ರಾಜಸ್ತಾನದಲ್ಲೂ ಈಶ್ವರಪ್ಪ ಆಸ್ತಿ

7
ಲೋಕಾಯುಕ್ತ ಪೊಲೀಸರ ವಶದಲ್ಲಿ ದಾಖಲೆ

ರಾಜಸ್ತಾನದಲ್ಲೂ ಈಶ್ವರಪ್ಪ ಆಸ್ತಿ

Published:
Updated:
ರಾಜಸ್ತಾನದಲ್ಲೂ ಈಶ್ವರಪ್ಪ ಆಸ್ತಿ

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕುಟುಂಬ ಹೊರ ರಾಜ್ಯಗಳಲ್ಲೂ ಆಸ್ತಿ ಖರೀದಿಸಿರುವುದು ಬೆಳಕಿಗೆ ಬಂದಿದೆ.ಉಪ ಮುಖ್ಯಮಂತ್ರಿ ಅವರ ಪುತ್ರ ಕೆ.ಇ.ಕಾಂತೇಶ್ ರಾಜಸ್ತಾನದ ಜೈಸಲ್ಮೇರ್ ಜಿಲ್ಲೆಯಲ್ಲಿ 17.5 ಎಕರೆ ಜಮೀನು ಖರೀದಿಸಿರುವ ದಾಖಲೆಗಳು ಲೋಕಾಯುಕ್ತ ಪೊಲೀಸರಿಗೆ  ದೊರೆತಿವೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಕುರಿತು ಈಶ್ವರಪ್ಪ ಕುಟುಂಬದ ವಿರುದ್ಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಸೋಮವಾರ ಶಿವಮೊಗ್ಗ ಮತ್ತು ಬೆಂಗಳೂರಿನ ಒಂಬತ್ತು ಕಡೆ ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ ದೊರೆತ ದಾಖಲೆಯೊಂದು ರಾಜಸ್ತಾನದಲ್ಲಿ ಆಸ್ತಿ ಖರೀದಿಸಿರುವುದನ್ನು ಬಹಿರಂಗಪಡಿಸಿದೆ.ಈ ಜಮೀನು ಖರೀದಿ ನಡೆಯುವಾಗ ಈಶ್ವರಪ್ಪ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಇರಲಿಲ್ಲ. ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿದ್ದರು. ಆದರೂ, 2006ರಲ್ಲಿ ಅವರು ಸಚಿವರಾದ ದಿನದಿಂದ ಈವರೆಗಿನ ಆಸ್ತಿ ಕುರಿತು ದೂರುದಾರ ವಿನೋದ್ ತನಿಖೆಗೆ ಮನವಿ ಮಾಡಿರುವುದರಿಂದ  ಈ ಪ್ರಕರಣವೂ ತನಿಖೆಯ ವ್ಯಾಪ್ತಿಯಲ್ಲಿದೆ.ಬ್ಯಾಡಗಿ ತಾಲ್ಲೂಕಿನ ಶಿರೂರು ಗ್ರಾಮದ ಜಯದೇವ ಎಂಬುವರ ಜತೆ ಪಾಲುದಾರಿಕೆಯಲ್ಲಿ ಕಾಂತೇಶ್ ಈ ಜಮೀನು ಖರೀದಿಸಿದ್ದಾರೆ. ಈ ವರ್ಷದ ಜನವರಿ 20ರಂದು ಕ್ರಯಪತ್ರ ನೋಂದಣಿ ಮಾಡಲಾಗಿದೆ. ಜೈಸಲ್ಮೇರ್ ಜಿಲ್ಲೆಯ ಫತೇಗಢ ತಾಲ್ಲೂಕಿನಲ್ಲಿರುವ 28 ಬಿಘಾ (17.5 ಎಕರೆ) ಜಮೀನಿಗೆ 38 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ರೂ 1.90 ಲಕ್ಷ ಮುದ್ರಾಂಕ ಶುಲ್ಕ ಮತ್ತು 15,000 ರೂಪಾಯಿ ನೋಂದಣಿ ಪತ್ರಕ್ಕೆ ಪಾವತಿ ಮಾಡಿದ್ದಾರೆ.ಕ್ರಯಪತ್ರದ ಪ್ರಕಾರ ಕಾಂತೇಶ್ ಮತ್ತು ಜಯದೇವ ಖರೀದಿಸಿರುವುದು ಕೃಷಿ ಜಮೀನು. ಆದರೆ, ಮಂಗಲಾ ಶುಭಂ ಗ್ರಾನೈಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಇವರು ಜಮೀನು ಖರೀದಿಸಿದ್ದಾರೆ. ರಾಜಸ್ತಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾನೈಟ್ ದೊರೆಯುವುದರಿಂದ ಉಪ ಮುಖ್ಯಮಂತ್ರಿಯವರ ಪುತ್ರ ಖರೀದಿಸಿರುವ ಜಮೀನು ಕೂಡ ಗ್ರಾನೈಟ್ ನಿಕ್ಷೇಪ ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.ರಾಜಸ್ತಾನಕ್ಕೆ ತಂಡ?: `ಈಶ್ವರಪ್ಪ ಅವರ ಪುತ್ರ ರಾಜಸ್ತಾನದಲ್ಲಿ ಜಮೀನು ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಜಮೀನಿನ ಉಪಯೋಗ, ಅಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆಯೇ? ಯಾವ ಉದ್ದೇಶಕ್ಕಾಗಿ ಈ ಜಮೀನು ಖರೀದಿಸಲಾಗಿದೆ ಎಂಬ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಗತ್ಯ ಕಂಡುಬಂದಲ್ಲಿ ಶೀಘ್ರದಲ್ಲಿ ಜೈಸಲ್ಮೇರ್‌ಗೆ ಲೋಕಾಯುಕ್ತ ಪೊಲೀಸರ ತಂಡವೊಂದನ್ನು ಕಳುಹಿಸಿ ಮಾಹಿತಿ ಕಲೆಹಾಕಲಾಗುವುದು' ಎಂದು ತನಿಖಾ ಸಂಸ್ಥೆಯ ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಈ ಜಮೀನಿನಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸುವ ಸಂಬಂಧ ಈಶ್ವರಪ್ಪ ಕುಟುಂಬ ತಯಾರಿ ನಡೆಸಿತ್ತೇ ಎಂಬುದನ್ನು ತಿಳಿಯಲು ತನಿಖಾ ತಂಡ ಪ್ರಯತ್ನಿಸುತ್ತಿದೆ. ಸ್ಥಳೀಯ ಜಿಲ್ಲಾಡಳಿತ, ರಾಜಸ್ತಾನದ ಗಣಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಲು ಲೋಕಾಯುಕ್ತ ಪೊಲೀಸರು ಯೋಚಿಸಿದ್ದಾರೆ.ಸಾರ್ವಜನಿಕರಿಂದ ಮಾಹಿತಿ: ಈಶ್ವರಪ್ಪ ಅವರು ಹೊಂದಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರೂ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಲಾರಂಭಿಸಿದ್ದಾರೆ.ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸ್ ಪ್ರಧಾನ ಕಚೇರಿ ಹಾಗೂ ಶಿವಮೊಗ್ಗದ ಲೋಕಾಯುಕ್ತ ಪೊಲೀಸ್ ಕಚೇರಿಗಳಿಗೆ ದೂರವಾಣಿ ಕರೆ ಮಾಡಿ ಹಲವರು ಮಾಹಿತಿ ನೀಡಿದ್ದಾರೆ. ಕೆಲವರು ಫ್ಯಾಕ್ಸ್ ಮೂಲಕವೂ ಮಾಹಿತಿ ನೀಡಿದ್ದಾರೆ.ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ ಮತ್ತಿತರ ಕಡೆಗಳಲ್ಲಿ ಈಶ್ವರಪ್ಪ ಕುಟುಂಬ ಆಸ್ತಿ ಖರೀದಿಸಿದೆ ಎಂಬ ಮಾಹಿತಿ ಸಾರ್ವಜನಿಕರಿಂದಲೇ ತನಿಖಾ ತಂಡಕ್ಕೆ ದೊರೆತಿದೆ.ಕೆಲವರು ಅನಾಮಧೇಯ ಪತ್ರ ಬರೆದು ಮಾಹಿತಿ ಒದಗಿಸಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry