ಶುಕ್ರವಾರ, ನವೆಂಬರ್ 22, 2019
27 °C
ಅದ್ದೂರಿ ಫಲ, ಪುಷ್ಪ ಪ್ರದರ್ಶನ

ರಾಜಾಸೀಟ್‌ಗೆ ಲಗ್ಗೆ ಇಟ್ಟ ಜನ

Published:
Updated:

ಮಡಿಕೇರಿ: ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ನಡೆಯುತ್ತಿರುವ ಫಲ, ಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಹೊರಜಿಲ್ಲೆಗಳಿಂದ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡಿದ್ದರು. ಕರ್ನಾಟಕದ ಕಾಶ್ಮೀರ, ಮಂಜಿನ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಮಡಿಕೇರಿಗೆ ನಿಸರ್ಗ ಸೌಂದರ್ಯ ನೋಡಲು ಪ್ರವಾಸಿಗರು ಬರುವುದು ಸಹಜ. ಈಗ ಫಲ, ಪುಷ್ಪ ಪ್ರದರ್ಶನ ಇದಕ್ಕೆ ಇನ್ನಷ್ಟು ವೆುರಗು ತಂದುಕೊಟ್ಟಿದೆ.ಪ್ರತಿವರ್ಷದಂತೆ ಈ ಬಾರಿಯು ಬೇಸಿಗೆಯ ವೇಳೆಯಲ್ಲಿಯೇ ಪ್ರದರ್ಶನ ಏರ್ಪಡಿಸಲಾಗಿದೆ. ಶಾಲಾ-ಕಾಲೇಜಿನ ಮಕ್ಕಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯೂ ಸೇರಿದಂತೆ ಹೊರ ರಾಜ್ಯಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.ರಾಜಾಸೀಟ್‌ನಲ್ಲಿ ಒಂದು ಸುತ್ತು ಹಾಕಿ ವಿವಿಧ ಫಲಪುಷ್ಪಗಳನ್ನು ವೀಕ್ಷಿಸಿದ ನಂತರ ಪ್ರವಾಸಿಗರು ಪಕ್ಕದಲ್ಲಿಯೇ ಇರುವ ಕಾವೇರಿ ಎಕ್ಸ್‌ಪ್ರೆಸ್ ಪುಟಾಣಿ ರೈಲಿನಲ್ಲಿ ಸುತ್ತಾಡುತ್ತಾರೆ. ಯುವಕರು, ವೃದ್ಧರು ಕೂಡ ಪುಟಾಣಿ ರೈಲು ಏರಿದ ತಕ್ಷಣ ಮಕ್ಕಳಂತಾಗಿ ಬಿಡುತ್ತಾರೆ.ಫಲ, ಪುಷ್ಪ ಪ್ರದರ್ಶನದ ವಿಶೇಷತೆ:

ಕುಂಡಗಳಲ್ಲಿ ಸುಮಾರು 4000 ವಿವಿಧ ಜಾತಿಯ ಹೂವುಗಳಾದ ಚೆಂಡು ಹೂವು, ಸೆಲೋಷಿಯಾ, ಸಾಲ್ವಿಯಾ, ಜೀನಿಯ, ಬಿಗೋನಿಯ, ಇಮ್‌ಪೇಷನ್ಸ್, ಪಿಟೋನಿಯ, ಪ್ಲಾಸ್ಕ್, ಪಿಂಕ್ಸ್, ಡೈಯಾಂಥಸ್, ಕೋಲಿಯನ್ ಇತ್ಯಾದಿ ಹೂವುಗಳನ್ನು ನಾಟಿ ಮಾಡಿ ಪ್ರದರ್ಶನದಲ್ಲಿ ಇಡಲಾಗಿದೆ.10,000 ವಿವಿಧ ಜಾತಿಯ ಹೂವುಗಳನ್ನು ಪಾತಿಗಳಲ್ಲಿ ನಾಟಿ ಮಾಡಿ ಪ್ರದರ್ಶಿಸಲಾಗಿದೆ. ಪೆಟೋನಿಯಾ, ಜಿೀನಿಯಾ, ವಿನ್‌ಕಾ, ಗೆಜೇನಿಯಾ, ಸಾನ್ಲಿಯಾ, ಕೋಯಿಯಸ್, ಭೂಸಾಲ್ವಿಯಾ, ಡಯಾಂತೋಸ್, ಪಿಂಕ್ಸ್, ಮೆರಿ ಗೋಲ್ಡ್, ಪೆಂಟಾಸ್ ಮತ್ತಿರರ ಆಕರ್ಷಕ ಹೂವಿನ ಬಳಿಗಳನ್ನು ನೋಡುಗರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.ಪ್ರದರ್ಶನದ ಪ್ರಮುಖ ಆಕರ್ಷಣೆ

ಪ್ರದರ್ಶನದಲ್ಲಿ ಮರಳಿನಿಂದ ಸುಂದರ ಕಲಾಕೃತಿಗಳನ್ನು ರಚಿಸಲಾಗಿದೆ. ದಿನನಿತ್ಯ ಬಳಸುವ ತರಕಾರಿಗಳಿಂದ ಬಗೆಬಗೆಯ ವಿನ್ಯಾಸದಲ್ಲಿ ಕೆತ್ತೆನೆ ಮಾಡಿರುವ ಆಕೃತಿಗಳು ಪ್ರದರ್ಶನದಲ್ಲಿ ಕಾಣಸಿಗುತ್ತವೆ. ಬಾರ್ಬಿಡಾಲ್ ಸಿಂಡ್ರೆಲಾದಿಂದ ಕಾವೇರಿ ಮಾತೆಯ ಬಿಂಬದಂತಿರುವ  ಆಕೃತಿ ನೋಡುಗರನ್ನು ಕಣ್ಮನ ಸೆಳೆಯುತ್ತದೆ.ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ತೆಂಗಿನ ಸುಳಿ ಗರಿಗಳಿಂದ ಸಿಂಗರಿಸಿದ ಬಾಳೆ ಮಂಟಪ ಹಾಗೂ ಚಕ್ಕಡಿ ಆಕೃತಿಗೆ ಹೂಬಳ್ಳಿಗಳಿಂದ ಚಿತ್ತಾರ ಮೂಡಿಸಿರುವ ದೃಶ್ಯ ನೋಡುಗರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.ಚುನಾವಣೆ ಪರಿಣಾಮವಿದು

ಪ್ರಸ್ತುತ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾಡಳಿತವು ಸರಳವಾಗಿ ಆಯೋಜಿಸಿದೆ. ಯಾವುದೇ ಅದ್ಧೂರಿ ಸಮಾರಂಭವಿಲ್ಲದೇ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದ್ದು, ಸೋಮವಾರದವರೆಗೆ ಪ್ರದರ್ಶನ ನಡೆಯಲಿದೆ.ಫಲ, ಪುಷ್ಪ ಪ್ರದರ್ಶನವನ್ನು ಹೆಚ್ಚು ಜನಾಕರ್ಷಣೀಯವಾಗಿ ಮಾಡಲು ಆಂಥೋರಿಯಂ ಹೂವುಗಳಿಂದ ಸಿಂಡ್ರಾಲ್ಲ ಕಲಾಕೃತಿ, ಬಾಳೆಯ ದಿಂಡಿನಿಂದ ಮಂಟಪ, ತರಕಾರಿಗಳಿಂದ ವಿವಿಧ ಆಕೃತಿಗಳ ಕೆತ್ತನೆ ಹಾಗೂ ಮರಳು ಕಲಾಕೃತಿ ತಯಾರಿಸಿ ಪ್ರದರ್ಶಿಸಲಾಗುವುದು.ರಾಜಾಸೀಟು ಮಂಟಪದಲ್ಲಿ ವಿವಿಧ ಜಾತಿಯ ಹೂವುಗಳಿಂದ ಅಲಂಕಾರಗೊಳಿಸಲಾಗುವುದು. ಸ್ಥಳೀಯ ರೈತರ ಆಸಕ್ತಿಯಿಂದ ಬೆಳೆಯಲಾದ ಬೋನ್ಸಾಯ್ ಕುಂಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಮಡಿಕೇರಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)