ಭಾನುವಾರ, ಜೂಲೈ 5, 2020
26 °C

ರಾಜಸ್ತಾನಿ ಕಲಾಕೃತಿ, ಪ್ರತಿಕೃತಿ

ಶಾರಿ Updated:

ಅಕ್ಷರ ಗಾತ್ರ : | |

ರಾಜಸ್ತಾನಿ ಕಲಾಕೃತಿ, ಪ್ರತಿಕೃತಿ

ಮನೆಯೇ ಆಗಿರಲಿ, ಕಚೇರಿಯೇ ಆಗಿರಲಿ ಒಂದೇ ರೀತಿಯ ಒಳಾಂಗಣ ವಿನ್ಯಾಸ ಇದ್ದಲ್ಲಿ ಬೋರ್ ಹೊಡೆಸುತ್ತದೆ. ಬದಲಾವಣೆ ಬಯಸುವುದು ಮಾನವ ಸಹಜ ಗುಣ. ತಿಂಗಳಿಗೆ ಕೋಟಿ, ಕೋಟಿ ಆದಾಯ ಇರುವ ವಾಣಿಜ್ಯೋದ್ಯಮಿಗಳು, ಸಿನಿಮಾ ತಾರೆಯರು, ಆಗರ್ಭ ಸಿರಿವಂತರು ಬೇಸಿಗೆ, ಚಳಿಗಾಲದ ಋತುವಿಗೆ ತಕ್ಕಂತೆ ಮನೆಯ ಒಳಾಂಗಣ ವಿನ್ಯಾಸ, ಅಲಂಕಾರ ಬದಲಿಸುತ್ತಿರುತ್ತಾರೆ. ಆದರೆ, ನಿಗದಿತ ಆದಾಯ ನಂಬಿಕೊಂಡ ಮಧ್ಯಮ ವರ್ಗದವರು ಹಾಗಲ್ಲ. ಕರಕುಶಲ ಮಳಿಗೆಗಳಿಂದಲೋ, ವಸ್ತು ಪ್ರದರ್ಶನದಲ್ಲೋ ತಮ್ಮ ಮನಮೆಚ್ಚಿದ ಕಲಾಕೃತಿ, ಕರಕುಶಲ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಹಾಗಾಗಿ ಬಹುದೊಡ್ಡ ಉದ್ಯೋಗಸ್ಥ ವರ್ಗವನ್ನು ಹೊಂದಿದ ಬೆಂಗಳೂರಿನಲ್ಲಿ ವರ್ಷದ 365 ದಿನಗಳೂ ಒಂದಿಲ್ಲೊಂದು ಪ್ರದರ್ಶನ, ಕರಕುಶಲ ಮೇಳ ನಡೆಯುತ್ತಿರುತ್ತದೆ.ಕರಕುಶಲ ವಸ್ತುಗಳು, ಕಲಾಕೃತಿಗಳ ವಿಚಾರ ಬಂದಾಗ ಮರಳುಗಾಡಿನ ರಾಜಸ್ತಾನ, ಕುಶಲಕರ್ಮಿಗಳನ್ನು ಹೊಂದಿರುವ ಗುಜರಾತ್ ಎರಡೂ ಪೈಪೋಟಿಗೆ ನಿಲ್ಲುತ್ತವೆ. ನಗರದಲ್ಲಿ ಈಗ ನಡೆಯುತ್ತಿರುವ ‘ರಾಜಸ್ತಾನ ಕ್ರಾಫ್ಟ್ಸ್ ಬಜಾರ್’ನಲ್ಲಿ ಆ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿಯುವ ಕರಕುಶಲ ವಸ್ತುಗಳು, ಪೀಠೋಪಕರಣ, ವಸ್ತ್ರಗಳ ಭಂಡಾರವೇ ಇದೆ.‘ಕ್ರಾಫ್ಟ್ಸ್ ಬಜಾರ್’ ಪ್ರವೇಶಿಸಿದೊಡನೆ ಎದುರಾಗುವುದು ಪೀಠೋಪಕರಣಗಳ ಮಳಿಗೆ. ವಿದೇಶಕ್ಕೆ ರಫ್ತಾಗುವ ವಿಶಿಷ್ಟ ಪೀಠೋಪಕರಣಗಳನ್ನು ಜೈಪುರದ ಉದ್ಯಮಿ ಮಹಾವೀರ್ ಇದೇ ಮೊದಲ ಬಾರಿ ಇಲ್ಲಿ ಪ್ರದರ್ಶಿಸಿದ್ದಾರೆ. ನೆಲದಿಂದ ಅರ್ಧ ಅಡಿ ಎತ್ತರ ಇರುವ ವಿಭಿನ್ನ ವಿನ್ಯಾಸದ ಕುರ್ಚಿ, ಹೂದಾನಿ ಇಡಬಲ್ಲ ಪುಟಾಣಿ ಸ್ಟೂಲ್‌ಗಳು, ಆಳೆತ್ತರದ ಕಪಾಟುಗಳ ಮೇಲೆ ಮೊಗಲ್ ಮಿನಿಯೇಚರ್ ಕಲಾಕೃತಿಗಳನ್ನು ಚಿತ್ರಿಸಲಾಗಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ರೂಪಿಸಲಾದ ಸೀಡಿ ಸ್ಟ್ಯಾಂಡ್ ಯಾವುದೋ ಪುರಾತನ ಅರಮನೆಯಿಂದ ಎತ್ತಿ ತಂದಂತೆ ಅನಿಸುತ್ತದೆ. 300- 400 ವರ್ಷಗಳ ಹಿಂದೆ ಮಾಡಿದಂತೆ ಕಾಣುವ ‘ಆ್ಯಂಟಿಕ್ ಲುಕ್’ನ ಸಂದೂಕಗಳು ಅಲ್ಲಿವೆ.ಕಲಾಪ್ರಿಯರನ್ನು ಆಕರ್ಷಿಸುವ ಮತ್ತೊಂದು ಮಳಿಗೆ ಲೋಹದ ಕಲಾಕೃತಿಗಳದ್ದು. ಅತಿ ಅಪರೂಪದ ಆ್ಯಂಟಿಕ್ ಕಲಾಕೃತಿಗಳೇ ಇಲ್ಲಿವೆ. ಗ್ವಾಲಿಯರ್ ಮ್ಯೂಸಿಯಂನಲ್ಲಿ ಇರುವ ಸಾಂಬಾರ ಬಟ್ಟಲು, ಶತಮಾನದ ಹಿಂದೆ ಬಳಸುತ್ತಿದ್ದ ಶಾಯಿ ದವತಿ, ದಕ್ಷಿಣ ಭಾರತದ ಮಲ್ಲಕಂಬ ಏರುತ್ತಿರುವ ಮಹಿಳೆಯ ಕಸರತ್ತಿನ ದೀಪ ಇಲ್ಲಿನ ಹೈಲೈಟ್. ಪಂಜಾಬ್‌ನ ಅಶೋಕ್ ಸೆಹರಾಯ್ ಮತ್ತು ಅವರ ಕುಟುಂಬದವರು ಇಂತಹ ಅಪರೂಪದ ಕಲಾಕೃತಿಗಳ ಪ್ರತಿಕೃತಿ ತಯಾರಿಸಿ ರಫ್ತು ಮಾಡುವ ಉದ್ಯಮದಲ್ಲಿ 50 ವರ್ಷಗಳಿಂದ ತೊಡಗಿಕೊಂಡಿದ್ದಾರೆ.  ಇದರ ಬದಿಗೆ ಇರುವುದು ರಾಜಸ್ತಾನಿ ಚಿತ್ರ ಕಲಾಕೃತಿಗಳ ಮಳಿಗೆ. 50 ರೂಪಾಯಿಯಿಂದ 15,000 ದವರೆಗಿನ ಚಿತ್ರಗಳು ಇಲ್ಲಿವೆ. ತರಕಾರಿ ಬಣ್ಣಗಳನ್ನು ಬಳಸಿ, ಬಟ್ಟೆ ಮತ್ತು ಕಾಗದದ ಮೇಲೆ ಮೂಡಿಸಿರುವ ಈ ಚಿತ್ರಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಮೊಗಲ್ ಶೈಲಿಯ ಈ ಕಲಾಕೃತಿಗಳಲ್ಲಿ ರಜಪೂತ ರಾಜಕುಮಾರಿಯರು ಕಾಲಕ್ಷೇಪ ಮಾಡಲು ಪಗಡೆಯಾಡುವ, ಪರಸ್ಪರ ಅಲಂಕಾರ ಮಾಡಿಕೊಳ್ಳುವ ದೃಶ್ಯಗಳಿವೆ.ರಾಜಸ್ತಾನದ ವಿವಿಧ ಸಮುದಾಯದವರು ಧರಿಸುವ ವಿಭಿನ್ನ ವಿನ್ಯಾಸದ ಪಗಡಿಗಳು, ರಾಧಾ ಕೃಷ್ಣರ ರಾಸಲೀಲೆಯ ಕಲಾಕೃತಿಗಳು, ಗೋಕುಲದ ದೃಶ್ಯಾವಳಿಗಳ ಕಲಾಕೃತಿಗಳೇ ಹೇರಳವಾಗಿವೆ. ರಾಧಾ ಕೃಷ್ಣರ ಅಮರ ಪ್ರೇಮದ ಕಥೆ ನಮ್ಮ ಜನಪದದಲ್ಲಿ ಹೇಗೆ ಬೆರೆತುಹೋಗಿದೆ ಎಂಬುದಕ್ಕೆ ಈ ಕಲಾಕೃತಿಗಳೇ ಸಾಕ್ಷಿ. ಇದರ ಹೊರತಾಗಿ ರಾಜಸ್ತಾನದ ವಿಶಿಷ್ಟ ಬಳೆಗಳು, ಬಾಂದಿನಿ, ಬಾಟಿಕ್, ಜೈಪುರ್ ಕಾಟನ್ ವಸ್ತ್ರಗಳು ಚೂಡಿದಾರ್, ಕುರ್ತಾ, ಕಾಂತಾ ಕಸೂತಿ ಸೀರೆಗಳು ಇಲ್ಲಿವೆ. ಆಭರಣ ಪೆಟ್ಟಿಗೆ,ಬಾಗಿಲ ತೋರಣ, ಟೆರ್ರಕೋಟಾ ಕಲಾಕೃತಿಗಳ ವೈವಿಧ್ಯಮಯ ಸಂಗ್ರಹ, ರಾಜಸ್ತಾನದ ವಿಶಿಷ್ಟ ಖಾದ್ಯ ಸಂಸ್ಕೃತಿಯನ್ನು ಪರಿಚಯಿಸುವ ಮಳಿಗೆಯೂ ಇದೆ. 

ಸ್ಥಳ: ಸಫೀನಾ ಪ್ಲಾಜಾ, ಶಿವಾಜಿನಗರ.  ಪ್ರದರ್ಶನ ಮಾ. 27ಕ್ಕೆ ಮುಕ್ತಾಯ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.