ಭಾನುವಾರ, ನವೆಂಬರ್ 17, 2019
28 °C

ರಾಜಿ ಸಂಧಾನ ಸೇವೆೆ ಎಲ್ಲರಿಗೂ ಸಲ್ಲಲಿ

Published:
Updated:
ರಾಜಿ ಸಂಧಾನ ಸೇವೆೆ ಎಲ್ಲರಿಗೂ ಸಲ್ಲಲಿ

ಬೆಂಗಳೂರು: ರಾಜಿ ಸಂಧಾನ ಕೇಂದ್ರದ ಸೇವೆಗಳನ್ನು ಶ್ರೀಮಂತರು ಮಾತ್ರವಲ್ಲ, ಸಾಮಾನ್ಯ ವರ್ಗದ ಜನರು ಪಡೆಯಲು ಅನುಕೂಲವಾಗುವಂತೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಕರೆ ನೀಡಿದರು.ದಕ್ಷಿಣ ಭಾರತ ಪ್ರಥಮ ರಾಜಿ ಸಂಧಾನ ಕೇಂದ್ರವನ್ನು (ಆರ್ಬಿಟ್ರೇಷನ್ ಸೆಂಟರ್) ಬೆಂಗಳೂರಿನಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಬಗೆಯ ಸಿವಿಲ್ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ, ನ್ಯಾಯಶಾಸ್ತ್ರದ ಪರಿಧಿಯಲ್ಲೇ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಹೈಕೋರ್ಟ್ ಈ ಕೇಂದ್ರ ಆರಂಭಿಸಿದೆ.`ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿರುವುದು ಇವತ್ತಿನ ಸಮಸ್ಯೆಯಲ್ಲ. ಹಿಂದಿನಿಂದಲೂ ಈ ಸಮಸ್ಯೆ ಇದೆ. ನಾನು ವಕೀಲನಾಗಿದ್ದ ಸಂದರ್ಭದಲ್ಲಿ, ಸಿವಿಲ್ ವ್ಯಾಜ್ಯವೊಂದು ನ್ಯಾಯಾಲಯದಲ್ಲಿ ದಾಖಲಾದ ಆರು ತಿಂಗಳ ನಂತರ ಸಮನ್ಸ್ ಜಾರಿಯಾದ ಉದಾಹರಣೆ ಇದೆ' ಎಂದು ನೆನಪಿಸಿಕೊಂಡರು.ನ್ಯಾಯಾಲಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ವಿಚಾರಣೆಯ ಹಂತದಲ್ಲೇ ಇರುವುದನ್ನು ಪ್ರೆಷರ್  ಕುಕ್ಕರ್‌ಗೆ ಹೋಲಿಸಿದ ಕಬೀರ್, `ಈ ಕುಕ್ಕರ್‌ನ ಒಳಗಿರುವ ಒತ್ತಡವನ್ನು ಕಡಿಮೆ ಮಾಡಲು ಆರ್ಬಿಟ್ರೇಷನ್ ಕೇಂದ್ರಗಳಂಥ ಪರ್ಯಾಯ ವ್ಯವಸ್ಥೆ ಬೇಕು. ಸಾಂಸ್ಥಿಕ ಸ್ವರೂಪ ಹೊಂದಿರುವ ಆರ್ಬಿಟ್ರೇಷನ್ ಕೇಂದ್ರಗಳಿಂದ ಕಾಲಮಿತಿಯಲ್ಲಿ ಪ್ರಕರಣಗಳು ಇತ್ಯರ್ಥಗೊಳ್ಳುತ್ತವೆ' ಎಂದರು.ಇದಕ್ಕೂ ಮುನ್ನ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಚ್.ಎಲ್. ದತ್ತು, `ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನತೆ, ಈ ಕೇಂದ್ರಕ್ಕೆ ಬರಲು ಹಿಂದೇಟು ಹಾಕಬಹುದು. ಆರ್ಬಿಟ್ರೇಷನ್ ಕೇಂದ್ರವು ಅವರಿಗೂ ನಿಲುಕುವಂತೆ ಆಗಬೇಕು' ಎಂದು ಹೇಳಿದರು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ (ಮೀಡಿಯೇಷನ್ ಸೆಂಟರ್) ಯಶಸ್ಸಿನ ಪ್ರಮಾಣ ಶೇಕಡ 68ರಷ್ಟಿದೆ. ಆರ್ಬಿಟ್ರೇಷನ್ ಕೇಂದ್ರ ಕೂಡ ಇದೇ ರೀತಿ ಯಶಸ್ಸು ಪಡೆಯುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ. ಗೋಪಾಲ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಪ್ರಕರಣಗಳ ತ್ವರಿತ ವಿಚಾರಣೆಗೆ ಸರ್ಕಾರ ಕೂಡ ಆಸಕ್ತಿ ವಹಿಸಿದೆ ಎಂದು ರಾಜ್ಯದ ಅಡ್ವೊಕೇಟ್ ಜನರಲ್ ಎಸ್. ವಿಜಯ ಶಂಕರ್ ತಿಳಿಸಿದರು.ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ರಾಜ್ಯ   ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ, ಬೆಂಗಳೂರು ಆರ್ಬಿಟ್ರೇಷನ್ ಕೇಂದ್ರದ ಅಧ್ಯಕ್ಷ, ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್, ನ್ಯಾಯಮೂರ್ತಿ ಎನ್. ಕೆ. ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮುನಿಯಪ್ಪ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಹೈಕೋರ್ಟ್ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

`ವಚನ-ಸಂಗೀತದ ಚಿಂತನೆ ಅವಶ್ಯಕ'

ಎಲ್ಲ ಬಗೆಯ ಸಿವಿಲ್ ವ್ಯಾಜ್ಯಗಳನ್ನು 90 ರಿಂದ 120 ದಿನಗಳಲ್ಲಿ ಇತ್ಯರ್ಥಪಡಿಸುವ ಉದ್ದೇಶದಿಂದ ಆರ್ಬಿಟ್ರೇಷನ್ ಕೇಂದ್ರ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ಬಿಟ್ರೇಷನ್ ಕೇಂದ್ರಗಳನ್ನು ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಆರಂಭಿಸಲಾಗುವುದು. ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯ ಮಾತ್ರವಲ್ಲದೆ, ಖಾಸಗಿ ವ್ಯಕ್ತಿ/ಸಂಸ್ಥೆಗಳೂ ವ್ಯಾಜ್ಯಗಳ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸಬಹುದು. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಆರ್ಬಿಟ್ರೇಷನ್ ಕೇಂದ್ರಗಳಲ್ಲಿ ರಾಜಿ ಪಂಚಾಯ್ತಿ ಸೇವೆ ಒದಗಿಸುತ್ತಾರೆ.ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಹರಿಸಲು ಆಯಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರು ಸೇವೆಗೆ ಲಭ್ಯರಿರುತ್ತಾರೆ. ಯಾರೊಬ್ಬರೂ ತಮಗೆ ಇಷ್ಟಬಂದಂತೆ ಶುಲ್ಕ ವಿಧಿಸಲು ಅವಕಾಶ ಇಲ್ಲ. ಶುಲ್ಕ ನಿಗದಿ ಕೂಡ ಕಾನೂನಿಗೆ ಅನುಗುಣವಾಗಿಯೇ ಆಗುತ್ತದೆ. ಆರ್ಬಿಟ್ರೇಷನ್ ಕೇಂದ್ರ ನೀಡುವ ಆದೇಶ ತೃಪ್ತಿ ತರದಿದ್ದಲ್ಲಿ, ಅರ್ಜಿದಾರರು ಜಿಲ್ಲಾ ನ್ಯಾಯಾಲಯಗಳ ಮೊರೆ ಹೋಗಬಹುದು.ರಾಜಿ ಸಂಧಾನಕಾರ ಯಾರಾಗಬೇಕು ಎಂಬುದನ್ನು ಅರ್ಜಿದಾರರೇ ನಿರ್ಧರಿಸಬಹುದು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಕೇಂದ್ರದ ಮಹಾಪೋಷಕರಾಗಿರುತ್ತಾರೆ. ಹೈಕೋರ್ಟ್‌ನ ಐವರು ನ್ಯಾಯಮೂರ್ತಿಗಳು ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ.- ನ್ಯಾ.ಕೆ.ಎಲ್. ಮಂಜುನಾಥ್, ಕೇಂದ್ರದ ಅಧ್ಯಕ್ಷರು.

ಪ್ರತಿಕ್ರಿಯಿಸಿ (+)