ಗುರುವಾರ , ಅಕ್ಟೋಬರ್ 17, 2019
21 °C

ರಾಜಿಯತ್ತ ಪಾಕ್ ಬಿಕ್ಕಟ್ಟು

Published:
Updated:

ಇಸ್ಲಾಮಾಬಾದ್/ವಾಷಿಂಗ್ಟನ್ (ಪಿಟಿಐ, ಐಎಎನ್‌ಎಸ್, ಎಎಫ್‌ಪಿ):   ಪಾಕಿಸ್ತಾನದಲ್ಲಿ ವಿವಾದಿತ ಮೆಮೊಗೇಟ್ ಹಗರಣದಿಂದ ಉಂಟಾಗಿರುವ ಸರ್ಕಾರ ಮತ್ತು ಸೇನೆಯ ನಡುವಿನ ಆಡಳಿತ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗ ಬಿಕ್ಕಟ್ಟು ರಾಜಿ ಸಂಧಾನದತ್ತ ಸಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಎರಡೂ ಬದಿಯಿಂದ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕೆ ವಿದೇಶಾಂಗ ರಾಜತಂತ್ರಜ್ಞರೂ ನೆರವಾಗುತ್ತಿದ್ದಾರೆ.

ಜರ್ದಾರಿ-ಕಯಾನಿ ಭೇಟಿ: ಆಡಳಿತ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಶನಿವಾರ ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರನ್ನು ಸೇನಾ ಮುಖ್ಯಸ್ಥ ಅಶ್ಫಾಕ್ ಪರ್ವೇಜ್ ಕಯಾನಿ ಭೇಟಿಯಾಗಿ ಮಾತುಕತೆ ನಡೆಸಿದರು.

ಸುಮಾರು ಒಂದು ತಾಸು ನಡೆದ ಈ ಸಭೆಯಲ್ಲಿ ಯಾವ ವಿಷಯವಾಗಿ ಚರ್ಚಿಸಲಾಯಿತು ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

`ಬ್ರಿಟನ್ ನೆರವು ಕೇಳಿಲ್ಲ~: ಪಾಕಿಸ್ತಾನದಲ್ಲಿ ಸೇನಾ ದಂಗೆ ತಡೆಯಲು ಪ್ರಧಾನಿ ಯೂಸುಫ್ ರಜಾ ಗಿಲಾನಿ ಬ್ರಿಟನ್ ನೆರವು ಕೇಳಿಲ್ಲ ಎಂದು ಅಧಿಕೃತ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಗಿಲಾನಿ ಕಳೆದ ವಾರ ಬ್ರಿಟಿಷ್ ಹೈಕಮಿಷನರ್ ಆ್ಯಡಂ ಥಾಮ್ಸನ್ ಅವರಿಗೆ ದೂರವಾಣಿ ಕರೆ ಮಾಡಿ, ಸೇನಾ ದಂಗೆ ತಪ್ಪಿಸಲು ಪಾಕ್ ಸರ್ಕಾರಕ್ಕೆ ಸಹಾಯ ಮಾಡುವಂತೆ ಕೋರಿದ್ದಾರೆ ಎಂಬ ವಿದೇಶಿ ಸುದ್ದಿ ಸಂಸ್ಥೆಯೊಂದರ ವರದಿಯನ್ನು ಪ್ರಧಾನಮಂತ್ರಿಗಳ ಭವನದ ವಕ್ತಾರರು ತಳ್ಳಿಹಾಕಿದ್ದಾರೆ.

ಲೋಧಿ ಆರೋಪ: ಮೆಮೊಗೇಟ್ ಹಗರಣದಲ್ಲಿ `ಸರ್ಕಾರದ ಪ್ರಮಾಣಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಕ್ಕೆ ತಮ್ಮನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ~ ಎಂದು ಮಾಜಿ ರಕ್ಷಣಾ ಕಾರ್ಯದರ್ಶಿ ನಯೀಮ್ ಖಾಲಿದ್ ಲೋಧಿ, ಆಪಾದಿಸಿದ್ದಾರೆ.

ಆನ್‌ಲೈನ್ ಸುದ್ದಿಸಂಸ್ಥೆಯೊಡನೆ ಮಾತನಾಡಿರುವ ಅವರು, `ತಮ್ಮದಲ್ಲದ ಪ್ರಮಾಣಪತ್ರಕ್ಕೆ ತಾವು ಹೇಗೆ ಸಹಿ ಹಾಕುವುದು ಸಾಧ್ಯ~ ಎಂದು ಮರುಪ್ರಶ್ನಿಸಿದ್ದಾರೆ.

ಶೀಘ್ರ ಪಾಕ್‌ಗೆ ಇಜಾಜ್

ಪಾಕಿಸ್ತಾನ ಮೂಲದ ವಿವಾದಾತ್ಮಕ  ವಾಣಿಜ್ಯೋದ್ಯಮಿ ಮನ್ಸೂರ್ ಇಜಾಜ್ ಮೆಮೊಗೇಟ್ ಹಗರಣದ ಸತ್ಯವನ್ನು ಪಾಕ್ ಸುಪ್ರೀಂಕೋರ್ಟ್ ಮುಂದೆ ಬಹಿರಂಗಪಡಿಸಲು ತಾವು ಶೀಘ್ರ ಸ್ವದೇಶಕ್ಕೆ ತೆರಳುವುದಾಗಿ ಶನಿವಾರ ತಿಳಿಸಿದ್ದಾರೆ.

`ಇಜಾಜ್‌ಗೆ ಯಾವುದೇ ಬೆದರಿಕೆ ಇಲ್ಲ ಮತ್ತು ಭದ್ರತೆ ಒದಗಿಸಲಾಗುತ್ತದೆ~ ಎಂದು ಪಾಕ್ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಹೇಳಿಕೆ ನೀಡಿದ ಬೆನ್ನಲ್ಲೇ, ಅವರಿಂದ ಮಾಧ್ಯಮಗಳಿಗೆ ಈ ಹೇಳಿಕೆ ಹೊರಬಿದ್ದಿದೆ. ಆದರೆ ಅವರು ತಮ್ಮ ಭೇಟಿಯ ದಿನಾಂಕ ಪ್ರಕಟಿಸಿಲ್ಲ.

Post Comments (+)