ಭಾನುವಾರ, ಮಾರ್ಚ್ 7, 2021
19 °C

ರಾಜನ್ ‘ಸಹಸ್ರಚಂದ್ರ ದರ್ಶನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜನ್ ‘ಸಹಸ್ರಚಂದ್ರ ದರ್ಶನ’

ಬೆಂಗಳೂರಿನ ಸಂಗೀತ ಪ್ರೇಮಿಗಳಿಗೆ ಭಾನುವಾರದ ಸಂಜೆ (ಮೇ 31) ಅಕ್ಷರಶಃ ರಸಸಂಜೆಯೇ ಆಗಿತ್ತು. ದಯಾನಂದ್ ಸಾಗರ್ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ರಾಜನ್ ಸಹಸ್ರಚಂದ್ರ ದರ್ಶನ’ ಕಾರ್ಯಕ್ರಮವು ಸಂಗೀತ ರಸಧಾರೆಯ ಈ ಸಂತಸಕ್ಕೆ ವೇದಿಕೆಯಾಗಿತ್ತು. ಸಂಗೀತ ನಿರ್ದೇಶಕ ರಾಜನ್ ಅವರಿಗೆ ಎಂಬತ್ತು ವರ್ಷಗಳು ತುಂಬಿದ ಪ್ರಯುಕ್ತ ಈ ಸಮಾರಂಭವನ್ನು ಏರ್ಪಡಿಸಲಾಗಿತ್ತು.ರಾಜನ್ ಅವರಿಗೆ ಗುರುವಂದನೆ ಸಲ್ಲಿಸಿದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ‘ನಾನು ಸಹ 1969ರಿಂದಲೇ ರಾಜನ್‌ರ ಶಿಷ್ಯ. ಇವರ ಸಂಗೀತದಲ್ಲಿ ಹೆಚ್ಚಾಗಿ ಹಾಡುವ ಅವಕಾಶ ಪಡೆದಿದ್ದು ನಾನೇ. ನನ್ನ ಹೆಮ್ಮೆ ಸಂಖ್ಯೆಗಷ್ಟೇ ಸೀಮಿತವಲ್ಲ; ಅವರಿಂದ ಸ್ವರ ಭಿಕ್ಷೆಯನ್ನೇ ಪಡೆದಿದ್ದೇನೆ.ಇಂದಿಗೂ ನಾನು ಸಂಗೀತ ಕಾರ್ಯಕ್ರಮ ನೀಡಿದರೆ ಅದರಲ್ಲಿ ಕಾಲು ಭಾಗ ರಾಜನ್ ನಾಗೇಂದ್ರ ಅವರ ಸಂಗೀತದ್ದೇ ಆಗಿರುತ್ತದೆ’ ಎಂದರು. ‘ಬಾನಲ್ಲು ನೀನೇ’ ಹಾಡನ್ನು ತೆಲುಗಿನಲ್ಲೂ ಬಳಸುವಂತೆ ರಾಜನ್ ಅವರಿಗೆ ತಾವೇ ಒತ್ತಾಯಿಸಿದ್ದನ್ನು ಅವರು ಸ್ಮರಿಸಿದರು. ಒಂದು ವೇಳೆ ಎಸ್‌ಪಿಬಿ ತಮ್ಮ ವೃತ್ತಿಬದುಕಿನ ಕುರಿತಾಗಿ ಪುಸ್ತಕ ಬರೆದಲ್ಲಿ ಅದರ ದೊಡ್ಡ ಅಧ್ಯಾಯವಾಗಿ ರಾಜನ್ ಇರುತ್ತಾರಂತೆ.ಇದೇ ಸಮಯದಲ್ಲಿ ಡ್ರಮ್ ಮಾಸ್ಟರ್ ಶಿವಮಣಿ, ಗಾಯಕಿ ಬಿ.ಕೆ. ಸುಮಿತ್ರಾ, ನಿರ್ದೇಶಕ ಭಗವಾನ್ ಮೊದಲಾದ ಗಣ್ಯರು ಕೂಡ ರಾಜನ್‌ರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ಬೆಳವಣಿಗೆಗೆ ಕಾರಣಕರ್ತೃಗಳಾದ ಎಸ್‌ಪಿಬಿ, ಕೆಎಸ್‌ಎಲ್‌ಸ್ವಾಮಿ, ಭಗವಾನ್, ದೊಡ್ಡರಂಗೇಗೌಡ, ನಟ ಶಿವರಾಂ, ಮುದ್ದು ಮೋಹನ್, ಲಹರಿ ವೇಲು, ವಿ. ಮನೋಹರ್, ಮನೋಮೂರ್ತಿ ಸೇರಿ ಹಲವರಿಗೆ ರಾಜನ್ ಅವರು ಫಲ ತಾಂಬೂಲ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.ಬದ್ರಿ ಪ್ರಸಾದ್, ವಾಣಿ ಜಯರಾಂ, ಅನುರಾಧ ಭಟ್, ಸಿಂಚನಾ ದೀಕ್ಷಿತ್ ಇವರೆಲ್ಲರ ಕಂಠದಲ್ಲಿ ‘ತೇರಾನೇರಿ’, ‘ಹಳ್ಳಿಯಾದರೇನು ಶಿವಾ’, ‘ಜೇನಿನ ಹೊಳೆಯೋ’, ‘ನಾವಾಡುವ ನುಡಿಯೇ’ ಮುಂತಾದ ಗೀತೆಗಳು ಮೂಡಿಬಂದು ನೆರೆದಿದ್ದವರನ್ನು ರಂಜಿಸಿದವು. ಫಣಿ ರಾಮಚಂದ್ರ, ರಾಮಚಂದ್ರ ಗುರೂಜಿ, ಶಿವಕುಮಾರ ಸ್ವಾಮಿ ಮುಂತಾದವರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.ಪಾರ್ವತಮ್ಮ ರಾಜಕುಮಾರ್, ಭಾರತೀ ವಿಷ್ಣುವರ್ಧನ್, ಹಂಸಲೇಖ, ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು, ಶಿವರಾಜ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ಮೊದಲಾದವರ ಶುಭಾಶಯಗಳಿರುವ ದೃಶ್ಯದ ತುಣುಕನ್ನು ಪ್ರದರ್ಶಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.