ರಾಜಸ್ತಾನ ವಿಷ್ಣು ‘ಜಿಲೇಬಿ’ಗೆ ಭಾರಿ ಬೆೇಡಿಕೆ

7
ನಗರ ಸಂಚಾರ

ರಾಜಸ್ತಾನ ವಿಷ್ಣು ‘ಜಿಲೇಬಿ’ಗೆ ಭಾರಿ ಬೆೇಡಿಕೆ

Published:
Updated:

ರಾಯಚೂರು: ವ್ಹಾ... ಸಖತ್ತಾಗಿದೆ...ಪಾವ್ ಕೆಜಿ ಕೊಡ್ರಿ... ಅರೆ ಭಯ್ಯಾ ಆದಾ ಕಿಲೋ ಪಾರ್ಸಲ್‌ ದೇದೊ..

ಅಯ್ಯೊ ಖಾಲಿ ಆಗ್ಬಿಡ್ತಾ... ಹೇಗ್‌ ಮಾಡೋದು...ನಾಳೆ ಬರ್ತೇನೆ...ಬಾಯಲ್ಲಿ ನೀರು ತರಿಸುಂಥ ರುಚಿ ರುಚಿ... ಕ್ರಿಸ್ಪಿ... ಕ್ರಿಸ್ಪಿ... ಬಿಸಿ ಬಿಸಿಯಾದ ‘ಜಿಲೇಬಿ’ ಬಗ್ಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ನಗರದ ಪ್ರಮುಖ ವೃತ್ತದಲ್ಲಿ ಗ್ರಾಹಕರು ಜಿಲೇಬಿ ಗಾಡಿ ಅಂಗಡಿಯವನೊಂದಿಗೆ ಸದಾ ಜಾರಿಯಲ್ಲಿಟ್ಟಿರುವ ಮಾತುಗಳು.ಇಲ್ಲಿನ ಮಹಾವೀರ ವೃತ್ತದ ಬಳಿ ಬೆಳಿಗ್ಗೆ ಅಥವಾ ಸಂಜೆ ಒಂದು ಸುತ್ತು ಹಾಕಿದರೆ ಬಿಸಿ ಬಿಸಿ ಜಿಲೇಬಿ ವಾಸನೆ ಮೂಗಿಗೆ ಬಡಿಯುತ್ತದೆ. ಮೂಗು ಜಿಲೇಬಿ ವಾಸನೆ ಗ್ರಹಿಸಿದ ಮೇಲೆ ನಾಲಿಗೆ ಸುಮ್ಮನಿದ್ದೀತೆ? ಚಲೋ...ಎನ್ನುತ್ತದೆ. ನೀವು ಜಿಲೇಬಿ ಅಂಗಡಿ ಮುಂದೆ ನಿಂತಿರುತ್ತೀರಿ. ಇದು ಉತ್ಪೇಕ್ಷೆಯಲ್ಲ. ಜಿಲೇಬಿ ಪ್ರಿಯರ ಅನುಭವದ ಮಾತುಗಳೂ ಹೌದು.ಏನೇ ಹೇಳ್ರಿ... ಬ್ಯಾರೆ ಕಡೆ ಜಿಲೇಬಿ ತಂದು ತಿಂದ್ರು ಇಷ್ಟು ರುಚಿ ಅನ್ಸೋ ಹಾಗಿಲ್ಲ. ಇಲ್ಲಿ ತಗೊಂಡು ತಿಂದ್ರ ಟೇಸ್ಟ ಬೇರೆ ಅಂತಾನೂ ಹೇಳ್ತಾರೆ.ಇದು ರಾಜಸ್ತಾನ ಮೂಲದ ವಿಷ್ಣು ಎಂಬುವವರು ತಯಾರಿಸುವ ‘ಜಿಲೇಬಿ’ ಸವಿಮಾತು. 22 ವರ್ಷದ ಹಿಂದೆ ನಗರದ ಮಿಠಾಯಿ ಅಂಗಡಿಯೊಂದರಲ್ಲ್ಲಿ ಕೆಲಸಕ್ಕೆಂದು ಬಂದವರು ರಾಜಸ್ತಾನ ನಾಗೋಡ ಜಿಲ್ಲೆಯ ವಿಷ್ಣು. ಕೆಲ ವರ್ಷಗಳ ಬಳಿಕ ಆ ಮಿಠಾಯಿ ಅಂಗಡಿ ಮುಚ್ಚಿತು. ದಿಕ್ಕು ಕಾಣದೇ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದು ಜಿಲೇಬಿ ಮತ್ತು ಮಸಾಲಾ ಮಿರ್ಚಿ ತಯಾರಿಸಿ ಮಾರಾಟ ಮಾಡುವುದು. ಹೀಗೆ ಎರಡು ದಶಗಕಗಳಿಂದ ಈ ಉದ್ಯೋಗ ಮಾಡುತ್ತಿದ್ದಾರೆ.ಸ್ಪೆಷಲ್‌ ಏನು: ಮಹಾವೀರ ವೃತ್ತದ ಹತ್ತಿರ (ಗಾಂಧಿಚೌಕ್‌ಗೆ ಹೋಗುವ ರಸ್ತೆ ಪಕ್ಕ) ತಳ್ಳು ಗಾಡಿಯಲ್ಲಿ ಇವರ ಜಿಲೇಬಿ ವ್ಯಾಪಾರ. ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ. ಸಂಜೆ 7ರಿಂದ 10 ಗಂಟೆಯವರೆಗೆ ಮಾತ್ರ ಜಿಲೇಬಿ ತಯಾರಿ ಮತ್ತು ಮಾರಾಟ. ಭಾನುವಾರ ದಿನಪೂರ್ತಿ ವ್ಯಾಪಾರ !ಇದೇ ರಸ್ತೆಯ ಎಸ್‌ಬಿಎಚ್‌ ಬ್ಯಾಂಕ್‌ ಸಮೀಪ ಮಂಗಳವಾರದಿಂದ ಶುಕ್ರವಾರ ಸಂಜೆ ಮಸಾಲಾ ಮಿರ್ಚಿ. ತಡವಾಗಿ ಹೋದರೆ ಜಿಲೇಬಿ ಸಿಕ್ಕುವುದಿಲ್ಲ. ಹೀಗಾಗಿ ಜಿಲೇಬಿ ಪ್ರಿಯರು ಇವರ ಜಿಲೇಬಿ ಗಾಡಿ ಮುಂದೆ ಇದ್ದೇ ಇರುತ್ತಾರೆ.ನಾನು  ಜಿಲೇಬಿ ತಯಾರಿ ಮಾಡುವುದು ಡಾಲ್ಡಾ ತುಪ್ಪದಲ್ಲಿ. ಯಾಲಕ್ಕಿ ಮಿಶ್ರಣ ಮಾಡುತ್ತೇನೆ. ಮೆತ್ತಗಾಗಿದ್ದರೆ ರುಚಿ ಎನಿಸುವುದಿಲ್ಲ. ಕ್ರಿಸ್ಪಿ ಇದ್ರೆ ಟೇಸ್ಟ್‌. ಜಿಲೇಬಿ ತಯಾರಿಸಿ ಇಡುವುದಿಲ್ಲ. ಏನಿದ್ದರೂ ಆಗಲೇ ತಯಾರಿಸಿ ಆಗಲೇ ಮಾರಾಟ. ಕಡಿಮೆ ವ್ಯಾಪಾರ ಆಗಲಿ. ಆದರೆ, ಸಂಗ್ರಹ ಮಾಡಿ ಮಾರಾಟ ಮಾಡುವುದಿಲ್ಲ.  ಎರಡು ದಶಕದಿಂದ ಇಲ್ಲಿನ ಜನ ನಾನು ತಯಾರಿಸಿದ ಜಿಲೇಬಿ ಸವಿದು ಪ್ರೋತ್ಸಾಹಿಸಿದ್ದಾರೆ. ಬೇರೆ ಜಿಲ್ಲೆ, ರಾಜ್ಯಗಳಿಗೆ 10,20 ಕೆಜಿ ಪಾರ್ಸಲ್‌ ಒಯ್ತಾರೆ. ಮದುವೆ, ಬೇರೆ ಸಮಾರಂಭಗಳಿಗೂ ತಯಾರಿಸಿ ಕೊಡುತ್ತೇನೆ ಎಂದು ವಿಷ್ಣು ಹೇಳಿದ್ರು.ರುಚಿ ಕಾಯ್ದುಕೊಂಡರೆ ಗ್ರಾಹಕರು ಬರುತ್ತಾರೆ. ಅನೇಕ ಮಿಠಾಯಿ ಅಂಗಡಿಯವರು ಜಿಲೇಬಿ ತಯಾರಿಸುತ್ತಾರೆ. ಅವ್ರೂ ಇಲ್ಲಿಗೆ ಬಂದು ಬಿಸಿ ಬಿಸಿ ಜಿಲೇಬಿ ತಿನ್ತಾರೆ. ಖುಷಿ ಪಡ್ತಾರೆ. ಇಷ್ಟು ವರ್ಷದಿಂದ ವ್ಯಾಪಾರ ಮಾಡುತ್ತಿದ್ದು, ಇಲ್ಲಿನ ವ್ಯಾಪಾರಸ್ಥರು ಸಹಕರಿಸಿದ್ದಾರೆ. ಯಾರಿಂದಲೂ ತೊಂದ್ರೆ ಆಗಿಲ್ಲ ಎಂದು ವಿಷ್ಣು ತಮ್ಮ ತಯಾರಿಯ ಜಿಲೇಬಿ ವ್ಯಾಪಾರ ನಡೆದು ಬಂದ ಪರಿ ವಿವರಿಸಿದ್ರು. ಧೂಳು ತಗಲದಂತೆ ಎಚ್ಚರಿಕೆ ವಹಿಸಿ ಗ್ರಾಹಕರಿಗೆ ವಿತರಿಸುತ್ತಿರುವುದಾಗಿ ಹೇಳಿದರು.ಜಿಲೇಬಿ ಪ್ರಿಯರ ಅಭಿಪ್ರಾಯ

ಬೆಲೆ ಜಾಸ್ತಿ, ಆದರೂ ಸ್ವೀಟ್‌...


ಬಹಳ ವರ್ಷಗಳಿಂದ ಇಲ್ಲಿನ ಜಿಲೇಬಿ ಸವಿಯುತ್ತಿದ್ದೇವೆ ಅದೇ ಟೇಸ್ಟ್‌. ಬೇರೆ ಅಂಗಡಿಗಿಂತ ಬೆಲೆ ಜಾಸ್ತಿ ಆದ್ರೂ ಟೇಸ್ಟ್‌ ಮುಖ್ಯ. ಹೀಗಾಗಿ ಇಲ್ಲಿ ಖರೀದಿಸುತ್ತೇವೆ. ನಮ್ ತಂದೆಯ­ವರಿಗೆ ಈ ಜಿಲೇಬಿ ಅಂದ್ರೆ ಇನ್ನೂ ಇಷ್ಟ. ಫೋನ್ ಮಾಡಿ ಜಿಲೇಬಿ ತರೋದಕ್ಕ ಹೇಳ್ತಾರ.

- ಚಂದ್ರು, ರಾಯಚೂರು.

ಸದಾ ‘ಗರಂ’ ಜಿಲೇಬಿ

ತುಪ್ಪದಲ್ಲಿ ಜಿಲೇಬಿ ಮಾಡಿರುವುದು. ಸದಾ ‘ಗರಂ’ ಆಗಿರುತ್ತೆ. ಎಷ್ಟು ತಿಂದ್ರು ಸ್ವೀಟ್ ಹೆಚ್ಚಾಯ್ತು ಅನ್ಸೋದಿಲ್ಲ. ಹೀಗಾಗಿ ಇಲ್ಲಿಗೆ ಬಂದು ಜಿಲೇಬಿ ತಿನ್ತೇವೆ. ಮನೆಗೆ ಪಾರ್ಸಲ್‌ ತೆಗೆದುಕೊಳ್ಳುತ್ತೇವೆ.

- ಮಹೆಬೂಬ್‌, ರಾಯಚೂರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry