ಮಂಗಳವಾರ, ನವೆಂಬರ್ 19, 2019
24 °C

ರಾಜಿಸೂತ್ರಕ್ಕೆ ಸಿಲುಕಿದ ಚಳವಳಿ: ವಿಷಾದ

Published:
Updated:

ಬೆಳಗಾವಿ: `ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಚಳವಳಿಗಳು ರಾಜಿಸೂತ್ರ ಅನುಸರಿಸಿರುವುದು ಕಳವಳಕಾರಿ ಬೆಳವಣಿಗೆ' ಎಂದು ಹಿರಿಯ ಸಾಹಿತಿ ಪ್ರೊ. ಬರಗೂರ ರಾಮಚಂದ್ರಪ್ಪ ವಿಷಾದಿಸಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್‌ರ 122ನೇ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, `20ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿನಾಶಕ್ಕಾಗಿ ಮಾಡಿದ ಹೋರಾಟಗಳು ಪಡೆದ ಸೂಕ್ಷ್ಮ ತಿರುವುಗಳನ್ನು ನಾವು ಪುನರ್ ಮೌಲ್ಯೀಕರಣ ಪ್ರಕ್ರಿಯೆಗೆ ಒಳಪಡಿಸಬೇಕು' ಎಂದು ಹೇಳಿದರು.ಸಾಮಾಜಿಕ, ಆರ್ಥಿಕ ಹಾಗೂ ಲಿಂಗ ತಾರತಮ್ಯವಿಲ್ಲದ ಸಮಾನತೆಯ ಸೈದ್ಧಾಂತಿಕ ನಿಲುವುನ್ನು ತಾಳುವುದೇ ಅಂಬೇಡ್ಕರ್ ಜಯಂತಿ ಆಶಯವಾಗಿದೆ. 20ನೇ ಶತಮಾನದಲ್ಲಿ ಇಂಥ ಚಳವಳಿಯನ್ನು ಅಂಬೇಡ್ಕರ್ ಬಯಸಿದ್ದರು. ಆದರೆ, 21ನೇ ಶತಮಾನದ ಮೊದಲ ಹಂತದಲ್ಲಿ ಖಾಸಗೀಕರಣ ಪ್ರಕ್ರಿಯೆಯಿಂದ ಚಳವಳಿಗೆ ಹಿನ್ನೆಡೆಯಾಗಿದೆ. ಅಂಬೇ ಡ್ಕರ್ ಅವರು ಖಾಸಗೀಕರಣವನ್ನು ಬಲವಾಗಿ ವಿರೋಧಿಸಿದ್ದರು' ಎಂದು ಬರಗೂರ ಹೇಳಿದರು.ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಾಧ್ಯಕ್ಷ ಡಾ. ಬಿ.ವಿ. ವಸಂತಕುಮಾರ, `ಅಂಬೇಡ್ಕರರು ನಂಜನ್ನು ಉಂಡು ಅಮೃತವನ್ನು ಸಮಾಜಕ್ಕೆ ನೀಡಿದ್ದಾರೆ. ಭಾರತವು ಪ್ರಪಂಚಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಲ್ಲಿ ಅಂಬೇಡ್ಕರ್ ಸಹ ಒಂದಾಗಿದೆ' ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರೊ. ಬಿ.ಆರ್. ಅನಂತನ್, `ಜಾತಿ ವ್ಯವಸ್ಥೆಯ ದಳ್ಳುರಿಯಲ್ಲಿ ಭಾರತ ಬೆಯುತ್ತಿರುವ ಸಂದರ್ಭದಲ್ಲಿ ಅಂಬೇಡ್ಕರ್ ಹೆಚ್ಚು ಪ್ರಸ್ತುತರಾಗುತ್ತಿದ್ದಾರೆ. ಭಾರತದ ಜಾತಿ ವ್ಯವಸ್ಥೆಯ ಸಂಕೀರ್ಣ ವ್ಯವಸ್ಥೆಯಲ್ಲಿ ಒಳಜಾತಿ ಹಾಗೂ ಒಳಗುಂಪುಗಳ ಘರ್ಷಣೆಯು ದಲಿತರ ಏಳ್ಗೆಗೆ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಕುಲಸಚಿವ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ, ಕುಲಸಚಿವ (ಮೌಲ್ಯಮಾಪನ) ಪ್ರೊ. ಜೆ.ಜಿ. ನಾಯಿಕ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ವಿ.ಎಸ್. ಶೀಗೆಹಳ್ಳಿ ಸ್ವಾಗತಿಸಿದರು. ಎಸ್.ಸಿ/ಎಸ್.ಟಿ. ಘಟಕದ ವಿಶೇಷಾಧಿಕಾರಿ ಡಾ. ಮಹಾಂತಪ್ಪ ಚಲವಾದಿ ವಂದಿಸಿದರು. ಸುಮಂತ ಹಿರೇಮಠ ನಿರೂಪಿಸಿದರು.ಕಾವೇರಿ ಹಾಗೂ ಮರಾಠಿ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ವಾಘಮೋರೆ ಬುದ್ಧಸ್ತುತಿಯನ್ನು ಪ್ರಸ್ತುತಪಡಿಸಿದರು.

ಪ್ರತಿಕ್ರಿಯಿಸಿ (+)