ರಾಜಾ ಐದು ದಿನ ಸಿಬಿಐ ವಶಕ್ಕೆ

7

ರಾಜಾ ಐದು ದಿನ ಸಿಬಿಐ ವಶಕ್ಕೆ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಂಧಿಸಲಾಗಿರುವ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಮತ್ತು ಅವರಿಗೆ ಆಪ್ತರಾಗಿದ್ದ ಇಬ್ಬರು ಮಾಜಿ ಅಧಿಕಾರಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯವು ಗುರುವಾರ ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.ರಾಜಾ, ದೂರಸಂಪರ್ಕ ಇಲಾಖೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೇಹೂರ ಮತ್ತು ರಾಜಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂದೋಲಿಯಾ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ.ಸೈನಿ ಸಿಬಿಐ ವಶಕ್ಕೆ ಒಪ್ಪಿಸುವ ಆದೇಶ ಹೊರಡಿಸಿದರು.ಬೂದು ಬಣ್ಣದ ಸಫಾರಿ ಧರಿಸಿದ್ದ ರಾಜಾ ಅವರು ಯಾವುದೇ ರೀತಿಯ ಭಾವೋದ್ವೆಗಕ್ಕೆ ಒಳಗಾಗದೆ ನ್ಯಾಯಾಲಯದಲ್ಲಿ ಹಾಜರಾಗಿ ನ್ಯಾಯಾಧೀಶರಿಗೆ ಕೈಮುಗಿದು ನಿಂತರು. ಈ ಸಂದರ್ಭದಲ್ಲಿ ಅವರ ವಕೀಲರಾದ ರಮೇಶ್ ಗುಪ್ತಾ ಅವರು ಖಾಸಗಿ ಸಮಾಲೋಚನೆಗೆ ಅವಕಾಶ ಕೋರಿದಾಗ ನ್ಯಾಯಾಧೀಶರು 10 ನಿಮಿಷಗಳ ಅವಕಾಶ ನೀಡಿದರು.ರಾಜಾ ಅವರು ಸಚಿವರಾಗಿದ್ದಾಗ ಕೆಲವು ಟೆಲಿಕಾಂ ಕಂಪೆನಿಗಳ ಬಗ್ಗೆ  ವಿಶೇಷ ಆಸಕ್ತಿ ತೋರಿಸಿದ್ದರಿಂದ ಬೊಕ್ಕಸಕ್ಕೆ 22 ಸಾವಿರ ಕೋಟಿ ನಷ್ಟವಾಗಿದೆ ಎಂದು ಸಿಬಿಐ ಪರ ವಕೀಲ ಅಖಿಲೇಶ್ ಅವರು ವಾದಿಸಿದರು.ರಾಜಾ ಅವರ ನಿರ್ಧಾರದಿಂದಾಗಿ ಸ್ವಾನ್ ಮತ್ತು ಯೂನಿಟೆಕ್ ಟೆಲಿಕಾಂ ಕಂಪೆನಿಗಳಿಗೆ ನೂರಾರು ಕೋಟಿ ಲಾಭವಾಗಿದ್ದು, ಈ ಕಂಪೆನಿಗಳು ಲೈಸೆನ್ ಸಿಕ್ಕ ಕೂಡಲೇ ಇತರ ಜಾಗತಿಕ ಕಂಪೆನಿಗಳಿಗೆ ತರಂಗಾಂತರವನ್ನು ಹಂಚಿಕೆ ಮಾಡಿ ಲಾಭ ಮಾಡಿಕೊಂಡಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.ಸಿಬಿಐ ಪ್ರಧಾನ ಕಚೇರಿಯಲ್ಲಿ ನಡೆಸಲಾದ ವಿಚಾರಣೆ ಸಂದರ್ಭದಲ್ಲಿ ರಾಜಾ ಅವರು ಹಾರಿಕೆ ಉತ್ತರ ನೀಡಿರುವುದರಿಂದ ಹೆಚ್ಚಿನ ವಿಚಾರಣೆಗೆ ಅವರನ್ನು ಸಿಬಿಐ ವಶಕ್ಕೆ ಅಗತ್ಯವಾಗಿದೆ ಎಂದು ಅಖಿಲೇಶ್ ವಾದಿಸಿದರು.ಕಳೆದ ಅಕ್ಟೋಬರ್‌ನಲ್ಲಿ ಸಿಬಿಐ ಕೆಲ ಅನಾಮಧೇಯ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಸಿದ ನಂತರ ಇದೇ ಮೊದಲ ಬಾರಗೆ ರಾಜಾ ವಿರುದ್ಧ ನೇರ ಆಪಾದಿಸಿ ಬಂಧಿಸಿದೆ.ಸಿವಿಸಿ ಲೆಕ್ಕಾಚಾರವನ್ನು ಅನುಸರಿಸಿ ಸಿಬಿಐ ಒಟ್ಟು ನಷ್ಟ 22 ಸಾವಿರ ಕೋಟಿ ಎಂದು ಹೇಳಿದೆ. ಆದರೆ ಸಿಎಜಿ ವರದಿಯಲ್ಲಿ ಒಟ್ಟು ಅಂದಾಜು ನಷ್ಟ 1.76 ಲಕ್ಷ ಕೋಟಿ ಎಂದು ಹೇಳಲಾಗಿದೆ.ಸಿಬಿಐ ವಕೀಲರ ವಾದವನ್ನು ವಿರೋಧಿಸಿದ ರಮೇಶ್ ಗುಪ್ತಾ ಅವರು, 2ಜಿ ತರಂಗಾಂತರ ಹಂಚಿಕೆ ಮಾಡುವಾಗ ಕೇಂದ್ರ ಸಚಿವ ಸಂಪುಟ ಮತ್ತು ಇತರ ಕಾನೂನು ಬದ್ಧ ಸಮಿತಿಗಳಿಂದ ಅನುಮತಿ ಪಡೆದುಕೊಂಡೇ ತಮ್ಮ ಕಕ್ಷಿದಾರ ರಾಜಾ ನಿರ್ಧಾರ ತೆಗೆದುಕೊಂಡಿರುವುದರಿಂದ ಅವರು ಈ ವಿಚಾರದಲ್ಲಿ ನಿರಪರಾಧಿ ಎಂದು ವಾದಿಸಿದರು.ಹಗರಣಲ್ಲಿ ರಾಜಾ ಒಬ್ಬರದೇ ಪಾತ್ರವಿಲ್ಲ ವಾ ಅವರೊಬ್ಬರೇ ಹೊಣೆಗಾರರಲ್ಲ. ಇನ್ನೂ ಅನೇಕ ಜನರು ಭಾಗಿಯಾಗಿದ್ದಾರೆ ಎಂದು ಹೇಳಿದರು.2010ರಲ್ಲೇ ಸಿಬಿಐ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡು ರಾಜಾ ಅವರನ್ನು ಪ್ರಧಾನ ಕಚೇರಿಯಲ್ಲಿ ಅನೇಕ ಬಾರಿ ವಿಚಾರಣೆ ನಡೆಸಿರುವುದರಿಂದ ಮತ್ತೆ ವಿಚಾರಣೆ ನಡೆಸಲು ವಶಕ್ಕೆ ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಗುಪ್ತಾ ಹೇಳಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry