ಗುರುವಾರ , ಜನವರಿ 23, 2020
21 °C
ವಿದ್ಯಮಾನ

ರಾಜಸ್ತಾನದಲ್ಲಿ ವಿಶ್ವದ ಏಳು ಅದ್ಭುತಗಳು!

ಪಿ. ಜಾಯ್‌ಚೆನ್,ಕೋಟಾ Updated:

ಅಕ್ಷರ ಗಾತ್ರ : | |

ಸುಂದರವಾದ ಗುಲಾಬಿ ಬಣ್ಣದ ಅರಮನೆಗಳು, ವಿಶಾಲವಾದ ಮರುಭೂಮಿ ಮತ್ತು ಅಮೃತಶಿಲೆಗಳ ಗಣಿಗಳಿಂದ ಕಂಗೊಳಿಸುತ್ತಿರುವ ರಾಜಸ್ತಾನದ ಮುಕುಟಕ್ಕೆ ಈಗ ಇನ್ನೊಂದು ಗರಿ ಸೇರ್ಪಡೆಯಾಗಿದೆ.ರಾಜಸ್ತಾನದ ಕೋಟಾ, ಐಐಟಿ–ಜೆಇಇ ಕೋಚಿಂಗ್ ಕ್ಲಾಸ್‌ಗಳಿಗೆ ಹೆಸರುವಾಸಿ. ಪ್ರತಿ ವರ್ಷ ದೇಶದ ನಾನಾ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಉಜ್ವಲ ಭವಿಷ್ಯದ ಕನಸು ಹೊತ್ತು ಇಲ್ಲಿಗೆ ಬರುತ್ತಾರೆ. ಶೈಕ್ಷಣಿಕ ಕೇಂದ್ರವಾಗಿ ಹೆಸರುವಾಸಿಯಾಗಿರುವ ಕೋಟಾ ಇದೀಗ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿಯೂ ಜನರನ್ನು ಆಕರ್ಷಿಸುತ್ತಿದೆ.ಕೋಟಾದ ಹೃದಯಭಾಗವಾದ ವಲ್ಲಭ ಬಾರಿಯ ಕಿಶೋರ್‌ ಸಾಗರ ಸರೋವರದ  ದಡದಲ್ಲಿ ತಲೆ ಎತ್ತಿರುವ ‘ವಂಡರ್‌ ಪಾರ್ಕ್‌’ ಕೊಳ ಪ್ರವಾಸಿಗರ ಹೊಸ ಆಕರ್ಷಣೆಯ ಕೇಂದ್ರ. ವಿಶ್ವದ ಏಳು ಅದ್ಭುತಗಳು ಈ ಪಾರ್ಕ್‌ನಲ್ಲಿ ಮೈದಳೆದಿವೆ.   ವಿಶಾಲವಾದ ಸರೋವರದ ದಡದಲ್ಲಿ ನಿರ್ಮಿಸಲಾಗಿರುವ ಹಸಿರು ಹುಲ್ಲು ಮತ್ತು ಬಣ್ಣ, ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿರುವ ಈ ಏಳು ಅದ್ಭುತಗಳು ಪ್ರವಾಸಿಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ.ಸಂಜೆ  ಸೂರ್ಯ ಸರಿಯುತ್ತಲೇ  ಝಗಮಗಿಸುವ ವಿದ್ಯುತ್‌ ದೀಪಗಳ ವರ್ಣಮಯ ಕಿನ್ನರಲೋಕವೊಂದು ವಂಡರ್‌ ಪಾರ್ಕ್‌ನಲ್ಲಿ ನಿಧಾನವಾಗಿ ತೆರೆದುಕೊಳ್ಳಲು ಆರಂಭಿಸುತ್ತದೆ. ಸಂಗೀತಕ್ಕೆ ತಕ್ಕಂತೆ ಕಾರಂಜಿಗಳು ನರ್ತಿಸತೊಡಗುತ್ತವೆ. ಅತ್ತ ಹಕ್ಕಿಗಳು ಗೂಡು ಸೇರುತ್ತಲೇ, ಇತ್ತ ಮಕ್ಕಳ ಕಲರವ ಶುರುವಾಗುತ್ತದೆ. ಆಗಾಗ ಕತ್ತಲನ್ನು ಸೀಳಿಕೊಂಡ ಕ್ಯಾಮೆರಾಗಳ ಬೆಳಕು  ಫಳ್ಳನೇ ಮಿಂಚಿನಂತೆ ಮಿಂಚಿ ಮರೆಯಾಗುತ್ತಿರುತ್ತವೆ.ಪ್ರೀತಿಯ ಸಂಕೇತ ಮತ್ತು ಭಾರತದ ಹೆಮ್ಮೆಯ ಸ್ಮಾರಕವಾಗಿರುವ ಶ್ವೇತವರ್ಣದ ತಾಜ್ ಮಹಲ್, ಗೀಜಾದ ಪಿರಮಿಡ್‌, ಪ್ಯಾರಿಸ್‌ನ ಐಫೆಲ್‌ ಗೋಪುರ, ಪೀಸಾದ ವಾಲು ಗೋಪುರ, ನ್ಯೂಯಾರ್ಕ್‌ನಲ್ಲಿ  ಆಕಾಶದೆತ್ತರಕ್ಕೆ ಮುಖಮಾಡಿ ನಿಂತಿರುವ ಲಿಬರ್ಟಿ ಪ್ರತಿಮೆ, ರೋಮ್‌ನ ಬಯಲು ಸಭಾಂಗಣ,  ಬ್ರೆಜಿಲ್‌ನ ರಿಯೊ ಡಿ ಜನೈರೊದ ಬೆಟ್ಟದ ಮೇಲೆ ಕೈಚಾಚಿ ನಿಂತಿರುವ ಏಸು ಕ್ರಿಸ್ತನ ಬೃಹತ್  ಪ್ರತಿಮೆ... ಹೀಗೆ ಒಂದೇ ಸ್ಥಳದಲ್ಲಿ ವಿಶ್ವದ ಏಳೂ ಅದ್ಭುತಗಳ ಪ್ರತಿಕೃತಿಗಳು ಮೈದೆಳೆದು ನಿಂತಿವೆ.ಸಂಗೀತ ಕಾರಂಜಿಗಳ ನರ್ತನ, ಬಣ್ಣದ ವಿದ್ಯುತ್ ದೀಪಗಳು, ಇಂಪಾದ ಸಂಗೀತ, ನೀರಿನ ಅಲೆಗಳು... ನೋಡುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ.  ಮಕ್ಕಳಿಗಂತೂ ನೆಚ್ಚಿನ ಆಟದ ತಾಣ ದೊರೆತಂತಾಗಿದೆ.ರಾಜಸ್ತಾನ  ಸರ್ಕಾರದ ನಗರಾಭಿವೃದ್ಧಿ ಸಚಿವ ಮತ್ತು ಸ್ಥಳೀಯ ಶಾಸಕ ಶಾಂತಿ ಧರಿವಾಲ್‌ ಅವರ ಕನಸಿನ ಕೂಸು ಇದು. ಇದನ್ನು ಸಾಕಾರಗೊಳಿಸಿದ್ದು ಕೋಟಾ ನಗರಾಭಿವೃದ್ಧಿ ಟ್ರಸ್ಟ್.ಕೇವಲ ಸ್ಥಳೀಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅದ್ಭುತಗಳ ಪ್ರತಿಕೃತಿಗಳನ್ನು ನಿರ್ಮಿಸಿಲ್ಲ. ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವುದು ಇದರ ಮತ್ತೊಂದು ಉದ್ದೇಶ ಎನ್ನುತ್ತಾರೆ ನಗರಾಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಆರ್‌.ಡಿ ಮೀನಾ.ಜೈಪುರದ ಕಟ್ಟಡ ವಿನ್ಯಾಸಕಾರ ಅನೂಪ್ ಬರ್ತಾರಿಯಾ ಈ ಎಲ್ಲ ಪ್ರತಿಕೃತಿಗಳಿಗೆ ಜೀವ ತುಂಬಿದ್ದಾರೆ. ಮೂಲ ಕಟ್ಟಡಗಳನ್ನು ಯಥಾವತ್ತಾಗಿ ಹೋಲುವ ರೀತಿಯಲ್ಲಿಯೇ ಇವುಗಳನ್ನು ನಿರ್ಮಿಸಲಾಗಿದೆ. ಕೇವಲ ವಿನ್ಯಾಸವಷ್ಟೇ ಅಲ್ಲ, ಇಲ್ಲಿ ಬಳಸಲಾಗಿರುವ ವಸ್ತು, ಸಲಕರಣೆಗಳೂ ಮೂಲ ಕಟ್ಟಡಗಳಲ್ಲಿ ಬಳಕೆಯಾಗಿರುವ ಸಾಮಗ್ರಿಗಳನ್ನು ಹೋಲುತ್ತವೆ.ತಾಜ್ ಮಹಲ್, ಲಿಬರ್ಟಿ ಪ್ರತಿಮೆ, ರೋಮ್‌ನ ಬಯಲು ಸಭಾಂಗಣ... ಹೀಗೆ ಮೂಲ ಕಟ್ಟಡಗಳಲ್ಲಿ ಬಳಸಲಾಗಿರುವ ಕಲ್ಲುಗಳನ್ನೇ ಇಲ್ಲಿಯೂ ಬಳಸಲಾಗಿದೆ. ಹೀಗಾಗಿ ಇವು ಕೇವಲ ಪ್ರತಿಕೃತಿಗಳಾಗಿರದೇ ಮೂಲ ಆಕೃತಿಗಳನ್ನೇ ಯಥಾವತ್ತಾಗಿ ಹೋಲುತ್ತವೆ. ನೋಡುಗರಲ್ಲಿಯೂ ಅದೇ ಭ್ರಮೆಯನ್ನು ಮೂಡಿಸುತ್ತವೆ ಎನ್ನುವುದು ಯೋಜನೆಯ ಮುಖ್ಯ ಎಂಜಿನಿಯರ್ ಒ.ಪಿ ವರ್ಮಾ ಅವರ ಹೆಮ್ಮೆಯ ನುಡಿ.ಆಗ್ರಾ, ದೋಲ್‌ಪುರ ಮತ್ತು ಭರತ್‌ಪುರದ 150ಕ್ಕೂ ಹೆಚ್ಚು ಸಾಂಪ್ರದಾಯಿಕ ಕುಶಲಕರ್ಮಿಗಳ ಒಂದೂವರೆ ವರ್ಷದ ಪರಿಶ್ರಮದ ಫಲವಿದು. ಶಿಲ್ಪಿಗಳ ಕೈಯಲ್ಲಿ ಜೀವ ತಳೆದಿರುವ ಈ ಪ್ರತಿಕೃತಿಗಳು ವಿಶ್ವದ ಏಳು ಅದ್ಭುತಗಳಿಗೆ ಸವಾಲು ಹಾಕುವ ರೀತಿಯಲ್ಲಿ ತಲೆ ಎತ್ತಿ ನಿಂತಿವೆ.20 ಕೊಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಂಡರ್‌ ಪಾರ್ಕ್ ಉದ್ಘಾಟನೆಯನ್ನು ಮಾತ್ರ ತರಾತುರಿಯಲ್ಲಿ ಮಾಡಲಾಯಿತು. ವಿಧಾನಸಭಾ ಚುನಾವಣೆ ನೀತಿ ಸಂಹಿತೆಯ ಕಾರಣದಿಂದಾಗಿ ಇನ್ನೂ ಅಲ್ಪ ಸ್ವಲ್ಪ ಕೆಲಸ ಬಾಕಿ ಇರುವಾಗಲೇ ಉದ್ಘಾಟನೆ ಮಾಡಿ ಮುಗಿಸಲಾಯಿತು.ತಮ್ಮ ಅಧಿಕಾರದ ಅವಧಿಯಲ್ಲಿಯೇ ಇಂಥದೊಂದು ಬೃಹತ್‌ ಕಾರ್ಯವನ್ನು ಮಾಡಿ ಮುಗಿಸುವ ಉತ್ಸಾಹದಲ್ಲಿದ್ದ ಸಚಿವ ಶಾಂತಿ ಧರಿವಾಲ್ ಅವರ ಆಸಕ್ತಿಯೂ ಇದಕ್ಕೆ ಕಾರಣ. ಇದನ್ನೇ ಅವರು ತಮ್ಮ ಚುನಾವಣಾ ಬಂಡವಾಳವನ್ನಾಗಿ ಮಾಡಿಕೊಳ್ಳುವ ಉದ್ದೇಶವೂ ಅವರಿಗಿತ್ತು.ಪ್ರತಿ ವರ್ಷವೂ ದೇಶದ ನಾನಾ ರಾಜ್ಯಗಳಿಂದ ಕನಿಷ್ಠ 1.25 ಲಕ್ಷ ವಿದ್ಯಾರ್ಥಿಗಳು ಐಐಟಿ–ಜೆಇಇ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಾರೆ. ಅವರ ಪೋಷಕರು ಆಗಾಗ ಮಕ್ಕಳನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಿರುತ್ತಾರೆ. ಇಲ್ಲಿಗೆ ಬಂದವರಿಗೊಂದು ವಿಶೇಷ ಅನುಭವ ನೀಡಬೇಕು ಎನ್ನುವ ಯೋಚನೆ ತಲೆಯಲ್ಲಿ ಮೊಳಕೆಯೊಡೆದಿತ್ತು. ಅದು ಅನುಷ್ಠಾನಗೊಳ್ಳುವ ವೇಳೆಗೆ ಈ ಜಾಗ ಮಕ್ಕಳಿಗೂ ನೆಚ್ಚಿನ ತಾಣವಾಗುವಂತೆ ನಿರ್ಮಿಸುವ ಆಲೋಚನೆ ಬಂತು ಎನ್ನುತ್ತಾರೆ ಶಾಂತಿ ಧರಿವಾಲ್.ಏಳು ಅದ್ಭುತಗಳ ಪ್ರತಿಕೃತಿ ನಿರ್ಮಾಣಕ್ಕೆ ಆರು ಕೋಟಿ ಖರ್ಚಾಯಿತು. ಉಳಿದ ಹಣವನ್ನು ವಿದ್ಯುತ್ ದೀಪಾಲಂಕಾರ, ರಸ್ತೆ, ಮೂಲಸೌಕರ್ಯ ಹಾಗೂ ಉದ್ಯಾನಕ್ಕಾಗಿ ಖರ್ಚು ಮಾಡಲಾಗಿದೆ.  ಈ ಪಾರ್ಕ್ ಕೇವಲ ಮನರಂಜನೆಯ ತಾಣವಲ್ಲ. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಯ ಕಣಜವೂ  ಆಗಿದೆ. ಇಷ್ಟೊಂದು ವೆಚ್ಚದ ಯೋಜನೆ ದೇಶದಲ್ಲಿ ಇದೇ ಮೊದಲಿರಬೇಕು ಎನ್ನುವ ಧರಿವಾಲ್ ಅವರಿಗೆ ಇದು ಹೆಮ್ಮೆಯ ವಿಷಯ.ಕಿಶೋರ್‌ ಸಾಗರಕ್ಕೆ ಚಂಪಾಲ ನದಿಯ ನೀರು ಬರುವ ಕಾರಣ ವರ್ಷಪೂರ್ತಿ ನೀರಿಗೆ ಬರವಿಲ್ಲ. ಸರೋವರಗಳ ನಗರ ಎಂದು ಹೆಸರಾದ ಉದಯಪುರದಲ್ಲೂ ವರ್ಷವಿಡೀ ನೀರಿರುವ ನದಿಗಳಿಲ್ಲ. ಮಳೆಯ ನೀರಿನ ಮೇಲೆ ಉದಯಪುರದ ಸರೋವರಗಳು ಅವಲಂಬಿತವಾಗಿವೆ. 

ಬಹುಶಃ ರಾಜಸ್ತಾನದಂತಹ ನೀರಿನ ಅಭಾವವಿರುವ ಮರುಭೂಮಿ ರಾಜ್ಯದಲ್ಲಿ  ಚಂಪಾಲ ನದಿಯ ಕಾರಣದಿಂದಾಗಿ ಕೋಟಾ ನಗರವೊಂದೇ 12 ತಿಂಗಳೂ ನೀರು ಕಾಣುವ ನಗರವಾಗಿದೆ. ‘ಈ ಅಂಶವೇ ನಮಗೆ ವರದಾನ ಮತ್ತು  ಉದ್ಯಾನ ನಿರ್ಮಾಣಕ್ಕೆ ಪ್ರೇರಣೆಯಾಯಿತು’ ಎಂದು ಕೋಟಾ ನಗರಾಭಿವೃದ್ಧಿ ಯೋಜನೆಯ ಅಧ್ಯಕ್ಷ ರವೀಂದ್ರ ತ್ಯಾಗಿ ಅನುಭವ ಬಿಚ್ಚಿಟ್ಟರು.‘ರಜೆಯಲ್ಲಿ ದೂರದ ಊರುಗಳಿಂದ ಮನೆಗೆ  ಬಂದ ಸಂಬಂಧಿಗಳನ್ನು  ಜೈಪುರ ಮತ್ತು ಉದಯಪುರ ತೋರಿಸಲು ಕರೆದೊಯ್ಯುತ್ತಿದ್ದೆವು. ಆದರೆ, ಇದೀಗ ನಮ್ಮ ಊರಿನಲ್ಲಿಯೇ ಇಂತಹ ಅದ್ಭುತ ಪ್ರೇಕ್ಷಣಿಯ ಸ್ಥಳ ಹುಟ್ಟಿಕೊಂಡಿರುವಾಗ ಇದನ್ನು ಹುಡುಕಿಕೊಂಡೇ ಅವರು ಇಲ್ಲಿಗೆ ಬರುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದು ಗೃಹಿಣಿ ಸಂಗೀತಾ ಜೈನ್.ಕೋಟಾ ಏಕಾಏಕಿ ಬದಲಾಗಿ ಬಿಟ್ಟಿದೆ. ಈ ಹಿಂದೆ ಇಲ್ಲಿಗೆ ಭೇಟಿ ನೀಡಿದಾಗ   ಅದು ಹೀಗಿರಲಿಲ್ಲ. ಸಂಪೂರ್ಣ ಪರಿವರ್ತನೆಯಾಗಿದೆ. ಸುಂದರವಾದ ಸ್ವಪ್ನಲೋಕದಂತೆ ಕಂಗೊಳಿಸುತ್ತಿದೆ ಎಂದು ಕೇಂದ್ರ ಸರ್ಕಾರಿ ನೌಕರ ಸಂಜೀವ್‌ ಟಿ.ಪಿ. ಹೇಳುತ್ತಾರೆ.ಇನ್ನೂ ಅಷ್ಟೊಂದು ಪ್ರಚಾರ ಪಡೆಯದ ಕೋಟಾ  ಭಾರತದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ನಕಾಶೆಯಲ್ಲಿ ಸ್ಥಾನ ಪಡೆಯುವ ದಿನಗಳು ದೂರವಿಲ್ಲ.

 

ಪ್ರತಿಕ್ರಿಯಿಸಿ (+)