ರಾಜಶೇಖರ ಶ್ರೀಗಳ ಪಟ್ಟಾಧಿಕಾರ

7

ರಾಜಶೇಖರ ಶ್ರೀಗಳ ಪಟ್ಟಾಧಿಕಾರ

Published:
Updated:

ಹುಬ್ಬಳ್ಳಿ: ನವನಗರದ ಪಂಚಾಚಾರ್ಯ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಶಿವಯೋಗ ಪುಣ್ಯಾಶ್ರಮದ ನೂತನ ಶ್ರೀಗಳಾಗಿ ರಾಜಶೇಖರ ದೇವರ ಪಟ್ಟಾಧಿಕಾರ ಮಹೋತ್ಸವ ಶುಕ್ರವಾರ ನಡೆಯಿತು. ಕಾಶಿಯ ಶಾಖಾ ಮಠವನ್ನು ಇಲ್ಲಿಯವರೆಗೆ ಡಾ.ಸಿದ್ಧರಾಮ ಶಿವಯೋಗಿಗಳು ಮುನ್ನಡೆಸುತ್ತಿದ್ದರು.ಪಟ್ಟಾಧಿಕಾರದ ವಿಧಿ ವಿಧಾನಗಳನ್ನು ಕಾಶಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹಾಗೂ ಶ್ರೀಶೈಲದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ನೆರವೇರಿಸಲಾಯಿತು. ಕಾಶಿ ಶ್ರೀಗಳು ರಾಜಶೇಖರ ಸ್ವಾಮೀಜಿ ಅವರಿಗೆ ಪಟ್ಟವಂದನ, ಆಶೀರ್ವಾದ ಉಂಗುರ ಹಾಗೂ ದಂಡ ಕಮಂಡಲವನ್ನು ನೀಡುವ ಮೂಲಕ ಪಟ್ಟದ ದೀಕ್ಷೆ ನೀಡಿದರು.ಇದಕ್ಕೂ ಮುನ್ನ ಬೆಳಿಗ್ಗೆಯೇ ಮಂದ್ರೂಪದ ರೇಣುಕ ಶಿವಾಚಾರ್ಯರು, ಕಲಾದಗಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಗಣಸೂರದ ಶ್ರೀಕಂಠ ಶಿವಾಚಾರ್ಯರು ಹಾಗೂ ಭೂ.ಹೂಲಿಕಟ್ಟಿಯ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆಯೇ ಪಟ್ಟಾಧಿಕಾರ ಪೂರ್ವ ವಿಧಿಗಳನ್ನು ಪೂರೈಸಲಾಯಿತು. ನಂತರ ನವನಗರದ ಪ್ರಮುಖ ಬೀದಿಗಳಲ್ಲಿ ನೂತನ ಶ್ರೀಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೊಂಡೊಯ್ಯಲಾಯಿತು. ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಬಾಜಾ ಭಜಂತ್ರಿಗಳು ಮೆರವಣಿಗೆಗೆ ಕಳೆ ತಂದಿದ್ದವು. ಇದೇ ಸಂದರ್ಭದಲ್ಲಿ ವಟುಗಳಿಗೆ ಅಯ್ಯಾಚಾರ ಮಾಡಲಾಯಿತು.ರಾಜಶೇಖರ ಶ್ರೀಗಳ ಪೂರ್ವಾಶ್ರಮ: ನವನಗರ ಪಂಚಾಚಾರ್ಯ ಪುಣ್ಯಾಶ್ರಮದ ಶ್ರೀಗಳಾಗಿ ಅಧಿಕಾರ ವಹಿಸಿಕೊಂಡ ರಾಜಶೇಖರ ಶಿವಾಚಾರ್ಯರು ಸೋಲಾಪುರ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ವೀರಶೈವ ಸ್ವಾಮಿಗಳೊಂದಿಗೆ ಗಡಿಭಾಗದ ಗ್ರಾಮಗಳಲ್ಲಿ ಸಂಚರಿಸಿ ಧರ್ಮೋಪದೇಶದ ನೀಡಿದರು. ನಂತರ ಧರ್ಮಕಾರ್ಯದಲ್ಲೇ ತೊಡಗಿಸಿಕೊಳ್ಳಬೇಕೆಂದು ಬಯಸಿ ಶಿಕ್ಷಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಅವರ ಹಿನ್ನೆಲೆಯನ್ನು ಗಮನಿಸಿ ಪುಣ್ಯಾಶ್ರಮದ ಶ್ರೀಗಳು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವಂತೆ ಕಾಶಿ ಜಗದ್ಗುರುಗಳನ್ನು ಕೋರಿದರು. ಅದಕ್ಕೆ ಒಪ್ಪಿದ ಶ್ರೀಗಳು ಈ ಪಟ್ಟಾಧಿಕಾರವನ್ನು ನೆರವೇರಿಸಿದರು.ಮಹಾರಾಷ್ಟ್ರದಿಂದ ಭಕ್ತರು: ಈ ಪಟ್ಟಾಧಿಕಾರ ಮಹೋತ್ಸವದಲ್ಲಿ ಸ್ಥಳೀಯ ಇಲ್ಲವೇ ಅಕ್ಕಪಕ್ಕದ ಜಿಲ್ಲೆಗಳ ಭಕ್ತರಿಗಿಂತ ಮಹಾರಾಷ್ಟ್ರದಿಂದ ಬಂದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸೋಲಾಪುರ ಜಿಲ್ಲೆಯ ಅಕ್ಕಲಕೋಟ, ನಿಂಬರಗಾ, ದೋತ್ರಿ, ತಂಡವಾಳ, ನಂದರಗಿ, ಮುಂಡೇವಾಡಿ ಪಡ್ನೂರ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು.ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ದೊಡ್ಡ ಪಟ್ಟಿಯನ್ನೇ ಅಚ್ಚು ಹಾಕಿಸಲಾಗಿತ್ತಾದರೂ ಅಲ್ಲಿಗೆ ಬಂದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry