ರಾಜೀನಾಮೆ ಕೊಟ್ಟರಷ್ಟೇ ಚಳವಳಿಗೆ ಬನ್ನಿ

7

ರಾಜೀನಾಮೆ ಕೊಟ್ಟರಷ್ಟೇ ಚಳವಳಿಗೆ ಬನ್ನಿ

Published:
Updated:

ಮಂಡ್ಯ: ರೈತರು ಹಾಗೂ ಯುವಕರ ಸಿಟ್ಟು ಹೊಟ್ಟೆಯಿಂದ ರಟ್ಟೆಗೆ ಬಂದಿದೆ. `ರಾಜೀನಾಮೆ ನೀಡಿ ಬಂದರೆ ಮಾತ್ರ ಮಂಡ್ಯದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಳ್ಳಲು ಅವಕಾಶ~ ಎಂಬ ಪಟ್ಟು ಆರಂಭವಾಗಿದೆ.ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದಿರುವ ಧರಣಿಯಲ್ಲಿ ಪಾಲ್ಗೊಳ್ಳುವವರಿಗೆ ಇಂಥ ಬಿಸಿಯನ್ನು ಪ್ರತಿಭಟನಾಕಾರರು ಮುಟ್ಟಿಸಲಾರಂಭಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಿತಿ ಅಧ್ಯಕ್ಷ ಜಿ.ಮಾದೇಗೌಡರಿಗೆ ಪತ್ರ ಬರೆದು `ನೀವು ಅನುಮತಿ ನೀಡಿದರೆ ಮಂಡ್ಯದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸುತ್ತೇನೆ~ ಎಂದು ಕೇಳಿಕೊಂಡಿದ್ದಾರೆ.ಈ ವಿಷಯವನ್ನು ಶನಿವಾರ ಧರಣಿ ಸಮಯದಲ್ಲಿ ಜಿ. ಮಾದೇಗೌಡರೇ ಖುದ್ದಾಗಿ ಪ್ರಸ್ತಾಪಿಸಿದಾಗ, ಯಡಿಯೂರಪ್ಪ ಆಗಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. `ರಾಜೀನಾಮೆ ನೀಡಿ ಹೋರಾಟಕ್ಕೆ ಬರಲಿ. ಸ್ವಾಗತಿಸುತ್ತೇವೆ~ ಎಂಬ ಕೂಗು ಒಕ್ಕೊರಲಿನಿಂದ ಕೇಳಿ ಬಂತು.ರಾಜಕೀಯ ನಾಯಕರನ್ನು ದೂರವಿಟ್ಟು ಪ್ರತಿಭಟನೆ ತೀವ್ರಗೊಳಿಸುವುದು ಕಷ್ಟ. ಸದನ ಹಾಗೂ ಕಾನೂನು ಸಮರ ಮಾಡಬೇಕಾಗಿ ಬಂದಾಗ ಅವರೂ ಬೇಕಾಗುತ್ತದೆ. ಅವರ ಅನುಭವವನ್ನು ಬಳಸಿಕೊಂಡು ನ್ಯಾಯ ಪಡೆಯಲು ಯತ್ನಿಸಬೇಕಾಗುತ್ತದೆ. ಎಲ್ಲರ ಬೆಂಬಲವೂ ಬೇಕಾಗುತ್ತದೆ ಎಂಬುದು ಸಮಿತಿಯಲ್ಲಿರುವ ಕೆಲವರ ಅಭಿಪ್ರಾಯ. ಆದರೆ ಹಲವು ಪ್ರತಿಭಟನಾಕಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.ಅ. 3ರಂದು ಕೃಷ್ಣರಾಜಸಾಗರ ಅಣೆಕಟ್ಟೆಗೆ (ಕೆಆರ್‌ಎಸ್) ಮುತ್ತಿಗೆ ಹಾಕಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿತ್ತು. 15 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದ ಮುತ್ತಿಗೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳೂ ಭಾಗವಹಿಸಿದ್ದರು.ಮುತ್ತಿಗೆ ಹಾಕುವ ಕಾರ್ಯಕ್ರಮದ ಮುನ್ನಡೆಸಬೇಕಾಗಿದ್ದ ಜನಪ್ರತಿನಿಧಿಗಳು, ದೃಶ್ಯ ಮಾಧ್ಯಮದವರಿಗೋಸ್ಕರ ವಾಹನವೊಂದನ್ನೇರಿ ಭಾಷಣ ಆರಂಭಿಸಿದರು. ಇದು ಪ್ರತಿಭಟನಾಕಾರರನ್ನು ಕೆರಳಿಸಿತ್ತು. ಜನಪ್ರತಿನಿಧಿಗಳ ವಾಹನವನ್ನು ಪಕ್ಕದಲ್ಲಿದ್ದ ನಾಲೆಗೆ ನೂಕಲು ಮುಂದಾಗಿದ್ದರು. ಅವರ ಮೇಲೆ ಕಲ್ಲು ತೂರಾಟವನ್ನೂ ನಡೆಸಿದ್ದರು.ಅ. 4ರಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಎಂ.ಸಿ.ನಾಣಯ್ಯ ಅವರಿಗೆ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಭಾಷಣ ಮಾಡಲು ಅವಕಾಶ ನೀಡಿರಲಿಲ್ಲ. ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರಲ್ಲಿ ದಿನದಿಂದ ದಿನಕ್ಕೆ ಆಕ್ರೋಶ ತೀವ್ರಗೊಳ್ಳುತ್ತಿರುವುದಕ್ಕೆ ಈ ಘಟನೆಗಳು ಉದಾಹರಣೆಯಾಗಿವೆ.`23 ದಿನಗಳಿಂದ ಮಂಡ್ಯದಲ್ಲಿ ಹೋರಾಟ ನಡೆಯುತ್ತಿದೆ. ಇಷ್ಟು ದಿನ ಬಾರದ ಪ್ರತಿಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು ಇಲ್ಲಿಗೆ ಬರಲು ಹವಣಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಕಾವೇರಿ ಕಣಿವೆಯವರೇ. ಇಷ್ಟು ದಿನ ಇಲ್ಲದ್ದು, ಈಗೇಕೆ ನೆನಪಾಗುತ್ತಿದೆ~ ಎಂದು ಪ್ರಶ್ನಿಸುತ್ತಾರೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಂಡ್ಯದ ಬೋರೇಗೌಡ.`ಜಿಲ್ಲೆಯ ಸಾಕಷ್ಟು ಜನಪ್ರತಿನಿಧಿಗಳು ಇಲ್ಲಿಯವರೆಗೆ ಧರಣಿಯಲ್ಲಿ ಭಾಗವಹಿಸಿದ್ದಾರೆ. ಒಬ್ಬರಾದರೂ ಒಂದು ಗಂಟೆಯಷ್ಟು ಹೊತ್ತು ಕುಳಿತಿದ್ದಾರೆಯೇ? ಇಲ್ಲಿಗೆ ಬಂದವರೇ ವೀರಾವೇಶದ ಭಾಷಣ ಮಾಡುತ್ತಾರೆ. ನೀರು ಬಿಡಲು ಇವರೇ ಕಾರಣ ಎಂದು ಒಂದು ಪಕ್ಷದವರು, ಇನ್ನೊಂದು ಪಕ್ಷದ ವಿರುದ್ಧ ಟೀಕೆ ಮಾಡುತ್ತಾರೆ. ಪತ್ರಕರ್ತರ ಜತೆ ಮಾತನಾಡಿ ಹೊರಟು ಬಿಡುತ್ತಾರೆ. ಆದರೆ, ಮಾತನಾಡಬೇಕಾದ (ಸದನ) ವೇದಿಕೆಗಳಲ್ಲಿ ಮಾತನಾಡುವುದೇ ಇಲ್ಲ. ಅದಕ್ಕೆ ಅಂಥವರು ಹೋರಾಟಕ್ಕೆ ಬೇಕಾಗಿಲ್ಲ~ ಎನ್ನುತ್ತಾರೆ ಹನಿಯಂಬಾಡಿಯ ಪುಟ್ಟೇಗೌಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry