ರಾಜೀನಾಮೆ ಸಾಲದು, ಶಿಕ್ಷೆಯಾಗಬೇಕು...

7

ರಾಜೀನಾಮೆ ಸಾಲದು, ಶಿಕ್ಷೆಯಾಗಬೇಕು...

Published:
Updated:

ರಾಜ್ಯ ಸರ್ಕಾರದ ಮೂವರು ಮಂತ್ರಿಗಳು (ಈಗ ಮಾಜಿ) ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯುನ್ನತ ವೇದಿಕೆಯಾದ ವಿಧಾನಸಭೆಯಲ್ಲಿ ಮಹತ್ವದ (ಬರ ಪರಿಸ್ಥಿತಿ ಮತ್ತು ತೊಗರಿ ಬೆಳೆದ ರೈತರ ಸಮಸ್ಯೆ) ಚರ್ಚೆ ನಡೆಯುತ್ತಿರುವಾಗ ಮಾಡಿದ `ಘನ~ ಕಾರ್ಯವನ್ನು ಇಡೀ ದೇಶವೇ ನೋಡಿದೆ.ಈ ಮಹನೀಯರ ಮೇಲಿನ ಆರೋಪನ್ನು ತನಿಖೆ ಮಾಡಲು ಸಭಾಧ್ಯಕ್ಷರು ಸಮಿತಿಯೊಂದನ್ನು ರಚಿಸಿರುವುದು ಅತ್ಯಂತ ಹಾಸ್ಯಾಸ್ಪದ. ಸಭಾಧ್ಯಕ್ಷರ ಮೇಲೆ ಸಂವಿಧಾನ ಮತ್ತು ಸದನದ ಗೌರವವನ್ನು ಕಾಪಾಡುವ ಜವಾಬ್ದಾರಿ ಇದೆ.

 

ವಿಧಾನ ಸಭೆಯ ಮತ್ತು ರಾಜ್ಯದ ಮಾನವನ್ನು ಹರಾಜು ಹಾಕಿದ ಈ ಮೂವರು ಮಹನೀಯರನ್ನು ಶಾಸಕ ಸ್ಥಾನದಿಂದ ವಜಾ ಮಾಡುವ ಮೂಲಕ ಇತರ ಲಂಪಟ ರಾಜಕಾರಣಿಗಳಿಗೆ ಎಚ್ಚರಿಕೆಯ ಪಾಠ ಕಲಿಸಬೇಕು.

 - ನಿಂಗಣ್ಣ ಸುಳ್ಳಳ್ಳಿ  ಕಳಸೂರು 

* * *ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಮತ್ತು ಕೃಷ್ಣ ಪಾಲೇಮಾರ್ ಅವರು ವಿಧಾನ ಸಭೆಯಲ್ಲಿ ಅಶ್ಲೀಲ ವೀಡಿಯೊ ನೋಡಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ರಾಜಿನಾಮೆ ಅವರ ತಪ್ಪಿಗೆ  ತಕ್ಕದಾದ  ಶಿಕ್ಷೆಯಲ್ಲ. ಈ ವಿಷಯವನ್ನು ಚರ್ಚಿಸಲು ಅವಕಾಶ ನೀಡದೇ ಅಧಿವೇಶನ ಮುಂದೂಡುವಂತೆ ನೋಡಿಕೊಂಡ ಬಿಜೆಪಿ ಸರ್ಕಾರದ ವರ್ತನೆ ಸದನಕ್ಕೆ ಮತ್ತು ರಾಜ್ಯದ ಜನತೆಗೆ ಮಾಡಿದ ಅಪಚಾರ. ಸದನ ಸಮಿತಿಯಿಂದ ಈ ಪ್ರಕರಣದ ತನಿಖೆ ನಡೆಸುವ ಮತ್ತು ವರದಿ ಬರುವವರೆಗೆ ಆರೋಪಿಗಳನ್ನು ಶಾಸನ ಸಭೆಯಿಂದ ಅಮಾನತು ಮಾಡುವ ಕ್ರಮವೂ ಅವರನ್ನು ರಕ್ಷಣೆ ಮಾಡುವ ಪ್ರಯತ್ನದಂತೆ ಕಾಣುತ್ತದೆ.ಮೂವರು ಮುಖಂಡರು  ತಮ್ಮ ಅಪರಾಧ ಒಪ್ಪಿಕೊಂಡ ಮೇಲೆ ಮತ್ತೆ ತನಿಖೆಯ ಅಗತ್ಯ ಇರಲಿಲ್ಲ. ಅವರನ್ನು  ಶಾಸಕ ಸ್ಥಾನದಿಂದ ವಜಾ ಮಾಡಿ ಅವರ ವಿರುದ್ಧ ಮೊಕದ್ದಮೆ ಹೂಡಲು ಶಿಫಾರಸು ಮಾಡುವುದು ಸ್ಪೀಕರ್ ಅವರ ಕರ್ತವ್ಯವಾಗಿತ್ತು. ಬಿಜೆಪಿ ವರಿಷ್ಠರು ನೀತಿ, ಸಂಸ್ಕೃತಿಗೆ ಬದ್ಧರಾಗಿರುವುದಾದರೆ, ಕೂಡಲೇ ಮೂವರು ಆರೋಪಿ ಶಾಸಕರನ್ನು ಸದಸ್ಯತ್ವದಿಂದ ವಜಾ ಮಾಡಬೇಕು.

  -ಜಯರಾಮ ಹೆಗಡೆ  ಶಿರಸಿ

 * * *ವಿಧಾನಸಭೆಯಲ್ಲಿ ಬ್ಲೂ ಫಿಲ್ಮ್ ನೋಡಿದ ಆರೋಪಕ್ಕಾಗಿ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ಇದು ಅತ್ಯುನ್ನತ ನೈತಿಕ ನಡವಳಿಕೆಗೆ ಮಾದರಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೇಳಿಕೊಂಡು ಬೀಗಿದ್ದಾರೆ.

 

ಉತ್ತಮ ನಡವಳಿಕೆ ಯಾವುದು? ಅಶ್ಲೀಲ ಚಿತ್ರ ನೋಡಿ ರಾಜೀನಾಮೆ  ನೀಡಿದ್ದು ಉತ್ತಮ ನಡವಳಿಕೆಯೇ?ಲೈಂಗಿಕ ಚಿತ್ರ ನೋಡುವುದು ಕಾನೂನುಬಾಹಿರ. ಆದರೆ ಕುತೂಹಲ ಎಲ್ಲರಲ್ಲೂ ಇರುತ್ತದೆ. ಮರೆಯಲ್ಲಿ ಮಾಡಬೇಕಾದ ಕೆಲಸವನ್ನು ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಬಹಿರಂಗವಾಗಿ ಮಾಡಿದರೆ ಅದು ಕೆಟ್ಟ ನಡವಳಿಕೆ. ಅದಕ್ಕೆ ಕ್ಷಮೆಯೇ ಇಲ್ಲ.ಸಚಿವರು ತಮ್ಮ ಖಾತೆಗಳನ್ನು ನಿರ್ವಹಣೆ ಮಾಡುವುದರ ಜತೆಗೆ ರಾಜ್ಯದ ಘನತೆ, ಗೌರವಗಳನ್ನು ರಕ್ಷಣೆ ಮಾಡಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ನಾಡಿನ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಬೇಕಾದ ಸಚಿವರು ಕೀಳು ಅಭಿರುಚಿಗಳಲ್ಲಿ ತೊಡಗುವುದು ಜನತೆಗೆ ಮಾಡುವ ದ್ರೋಹ.

 -ಆರ್. ಕೆ. ದಿವಾಕರ ಬೆಂಗಳೂರು

* * *ವಿಧಾನ ಮಂಡಲ ಅಧಿವೇಶನದಲ್ಲಿ ಸಚಿವರಿಬ್ಬರು ತಮ್ಮ ಮೊಬೈಲ್ ಫೋನಿನಲ್ಲಿ  ಆಶ್ಲೀಲ ಚಿತ್ರ ನೋಡಿದ ಘಟನೆ ಅತ್ಯಂತ ಖಂಡನಾರ್ಹ. ಉತ್ತರ ಕರ್ನಾಟಕದ ಬರ ಪರಿಸ್ಥಿತಿ ಮತ್ತು ತೊಗರಿ ಬೆಳೆದು ನಷ್ಟ ಮಾಡಿಕೊಂಡ  ಗುಲ್ಬರ್ಗ ಜಿಲ್ಲೆಯ ರೈತರ ಬವಣೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಈ ಇಬ್ಬರು ಮುಖಂಡರು ಕೀಳು ಅಭಿರುಚಿಯಲ್ಲಿ ತೊಡಗಿದ್ದ ವರ್ತನೆ ಅತ್ಯಂತ ಖಂಡನೀಯ ಮತ್ತು ಅವರ ನಡವಳಿಕೆ ಮತದಾರರಿಗೆ ಮಾಡಿದ ಮೋಸ.

 - ರಾಜಕುಮಾರ ಎಂ. ದಣ್ಣೂರ  ಅಫಜಲಪೂರಪ್ರಜಾತಂತ್ರ ವ್ಯವಸ್ಥೆಯ ಉನ್ನತ ವೇದಿಕೆಯಾದ ವಿಧಾನ ಸಭೆಯಲ್ಲಿ ರಾಜ್ಯದ ಗಂಭೀರ ಸಮಸ್ಯೆಗಳ ಚರ್ಚೆ ನಡೆಯುವ ಸಂದರ್ಭದಲ್ಲಿ ಇಬ್ಬರು ಮಂತ್ರಿಗಳು ಅಶ್ಲೀಲ ಚಿತ್ರ ನೋಡುತ್ತಿದ್ದ ಘಟನೆ ಅತ್ಯಂತ ನಾಚಿಕೆಗೇಡಿನದು.ಮಧ್ಯ ವಯಸ್ಸು ದಾಟಿದ ಈ ಮುಖಂಡರ ನಿರ್ಲಜ್ಜ ನಡವಳಿಕೆಯಿಂದ ಕರ್ನಾಟಕ ಮತ್ತು ವಿಧಾನ ಸಭೆಯ ಗೌರವ ಮಣ್ಣು ಪಾಲಾಗಿದೆ. ಈ ಇಬ್ಬರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಅಥಣಿ ಮತ್ತು ನರಗುಂದ ಕ್ಷೇತ್ರದ ಮತದಾರರು ಈ ನಿರ್ಲಜ್ಜ ವ್ಯಕ್ತಿಗಳನ್ನು ಮತ್ತೆ ಚುನಾವಣೆಗೆ ನಿಲ್ಲದಂತೆ ನೋಡಿಕೊಳ್ಳಬೇಕು.

 -ಮುದ್ದೆೀಶ್.ಬಿ.ಹಳ್ಳಿ  ತುಮಕೂರು

* * *ವಿಧಾನ ಸಭೆಯಲ್ಲಿ ಅಶ್ಲೀಲ ಚಿತ್ರ ನೋಡುವ ಮೂಲಕ ಇಬ್ಬರು ಸಚಿವರು ಮತ್ತು ಅವರಿಗೆ ನೆರವಾದ ಮತ್ತೊಬ್ಬ ಸಚಿವರ ವರ್ತನೆ ಕರ್ನಾಟಕದ ಗೌರವವನ್ನು ಮಣ್ಣುಪಾಲು ಮಾಡಿದ ನಡವಳಿಕೆ. ಈ ಮುಖಂಡರ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ. ಅವರನ್ನು ಆರಿಸಿ ಕಳುಹಿಸಿದ ಜನರಿಗೆ ಮಾಡಿದ ಮೋಸ.ಸಭ್ಯ ಸಮಾಜ, ಸಂಸ್ಕೃತಿ, ರಾಮರಾಜ್ಯ ಇತ್ಯಾದಿಗಳ ಬಗ್ಗೆ ಮಾತನಾಡುವ ಬಿಜೆಪಿಯಲ್ಲಿ ಎಂತಹ ಜನರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಾಯಿತು. ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜಿನಾಮೆ ಕೊಟ್ಟ ಸಚಿವರ ಹಿನ್ನೆಲೆಗಳನ್ನು ಗಮನಿಸಿದರೆ ಬಿಜೆಪಿ ಎಂದರೆ `ಭ್ರಷ್ಟ ಜನರ ಪಕ್ಷ~ ಎಂಬಂತೆ ಆಗಿದೆ.ಬಿಜೆಪಿಗೆ ಬದ್ಧತೆ ಮತ್ತು ಇಚ್ಛಾಶಕ್ತಿಯಿದ್ದರೆ ಕಳಂಕಿತ ಸಚಿವರ ರಾಜೀನಾಮೆಯನ್ನು ಸ್ವೀಕರಿಸಿದರೆ ಸಾಲದು, ಅವರ ಸದಸ್ಯತ್ವವನ್ನೇ ರದ್ದುಪಡಿಸಿ ಪಕ್ಷದಿಂದ ಉಚ್ಛಾಟಿಸಿ ಪ್ರಾಮಾಣಿಕತೆಯನ್ನು ತೋರಬೇಕು.

 -ಬಿ.ಎಂ.ಮಹಾದೇವ ಮೂರ್ತಿ ಮೈಸೂರು

* * *ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಉತ್ತಮ ಆಡಳಿತದ ನಿರೀಕ್ಷೆ ಇಟ್ಟುಕೊಂಡವರಲ್ಲಿ ನಾನೂ ಒಬ್ಬ. ಈ ಸರ್ಕಾರ ಆರಂಭದಿಂದಲೇ ಅಡ್ಡ ದಾರಿ ಹಿಡಿಯಿತು. ಹಣ, ಅಧಿಕಾರದ ರುಚಿ ಹತ್ತಿದ ಅನೇಕ ಮಂತ್ರಿಗಳು ಅಡ್ಡ ಹಾದಿ ಹಿಡಿದರು. ಸರ್ಕಾರದ ಮುಖ್ಯಸ್ಥರೇ ಹಲವಾರು ಹಗರಣಗಳಲ್ಲಿ ಭಾಗಿಯಾದರು. ರಾಜ್ಯದ ನಿಸರ್ಗ ಸಂಪತ್ತು ಕೊಳ್ಳೆ ಹೊಡೆದರು.ಜಾತೀಯತೆ ಮಿತಿ ಮೀರಿತು. ಆದರೂ ಸರ್ಕಾರ ಜನರಿಗೆ ಒಳ್ಳೆಯದನ್ನು ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಸದನದಲ್ಲೇ ಆಶ್ಲೀಲ ಚಿತ್ರ ನೋಡಿ ಅದನ್ನು ಸಮರ್ಥನೆ ಮಾಡಿಕೊಂಡ ಸಚಿವರ ಭಂಡತನ ನೋಡಿದ ಮೇಲೆ ಬಿಜೆಪಿ ಬಗ್ಗೆ ಅಸಹ್ಯದ ಭಾವನೆ ಬಂದು ಬಿಟ್ಟಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry