ರಾಜಸ್ತಾನದ ಮಣ್ಣಿನಲ್ಲಿ ಅರಳಿದ ಆಕರ್ಷಕ ಗಣಪ

7

ರಾಜಸ್ತಾನದ ಮಣ್ಣಿನಲ್ಲಿ ಅರಳಿದ ಆಕರ್ಷಕ ಗಣಪ

Published:
Updated:

ಮಾಗಡಿ: ಪಟ್ಟಣದ ಕೋಟೆ ಬದಿಯಲ್ಲಿ ಈಗ ರಾಜಸ್ತಾನದ ಪಾಲಿ ಜಿಲ್ಲೆಯಿಂದ ಬಂದಿರುವ ಅಲೆಮಾರಿ ಜನಾಂಗದವರ ಮಣ್ಣಿನ ಗಣಪನ ತಯಾರಿಕೆ ಎಲ್ಲರ ಗಮನ ಸೆಳೆಯುತ್ತಿದೆ.ಬಾವುರಿ ಚೌಕಿದಾರ್ ಬುಡಕಟ್ಟು ಜನಾಂಗಕ್ಕೆ ಸೇರಿದ ಕಲಾವಿದ ರಾಮಲಾಲ್ ಮತ್ತು ಲೆಹರಿ ಕುಟುಂಬದ ಸದಸ್ಯರು ಇಲ್ಲಿನ ಕೋಟೆ ಕಂದಕದ ಬದಿಯಲ್ಲಿ ವಿವಿಧ ನಮೂನೆಯ ಗಣಪತಿ ವಿಗ್ರಹಗಳನ್ನು ತಯಾರಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ. ಕಳೆದ ನಾಲ್ಕು ತಿಂಗಳಿಂದಲೂ ಇಲ್ಲಿಯೇ ಗುಡಾರ ನಿರ್ಮಿಸಿಕೊಂಡು ಇವರು ವಿಗ್ರಹ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಪ್ರತಾಪಗಡದಿಂದಲೇ ತಂದಿರುವ ಬಿಳಿಯ ಮಣ್ಣಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಹತ್ತುಹಲವು ನಮೂನೆಯ ಗಣಪತಿ ವಿಗ್ರಹಗಳನ್ನು ಸಿದ್ಧಗೊಳಿಸಿರುವುದು ಇವರ ವಿಶೇಷ.ಇಲ್ಲಿನ ವಿಗ್ರಹಗಳಲ್ಲಿ ಉತ್ತರ ಭಾರತದ ನಾಗರಶೈಲಿ ಮತ್ತು ವೇಸರ ಶೈಲಿಯಲ್ಲಿ ತಯಾರಾಗಿರುವ ಹನುಮಂತನ ಹೆಗಲೇರಿ ಕುಳಿತಿರುವ ವರ್ಣಮಯ ಗಣಪತಿ ಕಣ್ಮನ ಸೆಳೆಯುವಂತಿದೆ. ಕಿರಿಯ ಕಲಾವಿದರಾದ ಲುಂಬಾ, ಮಂಜು, ಜಿತೇಂದರ್, ಪ್ರಕಾಶ್ ಹಿರಿಯರೊಂದಿಗೆ ಕೈಜೋಡಿಸಿ, ವಾಯವ್ಯ ಭಾರತದ ಶೈಲಿಯಲ್ಲಿ ಗೌರಿ ಗಣೇಶನ ವಿಗ್ರಹ ತಯಾರಿಸಿರುವುದು ನೋಡುವಂತಿದೆ.ಅಲೆಮಾರಿ ಕಲಾವಿದ ರಾಮಲಾಲ್ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, `ಅನ್ನ ನೀರು ಹುಡುಕಿಕೊಂಡು ಕರ್ನಾಟಕಕ್ಕೆ ಬಂದು 20 ವರ್ಷಗಳಾಯಿತು. ಮೈಸೂರು, ಮಂಡ್ಯ, ಮೇಲುಕೋಟೆ, ಬೆಂಗಳೂರು ಇತರೆಡೆ ರಸ್ತೆಯ ಬದಿಗಳಲ್ಲಿ ಪ್ಲಾಸ್ಟಿಕ್ ಡೇರೆ ಹಾಕಿಕೊಂಡು ಪ್ರತಿವರ್ಷವೂ ಗಣಪತಿ ವಿಗ್ರಹಗಳನ್ನು ತಯಾರಿಸಿ, ಭಕ್ತರು ಕೊಟ್ಟಷ್ಟು ಹಣ ಪಡೆದು ಜೀವನ ನಿರ್ವಹಿಸುತ್ತಿದ್ದೇವೆ' ಎಂದು ಸಂತೋಷದಿಂದಲೇ ನುಡಿದರು.`ಕೆಲವು ಕಡೆಗಳಲ್ಲಿ ಸ್ಥಳೀಯ ಗಣಪತಿ ತಯಾರಕರಿಂದ ಬೆದರಿಕೆಗಳನ್ನೂ ಅನುಭವಿಸಿದ್ದೇವೆ ಎಂದ ಅವರು, `ನಮ್ಮ ಶ್ರಮಕ್ಕೆ ಬೆಲೆ ಇಲ್ಲ' ಎಂಬ ಕೊರಗನ್ನು ವ್ಯಕ್ತಪಡಿಸಲು ಮರೆಯಲಿಲ್ಲ. `ನಾವೆಂದೂ ಗಣಪತಿ ವಿಗ್ರಹಕ್ಕೆ ಬೆಲೆ ಕಟ್ಟುವುದಿಲ್ಲ. ಹೊಟ್ಟೆಬಟ್ಟೆಗೆ ಸಿಕ್ಕರೆ ಸಾಕು. ವಿನಾಯಕ ಚೌತಿಯ ಸಮಯದಲ್ಲಿ ನಮಗೆ ನಿತ್ಯ ಹೊಟ್ಟೆತುಂಬುವಷ್ಟು ಆಹಾರ ಲಭಿಸುತ್ತಿದೆ. ನಂತರ ಭಿಕ್ಷೆ ಬೇಡಿ ಹೊಟ್ಟೆಹೊರೆಯುವುದು ಇದ್ದದ್ದೇ' ಎಂದು ವಿಷಾಸಿದರಲ್ಲದೆ, ಕೆಲಸ ಮುಗಿದ ಮೇಲೆ ಮುಂದಿನ ಗ್ರಾಮಕ್ಕೆ ತೆರಳುತ್ತೇವೆ' ಎಂದು ಹೇಳುತ್ತಾ ಆರ್ದ್ರರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry