ರಾಜಾ, ನೀರಾಗೆ ಸಿಬಿಐ ನೋಟಿಸ್

ನವದೆಹಲಿ (ಪಿಟಿಐ): ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ಸೋಮವಾರ ಮಾಜಿ ಸಚಿವ ಎ.ರಾಜಾ ಹಾಗೂ ಕಂಪೆನಿ ಮಧ್ಯವರ್ತಿ ನೀರಾ ರಾಡಿಯಾ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದೆ.
ರಾಜಾ ಅವರಿಗೆ ಭಾರತೀಯ ದಂಡಸಂಹಿತೆಯ 160ನೇ ವಿಧಿಯ ಅನ್ವಯ ನೋಟಿಸ್ ನೀಡಲಾಗಿದೆ. ಚೆನ್ನೈಯಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ನೋಟಿಸ್ ತಲುಪಿಸಲಾಗಿದೆ. ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಆದರೆ ಯಾವತ್ತು ವಿಚಾರಣೆಗೆ ಹಾಜರಾಗಲು ಸೂಚಿಸಿದೆ ಎಂಬುದು ಖಚಿತವಾಗಿಲ್ಲ.
ರಾಡಿಯಾ ಅವರಿಗೂ ಇದೇ ರೀತಿಯ ನೋಟಿಸ್ ನೀಡಲಾಗಿದೆ. ಐಪಿಸಿ 160 ರಂತೆ ನಿರ್ದಿಷ್ಟ ಆರೋಪಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಿ, ಸಹಕರಿಸಬೇಕು ಎಂದು ಸೂಚಿಸಿದೆ.
ಡಿಎಂಕೆಗೆ ಮುಜುಗರ ಇಲ್ಲ- ಕರುಣಾ: 2ಜಿ-ಹಗರಣ ಮತ್ತು ರಾಜಾ ಅವರನ್ನು ಸಿಬಿಐ ವಿಚಾರಣೆಗೆ ಕರೆಸಿರುವುದರಿಂದ ಪಕ್ಷದ ವರ್ಚಸ್ಸಿಗೆ ಕುಂದು ಉಂಟಾಗಿಲ್ಲ ಎಂದು ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ಸಮರ್ಥಿಸಿಕೊಂಡರು.
ರಾಜಾ ಅವರಿಗೆ ಸಿಬಿಐ ವಿಚಾರಣೆಗಾಗಿ ನೋಟಿಸ್ ನೀಡಿರುವುದು ಸಹಜ ಪ್ರಕ್ರಿಯೆ, ವಿಶೇಷ ಏನಿಲ್ಲ ಎಂದು ಕರುಣಾ ನಿಧಿ ಬಣ್ಣಿಸಿದ್ದಾರೆ.
ಹಗರಣ ಮತ್ತುಘಟನಾವಳಿಗಳಿಂದ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳ ನಡುವಿನ ಸಂಬಂಧಕ್ಕೆ ಹಾನಿ ಉಂಟಾಗಿಲ್ಲ. ಈ ಬಾಂಧವ್ಯ ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಆರೋಗ್ಯ ತಪಾಸಣೆ: ಈ ಮಧ್ಯೆ, ರಾಜಾ ಸೋಮವಾರ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಜಾಲ್
ವಿಚಾರಣೆ: ತನ್ಮಧ್ಯೆ, ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ)ದ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರನ್ನು ಸುಮಾರು ಮೂರೂವರೆ ತಾಸುಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.
ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬೈಜಾಲ್ ‘ನಾನು ನನ್ನ ವಿವರಣೆ’ಯನ್ನು ಸಿಬಿಐಗೆ ನೀಡಿದ್ದೇನೆ ಎಂದರು. ‘ಆ ವಿವರಣೆಗಳೇನು’ ಎಂಬ ಪ್ರಶ್ನೆಗೆ ‘ಪ್ರತಿಕ್ರಿಯಿಸಲಾರೆ’ ಎಂದು ನುಣುಚಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.