ಮಂಗಳವಾರ, ನವೆಂಬರ್ 19, 2019
28 °C

ರಾಜೇಶ್ವರ: ವಿದ್ಯುತ್ ಸಮಸ್ಯೆ ಬಗೆಹರಿಸಲು ಧರಣಿ

Published:
Updated:

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ರಾಜೇಶ್ವರದಲ್ಲಿ ಗುರುವಾರ ಸಮರ್ಪಕ ವಿದ್ಯುತ್ ಪೊರೈಕೆಗೆ ಒತ್ತಾಯಿಸಿ ಗ್ರಾಮಸ್ಥರಿಂದ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.ಇಲ್ಲಿನ ಇಸ್ಲಾಂಪುರ ರಸ್ತೆಯಲ್ಲಿನ ವಿದ್ಯುತ್ ಪ್ರಸರಣಾ ಘಟಕದ ಎದುರು ಸುಮಾರು 2 ಗಂಟೆಗಳವರೆಗೆ ಧರಣಿ ಕೂಡಲಾಗಿತ್ತು. ಈ ಸಂದರ್ಭದಲ್ಲಿ ರೋಷಗೊಂಡ ರೈತರು ಪ್ರಸರಣಾ ಘಟಕದಿಂದ ಬೇರೆಡೆ ವಿದ್ಯುತ್ ಸರಬರಾಜು ಮಾಡುವುದನ್ನು ಬಂದ್ ಮಾಡಿದ್ದರಿಂದ ಬಸವಕಲ್ಯಾಣ ನಗರ ಸೇರಿದಂತೆ ಕೆಲವೆಡೆ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.ಜೆಸ್ಕಾಂ ಹುಮನಾಬಾದ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಚಿನ್ ಸ್ಥಳಕ್ಕೆ ಭೇಟಿಕೊಟ್ಟು ಮನವಿ ಸ್ವೀಕರಿಸಿದರು. ಆಗ ಸಮಸ್ಯೆ ಬಗೆಹರಿಸುವುದಾಗಿ ಲಿಖಿತವಾಗಿ ಬರೆದು ಕೊಡುವವರೆಗೆ ಹೋರಾಟ ನಿಲ್ಲಿಸಲಾಗದು ಎಂದು ಜನರು ಪಟ್ಟು ಹಿಡಿದಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಲೋಡ್ ಶೆಡ್ಡಿಂಗ್ ಹೆಸರಲ್ಲಿ ಯಾವಾಗ ಬೇಕೆಂದಾಗ ವಿದ್ಯುತ್ ಕಡಿತಗೊಳಿಸುತ್ತಿರುವುದು ಸರಿಯಲ್ಲ. ಇದರಿಂದ ಕೃಷಿಕರಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಇಲಾಖೆಯವರಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಯಾರೂ ಲಕ್ಷ ಕೊಡುತ್ತಿಲ್ಲ.ವಿದ್ಯುತ್ ಇಲ್ಲದಿದ್ದಾಗ ಇಲಾಖೆಯ ಕಚೇರಿಗೆ ಫೋನ್ ಮಾಡಿದರೆ ಸರಿಯಾದ ಉತ್ತರ ಸಿಗುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ಮನಬಂದಂತೆ ವರ್ತಿಸುತ್ತಿರುವ ನೌಕರರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು. 12 ಗಂಟೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು. ಪಂಪಸೆಟ್‌ಗಳಿಗೆ 4 ಗಂಟೆ ತ್ರಿಫೇಸ್ ವಿದ್ಯುತ್ ಕೊಡಲಾಗುವುದು ಎಂದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಬರೆದು ಕೊಟ್ಟಿದ್ದರಿಂದ ಧರಣಿ ಅಂತ್ಯಗೊಂಡಿತು.ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ ಪಾಟೀಲ, ಮಾಜಿ ಅಧ್ಯಕ್ಷ ವಿಕ್ರಮ ಪೋಸ್ತಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗುಂಡುರೆಡ್ಡಿ, ಸದಸ್ಯ ಅಹ್ಮದ್‌ಸಾಬ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುನಿಲ್‌ಸಿಂಗ್ ಹಜಾರಿ, ಜೆಡಿಎಸ್ ಮುಖಂಡ ನಸೀಮ್ ಪಟೇಲ್, ನಾಗಣ್ಣ ಸಜ್ಜನಶೆಟ್ಟಿ, ಪರಮೇಶ್ವರ ಬುಡಕೆ, ವೀರಣ್ಣ ಪಾಟೀಲ, ಖಜೀರಮಿಯ್ಯಾ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)