ರಾಜಹಂಸಗಡ ಅಭಿವೃದ್ಧಿಗೆ ಎಂಇಎಸ್ ಅಡ್ಡಿ_ ಶಾಸಕ ಸಂಜಯ ಪಾಟೀಲ ಆರೋಪ

7

ರಾಜಹಂಸಗಡ ಅಭಿವೃದ್ಧಿಗೆ ಎಂಇಎಸ್ ಅಡ್ಡಿ_ ಶಾಸಕ ಸಂಜಯ ಪಾಟೀಲ ಆರೋಪ

Published:
Updated:

ಬೆಳಗಾವಿ: “ರಾಜಹಂಸಗಡವನ್ನು ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುತ್ತಿರುವುದಕ್ಕೆ ರಾಜಕೀಯ ದುರುದ್ದೇಶದಿಂದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಡ್ಡಿಪಡಿಸುತ್ತಿದೆ” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಆರೋಪಿಸಿದರು.ರಜಹಂಸಗಡದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ವಿವರ ನೀಡಲು ಕೋಟೆಯಲ್ಲಿರುವ ಸಿದ್ಧೇಶ್ವರ ಗುಡಿಯಲ್ಲಿ ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಿವಾಜಿ ಸುಂಟಕರ ನೇತೃತ್ವದಲ್ಲಿ ಎಂಇಎಸ್ ಕಾರ್ಯಕರ್ತರು ಗದ್ದಲ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.“ಹಿಂದೂಗಳ ಆರಾದ್ಯರಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕವನ್ನಾಗಿ ರಾಜಹಂಸಗಡವನ್ನು ಅಭಿವೃದ್ಧಿಪಡಿಸಲು ನಾವು ಮುಂದೆ ಬಂದಿರುವುದು ಎಂಇಎಸ್‌ನವರಿಗೆ ಸಹಿಸಲಾಗುತ್ತಿಲ್ಲ. ಕಳೆದ 50 ವರ್ಷಗಳಿಂದ ರಾಜಹಂಸಗಡ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಇದೀಗ ಈ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಅಭಿವೃದ್ಧಿ ಕೈಗೆತ್ತಿಕೊಂಡಿರುವುದು ಎಂಇಎಸ್‌ಗೆ ನುಂಗಲಾರದ ತುತ್ತಾಗಿದೆ” ಎಂದು ಹೇಳಿದರು.“ಕೋಟೆ ಅಭಿವೃದ್ಧಿಪಡಿಸಲು ರೂ. 10 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ರೂ. 4 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ರಸ್ತೆ ಹಾಗೂ ಸೇತುವೆ, ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪುರಾತತ್ವ ಇಲಾಖೆ ಮಾರ್ಗದರ್ಶನದಲ್ಲಿ ಕೋಟೆಯನ್ನು ಅಭಿವೃದ್ಧಿಪಡಿಸಿ, 21 ಅಡಿ ಎತ್ತರದ ಶಿವಾಜಿ ಪುತ್ಥಳಿ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.ವಾಗ್ವಾದ: ರಾಜಹಂಸಗಡ ಅಭಿವೃದ್ಧಿ ಚಟುವಟಿಕೆ ಬಗ್ಗೆ ಶಾಸಕರು ಪತ್ರಕರ್ತರಿಗೆ ವಿವರ ನೀಡುತ್ತಿದ್ದಾಗ ಮಾಜಿ ಮೇಯರ್ ಶಿವಾಜಿ ಸುಂಟಕರ ಹಾಗೂ ಕಿರಣ ಗಾವಡೆ ಆಗಮಿಸಿ ಕೋಟೆಯನ್ನು ಯಥಾಸ್ಥಿತಿಯಲ್ಲೇ ಇಡಬೇಕು ಎಂದು ಒತ್ತಾಯಿಸಿದರು.ರಾಜಹಂಸಗಡ ಅಭಿವೃದ್ಧಿ ಹೆಸರಿನಲ್ಲಿ ಕೋಟೆಯ ಅಸ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ. ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸದೇ ಅಗತ್ಯಕ್ಕಿಂತ ಹೆಚ್ಚು ಗುಡ್ಡವನ್ನು ಬಗೆದು ರಸ್ತೆ ನಿರ್ಮಿಸಲಾಗುತ್ತಿದೆ. ಇಲ್ಲಿನ ಖನಿಜಯುಕ್ತ ಮಣ್ಣನ್ನು ಬೇರೆ ಕಡೆಗೆ ಸಾಗಿಸಲಾಗುತ್ತಿದೆ. ಹೀಗಾಗಿ ಇಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಬೇಡ ಎಂದು ವಾದ ಮಂಡಿಸಿದರು. ಇದನ್ನು ಬೆಂಬಲಿಸಿ ಎಂಇಎಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.ಇದರಿಂದ ಸಿಟ್ಟಿಗೆದ್ದ ಶಾಸಕರು, “ಕೋಟೆಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುತ್ತಿಲ್ಲ. ಕೋಟೆ ಎದುರುಗಡೆ ಅಗತ್ಯಕ್ಕಿಂತ ಹೆಚ್ಚು ಗುಡ್ಡ ಅಗೆದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳೋಣ. ಕೋಟೆಗೆ ಧಕ್ಕೆಯಾಗದಂತೆ ಅಲ್ಲಿ ತಡೆಗೋಡೆ ನಿರ್ಮಿಸೋಣ. ಅದನ್ನು ಬಿಟ್ಟು ರಾಜಕೀಯ ದುರುದ್ದೇಶದಿಂದ ಕೋಟೆ ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ. ಇಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ” ಎಂದು ತಿರುಗೇಟು ನೀಡಿದರು.ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು ಹಾಗೂ ಎಂಇಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.  ಶಾಸಕ ಸಂಜಯ ಪಾಟೀಲ ಹಾಗೂ ಶಿವಾಜಿ ಸುಂಟಕರ ಮತ್ತು ಕಿರಣ ಗಾವಡೆ ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಗ್ವಾದ ನಡೆಯಿತು.`ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಹಣ ತರುವುದು ಜನಪ್ರತಿನಿಧಿಗಳ ಕೆಲಸ. ಕೆಲಸ ಕೈಗೊಳ್ಳುವಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ, ಅದನ್ನು ಸರಿಪಡಿಸೋಣ. ಇಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ನಿಮ್ಮ ಸಲಹೆಗಳನ್ನೂ ನೀಡಿ. ಅವುಗಳನ್ನೂ ಯೋಜನೆಯೊಳಗೆ ಸೇರಿಸಿಕೊಳ್ಳುತ್ತೇವೆ~ ಎಂಬ ಭರವಸೆಯನ್ನು ಶಾಸಕ ಸಂಜಯ ಪಾಟೀಲ ನೀಡುವುದರೊಂದಿಗೆ ಚರ್ಚೆಗೆ ತೆರೆ ಎಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry