ರಾಜಾ ಏಕೆ ಪ್ರಧಾನಿ ಸೂಚನೆ ಪಾಲಿಸಲಿಲ್ಲ: ಕೋರ್ಟ್ ಪ್ರಶ್ನೆ

7

ರಾಜಾ ಏಕೆ ಪ್ರಧಾನಿ ಸೂಚನೆ ಪಾಲಿಸಲಿಲ್ಲ: ಕೋರ್ಟ್ ಪ್ರಶ್ನೆ

Published:
Updated:

ನವದೆಹಲಿ, (ಐಎಎನ್‌ಎಸ್): 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಅವರಿಗೆ ಬರೆದಿದ್ದ ಪತ್ರದಲ್ಲಿನ ಸೂಚನೆಗಳನ್ನು ಏಕೆ ಪಾಲಿಸಲಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಪ್ರಶ್ನಿಸಿದೆ.

ಪ್ರಧಾನಿ ತರಂಗಾಂತರ ಹಂಚಿಕೆಯನ್ನು ಹರಾಜಿನ ಮೂಲಕ ಮಾಡುವ ಬಗ್ಗೆ ಒಲವು ತೋರಿರುವುದು ಪತ್ರದಲ್ಲಿ ಸ್ಪಷ್ಟವಾಗಿದ್ದು, ಅವರ ಸೂಚನೆಯನ್ನು ಪಾಲಿಸಿದ್ದರೆ ಹಗರಣವಾಗುತ್ತಿರಲಿಲ್ಲ ಎಂದು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎಚ್.ಎಲ್.ದತ್ತು ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಖಾಸಗಿ ಟೆಲಿಕಾಂ ಕಂಪೆನಿಗಳ ಇಬ್ಬರು ಕಾರ್ಯನಿರ್ವಾಹಕರ ಜಾಮೀನು ಅರ್ಜಿ ವಿಚಾರಣೆ ವೇಳೆ ಪೀಠ ಹೀಗೆ ಪ್ರತಿಕ್ರಿಯಿಸಿದೆ.

ಪ್ರಧಾನಿ ಅವರಿಗೆ ಮಾರನೇ ದಿನ ಉತ್ತರಿಸಿದ್ದ ರಾಜಾ ಅವರು, ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ತರಂಗಾಂತರ ಹಂಚಲಾಗುವುದು ಮತ್ತು ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು. ದೂರಸಂಪರ್ಕ ಖಾತೆ ಸಚಿವರಾಗಿ ರಾಜಾ ಎಡವಿರುವುದರಿಂದ ಕನಿಮೊಳಿ ಸೇರಿದಂತೆ 14 ಮಂದಿಯ ಜಾಮೀನಿಗೆ ಸರ್ಕಾರ ಏಕೆ ವಿರೋಧಿಸುತ್ತಿದೆ ಎಂಬುದನ್ನು ಪೀಠ ತಿಳಿಯಬಯಸಿತು. ಇದೇ ಸಂದರ್ಭದಲ್ಲಿ ಅಡಿಷನಲ್ ಸಾಲಿಸಿಟರ್ ಜನರಲ್ ಹರೇನ್ ರಾವಲ್ ಅವರು ಕಾನೂನು ಸಚಿವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು.  ಉದ್ಯಮಿಗಳು ಜೈಲಿನಲ್ಲಿ ಉಳಿದರೆ ದೇಶದಲ್ಲಿ ಬಂಡವಾಳ ಹೂಡುವವರು ಹಿಂದೇಟು ಹಾಕುತ್ತಾರೆ ಎಂಬ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಯು ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

`ವಿಶ್ವಾಸದ್ರೋಹ ಆರೋಪ ಸಲ್ಲ~

ನವದೆಹಲಿ, (ಪಿಟಿಐ): 2ಜಿ ತರಂಗಾಂತರ ಹಂಚಿಕೆಯಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಪಾತ್ರವಿದೆ ಎಂದು ಸಿಬಿಐ ಎಲ್ಲಿಯೂ ಹೇಳಿರದ ಕಾರಣ ಅವರ ವಿರುದ್ಧ ವಿಶ್ವಾಸದ್ರೋಹದ ಆಪಾದನೆ ಹೊರಿಸಲು ಸಾಧ್ಯವಿಲ್ಲ ಎಂದು ಗುರುವಾರ ನ್ಯಾಯಾಲಯಕ್ಕೆ ತಿಳಿಸಲಾಯಿತು. ಕನಿಮೊಳಿ ಮತ್ತು ಕಲೈಂಜ್ಞರ್ ಟಿ.ವಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರತ್ ಕುಮಾರ್ ಸರ್ಕಾರಿ ನೌಕರರಲ್ಲ ಮತ್ತು ತರಂಗಾಂತರ ಹಂಚಿಕೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ಆದ್ದರಿಂದ ಅವರಿಬ್ಬರ ವಿರುದ್ಧ ವಿಶ್ವಾಸದ್ರೋಹದ ಆಪಾದನೆಯನ್ನು ಹೊರಿಸಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ ಅಲ್ತಾಫ್ ಅಹಮದ್ ವಾದಿಸಿದರು.

ದೋಷಾರೋಪ ಪಟ್ಟಿಯಲ್ಲಿ ಕನಿಮೊಳಿ ಅವರು ತರಂಗಾಂತರ ಹಂಚಿಕೆಯಲ್ಲಿ ಪಾತ್ರ ವಹಿಸಿರುವ ಬಗ್ಗೆ ಪ್ರಸ್ತಾಪವಿಲ್ಲ. ಆದ್ದರಿಂದ ಈಗ ವಿಶ್ವಾಸದ್ರೋಹ ಆಪಾದನೆ ಹೊರಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಅವರು ವಿಶೇಷ ನ್ಯಾಯಾಧೀಶರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry