ಶನಿವಾರ, ಜನವರಿ 25, 2020
19 °C
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ಮಕಾಂಡ

ರಾಜೀನಾಮೆ:ಮತ್ತೆ ಶಿಕ್ಷಕ ವೃತ್ತಿಯ ಯೋಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ ಶಿಕ್ಷಕರೊಬ್ಬ­ರನ್ನು ಮತ್ತೊಮ್ಮೆ ಶಿಕ್ಷಕರನ್ನಾಗಿ ಮಾಡಲು ಹೊರಟಿರುವುದು ತಡವಾಗಿ ಬೆಳಕಿಗೆ ಬಂದಿದೆ.ಪುರಸಭೆ ವ್ಯಾಪ್ತಿಯ ಮರಿಗೆಮ್ಮ ದಿಬ್ಬ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2008 ರಿಂದ ಸಹ ಶಿಕ್ಷಕನಾಗಿದ್ದ ಷಣ್ಮಖ ಹೂಗಾರ  2011ರ ಮೇ 31ರಂದು ತಮ್ಮ ಕೈ ಬರಹದಲ್ಲಿ ಬರೆದಿರುವ ರಾಜೀನಾಮೆ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಿದ್ದರು. ಕೌಟುಂಬಿಕ ಸಮಸ್ಯೆ ಹಾಗೂ ಸ್ವಇಚ್ಛೆ­ಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.ರಾಜೀನಾಮೆ ನೀಡಿ 2 ವರ್ಷ 6 ತಿಂಗಳು ಕಳೆದರೂ ಷಣ್ಮಖ ಅವರು ನೀಡಿದ ರಾಜೀನಾಮೆ ಪತ್ರವನ್ನು ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ­ಯಾಗಿದ್ದ ಎನ್‌.ಶ್ರೀಧರ ಅಂಗೀಕರಿ­ಸಿಲ್ಲ. ಅಲ್ಲದೇ, ಕಡತವನ್ನು ಮೇಲ­ಧಿಕಾರಿಗಳಿಗೆ ಕಳುಹಿಸದೇ ಇರುವುದು ಈಗ ಅನುಮಾನಕ್ಕೆ ಕಾರಣವಾಗಿದೆ.ಕೆಲವು ಮೂಲಗಳ ಪ್ರಕಾರ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ ಷಣ್ಮಖ ಅವರು ಬೇರೊಂದು ಹುದ್ದೆಗೆ ಸೇರ್ಪಡೆಯಾದ ಕಾರಣ ಸದರಿ ಹುದ್ದೆಗೆ ರಾಜೀನಾಮೆ ನೀಡಿರುವುದು ಪ್ರಮುಖ ಕಾರಣವಾಗಿದೆ ಎನ್ನಲಾಗಿದ್ದು, ಈಗ ರಾಜೀನಾಮೆ ಅಂಗೀಕಾರವಾಗದೆ ಕಚೇರಿಯಲ್ಲಿ ಉಳಿದಿರುವುದನ್ನು ಪತ್ತೆ ಹಚ್ಚಿದ ಷಣ್ಮಖ ಅವರು ಕರ್ತವ್ಯಕ್ಕೆ ಹಾಜರಾಗಲು 2013ರ ಸೆಪ್ಟೆಂಬರ್ 11ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ನನಗೆ ಮತ್ತೆ ಶಿಕ್ಷಕ ಹುದ್ದೆ ನೀಡಬೇಕು ಎಂದು ಮನವಿ ಮಾಡುವ ಜೊತೆಗೆ ಇಲ್ಲಿಯವರೆಗೆ ಗೈರು ಹಾಜರಾದ ದಿನಗಳ ಕುರಿತು ವೈದ್ಯಕೀಯ ಪತ್ರ ಪಡೆದು ಅರ್ಜಿಯ ಜೊತೆಗೆ ನೀಡಿರುವುದು ಇಲಾಖೆಯ ದಾಖಲಾತಿಗಳಿಂದ ಬಯಲಾಗಿದೆ.ನಿರ್ಲಕ್ಷ್ಯ:  ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ತಲೆ ಕೆಡೆಸಿಕೊಳ್ಳದೆ ರಾಜೀನಾಮೆ ನೀಡಿದ ವ್ಯಕ್ತಿಗೆ ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳಲು ಡಿಡಿಪಿಐ ಅವರಿಗೆ 2013ರ ಸೆಪ್ಟೆಂಬರ್‌ 11ರಂದು ಪತ್ರ ಬರೆದಿದ್ದಾರೆ.ವಿಚಾರಣೆ ಮಾಡದೇ 2013ರ ಡಿ. 10ರಂದು ಜಿಲ್ಲಾ ಉಪ ನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶಿಸಿ ಮಾನವೀಯತೆ ದೃಷ್ಟಿಯಿಂದ ಷಣ್ಮಖ ಅವರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.ಪ್ರಾಥಮಿಕ ಸಹ ಶಿಕ್ಷಕರ ನೇಮಕ ಮಾಡಿಕೊಳ್ಳುವ ಪ್ರಾಧಿಕಾರ ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುತ್ತಾರೆ. ಈ ಕಾರಣದಿಂದ ರಾಜೀನಾಮೆ ಅಂಗೀಕರಿಸುವ ಮತ್ತು ತಿರಸ್ಕರಿಸುವ ಅಧಿಕಾರ ಇರುವುದರಿಂದ ನಿಮ್ಮ ಹಂತದಲ್ಲಿ ಕ್ರಮ ಕೈಗೊಂಡು ಪ್ರಕರಣವನ್ನು ಇತ್ಯರ್ಥ ಪಡಿಸಲು 2013ರ ಸೆಪ್ಟೆಂಬರ್ 17ರಂದು ಈ ಹಿಂದೆ ಇದ್ದ ಜಿಲ್ಲಾ ಉಪ ನಿರ್ದೇಶಕರು 2002ರ ಕಾಯ್ದೆಯ ಪ್ರಕಾರ ಅರ್ಜಿಯನ್ನು ವಾಪಸ್‌ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿರುವುದು ಕಂಡು ಬಂದಿದೆಯಾದರೂ ಈಗಿನ ಜಿಲ್ಲಾ ಉಪ ನಿರ್ದೇಶಕರು ಷಣ್ಮಖ ಅವರನ್ನು ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.ಬಿಇಓಗೆ ನೋಟಿಸ್‌ ಜಾರಿ

ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ್ದ ಷಣ್ಮುಖ ಹೂಗಾರ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಕಾರಣ ಈ ಹಿಂದೆ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಶ್ರೀಧರ ಅವರಿಗೆ ಶುಕ್ರವಾರ ನೊಟೀಸ್‌ ಜಾರಿ ಮಾಡಲಾಗಿದ್ದು, ರಾಜೀನಾಮೆ ನೀಡಿ ಎರಡು ವರ್ಷ ಆರು ತಿಂಗಳು ಕಳೆದರೂ ತಮ್ಮ ಅವಧಿಯಲ್ಲಿ ಏಕೆ ಅಂಗೀಕರಿಸಿಲ್ಲ ಎಂದು ಕಾರಣ ಕೇಳಲಾಗುತ್ತದೆ. ಪ್ರಕರಣದ ಕಡತ ಮತ್ತೊಮ್ಮೆ ಪರಿಶೀಲಿಸಲಾ­ಗುವುದು. ಅಲ್ಲಿಯವರಿಗೂ ಯಾವುದೇ ಪ್ರಕ್ರಿಯೆ ನಡೆಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾ­ಗುವುದು.

– ರಾಮಾಂಜನೆಯ್ಯ, ಡಿಡಿಪಿಐ, ರಾಯಚೂರುಗೊಂದಲದ ವಾತಾವರಣ ಸೃಷ್ಟಿ


ಎರಡೂವರೆ ವರ್ಷದ ಹಿಂದೆ ಷಣ್ಮುಖ ಎಂಬವರು ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದರೂ, ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಅದನ್ನು ಅಂಗೀಕರಿಸಿದೆ ಇರುವುದು ಮತ್ತು ಮತ್ತೆ ಕರ್ತವ್ಯಕ್ಕೆ ಸೇರ್ಪಡೆ ಬಗ್ಗೆ ಅದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಡಿಡಿಪಿಐ ಅವರಿಗೆ ಪತ್ರ ಬರೆದಿರುವುದು ಗೊಂದಲಕ್ಕೆ ಕಾರಣವಾಗಿದೆ. ಡಿಡಿಪಿಐ ಆದೇಶದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

– ಎಚ್‌.ಡಿ. ಹುನುಗುಂದ, ಕ್ಷೇತ್ರ ಶಿಕ್ಷಣಾಧಿಕಾರಿ, ದೇವದುರ್ಗ

ಪ್ರತಿಕ್ರಿಯಿಸಿ (+)