗಳಿಸಿ ವರ್ಮಾ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಗೌತಮ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.  ನಂತರ ಮೋರೆ ಓವರ್‌ನಲ್ಲಿ ಬೌಂಡರಿ ಗಳಿಸುವ ಮೂಲಕ ದ್ವಿಶತಕದ ಗಡಿ ದಾಟಿದ ಅಮಿತ್ ಡಿಕ್ಲೇರ್ ಘೋಷಿಸಿದರು.ಸ್ಕೊರ್ ವಿವರ 

ಹರಿಯಾಣ ಪ್ರಥಮ ಇನಿಂಗ್ಸ್: 176.4 ಓವರ್‌ಗಳಲ್ಲಿ 9 ವಿಕೆಟ್‌ಗೆ 587 ಡಿಕ್ಲೇರ್ಡ್

ಅಮಿತ್ ಮಿಶ್ರಾ ಔಟಾಗದೇ  202ಜಯಂತ್ ಯಾದವ್ ಎಲ್‌ಬಿಡಬ್ಲ್ಯು ಬಿ ರೋನಿತ್ ಮೋರೆ  211ಮೋಹಿತ್ ಶರ್ಮಾ ಸಿ ಗೌತಮ್ ಬಿ ಅಮಿತ್ ವರ್ಮಾ  12ಹರ್ಷಲ್ ಪಟೇಲ್  ಔಟಾಗದೇ  00ಇತರೆ: 33 (ಲೆಗ್‌ಬೈ 10, ಬೈ6, ನೋಬಾಲ್ 6, ವೈಡ್ 11)ವಿಕೆಟ್ ಪತನ: 8-560 (168.2, ಜಯಂತ್).ಬೌಲಿಂಗ್: ಎಚ್.ಎಸ್. ಶರತ್ 30-6-78-2 (ವೈಡ್ 4), ಎಸ್.ಎಲ್. ಅಕ್ಷಯ್ 28-2-100-3 (ನೋಬಾಲ್ 1), ರೋನಿತ್ ಮೋರೆ 27.4-1-106-2 (ವೈಡ್ 1), ಸ್ಟುವರ್ಟ್ ಬಿನ್ನಿ 24-6-78-0 (ವೈಡ್4, ನೋಬಾಲ್ 1), ಕೆ.ಪಿ. ಅಪ್ಪಣ್ಣ 41-3-130-1 (ವೈಡ್ 2), ಅಮಿತ್ ವರ್ಮಾ 16-3-55-1 (ನೋಬಾಲ್ 4), ಮನೀಶ್ ಪಾಂಡೆ 2-1-2-0, ಕೆ.ಎಲ್. ರಾಹುಲ್ 5-0-11-0, ಕುನಾಲ್ ಕಪೂರ್ 1-0-2-0, ರಾಬಿನ್ ಉತ್ತಪ್ಪ 2-0-9-0.ಕರ್ನಾಟಕ ಪ್ರಥಮ ಇನಿಂಗ್ಸ್ 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 11ಕೆ.ಎಲ್. ರಾಹುಲ್  07ರಾಬಿನ್ ಉತ್ತಪ್ಪ  04ಬೌಲಿಂಗ್ ವಿವರ: ಮೋಹಿತ್ ಶರ್ಮಾ 1-0-11-0

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry