ರಾಜ್ಯಕ್ಕೆ ಕೊನೆಗೂ ಕಲ್ಲಿದ್ದಲು ಹಂಚಿಕೆ

ಶುಕ್ರವಾರ, ಜೂಲೈ 19, 2019
26 °C
4,700 ಮೆಗಾವಾಟ್ ಉತ್ಪಾದನೆಗೆ ಅನುಕೂಲ

ರಾಜ್ಯಕ್ಕೆ ಕೊನೆಗೂ ಕಲ್ಲಿದ್ದಲು ಹಂಚಿಕೆ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಛತ್ತೀಸಗಡದಲ್ಲಿ ಆರಂಭಿಸಲು ಉದ್ದೇಶಿಸಿರುವ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸೇರಿದಂತೆ ರಾಜ್ಯದ ನಾಲ್ಕು ಯೋಜನೆಗಳಿಗೆ ಕೇಂದ್ರ ಸರ್ಕಾರ ಕೊನೆಗೂ ಕಲ್ಲಿದ್ದಲು ಹಂಚಿಕೆ ಮಾಡಿದೆ. ಇದರಿಂದಾಗಿ 4,700 ಮೆಗಾವಾಟ್ ಸಾಮರ್ಥ್ಯದ ಯೋಜನೆಗಳಿಗೆ ಚಾಲನೆ ನೀಡಲು ಹಾದಿ ಸುಗಮವಾಗಿದೆ.ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಆದರೆ, ಕಲ್ಲಿದ್ದಲು ಹಂಚಿಕೆಯಾಗದೆ ಇವು ನನೆಗುದಿಯಲ್ಲಿದ್ದವು. ಕೇಂದ್ರ ಸರ್ಕಾರ ಈಚೆಗೆ 382 ದಶಲಕ್ಷ ಟನ್ ಕಲ್ಲಿದ್ದಲು ಹಂಚಿಕೆ ಮಾಡಿರುವುದರಿಂದ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿದೆ.ಪಶ್ಚಿಮ ಬಂಗಾಳದ ಡಿಯೊಚಾ ಪಚಾಮಿ ಎಂಬ ಪ್ರದೇಶದಲ್ಲಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಕಲ್ಲಿದ್ದಲು ಗಣಿ ಹಂಚಿಕೆ ಮಾಡಿದೆ. ಇಲ್ಲಿ ಸುಮಾರು 2025 ದಶಲಕ್ಷ ಟನ್ ಕಲ್ಲಿದ್ದಲು ಲಭ್ಯವಾಗಲಿದೆ. ರಾಜ್ಯಕ್ಕೆ ಹಂಚಿಕೆಯಾಗಿರುವ 382 ದಶಲಕ್ಷ ಟನ್ ಕಲ್ಲಿದ್ದಲನ್ನು ಸುಮಾರು 25- 30 ವರ್ಷ ಉಪಯೋಗಿಸಬಹುದು ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಕಾಂಬಳೆ `ಪ್ರಜಾವಾಣಿ'ಗೆ ತಿಳಿಸಿದರು.ಛತ್ತೀಸಗಡದಲ್ಲಿ 1,600 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವ ಸಂಬಂಧ 2008ರಲ್ಲಿ ಆಗಿನ ಬಿಜೆಪಿ ಸರ್ಕಾರ ಛತ್ತೀಸಗಡ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ವಿದ್ಯುತ್‌ಉತ್ಪಾದನೆ ಆರಂಭವಾಗಬೇಕಿತ್ತು. ಆದರೆ, ಕಲ್ಲಿದ್ದಲು ಹಂಚಿಕೆಯಾಗದ ಕಾರಣ ಇದುವರೆಗೆ ಕಾಮಗಾರಿಯೇ ಶುರುವಾಗಿಲ್ಲ.ಶಾಖೋತ್ಪನ್ನ ವಿದ್ಯುತ್ ಯೋಜನೆಗಾಗಿ ಛತ್ತೀಸಗಡದ ಗೊದ್ನಾದಲ್ಲಿ ಈಗಾಗಲೇ 1,023 ಎಕರೆ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಲ್ಲದೆ 253 ಎಕರೆ ಸರ್ಕಾರಿ ಭೂಮಿ ಪಡೆಯಲು ಛತ್ತೀಸಗಡ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಕಾಂಬಳೆ ಅವರು ತಿಳಿಸಿದರು.ಕರ್ನಾಟಕ ವಿದ್ಯುತ್ ನಿಗಮ ಈಗಾಗಲೇ ಗೊದ್ನಾದಲ್ಲಿ ಕಚೇರಿ ತೆರೆದಿದ್ದು, ಕೆಲ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಿದೆ. ಕಾಮಗಾರಿ ಶುರುವಾದ ನಂತರ ಅಲ್ಲಿಗೆ ಅಗತ್ಯವಿರುವ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ಕಾಮಗಾರಿ ಆರಂಭಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಆಗಿದೆ ಎಂದು ವಿವರಿಸಿದರು.ಯರಮರಸ್: ರಾಯಚೂರು ಸಮೀಪದ ಯರಮರಸ್‌ನಲ್ಲಿ 1,600 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ಸ್ಥಾವರಕ್ಕೆ ಈಗಾಗಲೇ ಪರಿಸರ ಇಲಾಖೆಯ ಅನುಮತಿ ದೊರೆತಿದ್ದು, ಕಾಮಗಾರಿಯ ಪ್ರಾರಂಭಿಕ ಕೆಲಸ ಶುರುವಾಗಿದೆ. ಈಗ ಕಲ್ಲಿದ್ದಲು ಹಂಚಿಕೆ ಆಗಿರುವುದರಿಂದ 2014ರ ಡಿಸೆಂಬರ್ ವೇಳೆಗೆ 800 ಮೆಗಾವಾಟ್ ಸಾಮರ್ಥ್ಯದ ಮೊದಲ ಘಟಕ ಕಾರ್ಯಾರಂಭ ಮಾಡಲಿದೆ.700 ಮೆಗಾವಾಟ್ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ಸ್ಥಾವರದ 3ನೇ ಘಟಕಕ್ಕೂ ಪರಿಸರ ಇಲಾಖೆ ಅನುಮತಿ ದೊರೆತಿದ್ದು, ಕಾಮಗಾರಿ ಶುರುವಾಗಿದೆ. 2014ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಕಲ್ಲಿದ್ದಲು ಹಂಚಿಕೆಯಾಗಿರುವುದರಿಂದ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗದು ಎಂದು ತಿಳಿಸಿದರು.ಪರಿಸರ ಇಲಾಖೆ ಅನುಮತಿ: ರಾಯಚೂರು ಸಮೀಪದ ಯದ್ಲಾಪುರ ಮತ್ತು ಛತ್ತೀಸಗಡದ ಗೊದ್ನಾದಲ್ಲಿ ಆರಂಭಿಸುತ್ತಿರುವ ಶಾಖೋತ್ಪನ್ನ ಸ್ಥಾವರಗಳಿಗೆ ಪರಿಸರ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಕಲ್ಲಿದ್ದಲು ಹಂಚಿಕೆಯಾದ ನಂತರವೇ ಈ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಪರಿಸರ ಇಲಾಖೆ ನಿರ್ಧರಿಸಿತ್ತು. ಈಗ ಕಲ್ಲಿದ್ದಲು ಹಂಚಿಕೆಯಾಗಿದ್ದು, ಪರಿಸರ ಇಲಾಖೆಯ ಅನುಮತಿಗಾಗಿ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.4,700 ಮೆಗಾವಾಟ್ ಸಾಮರ್ಥ್ಯದ ಈ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ದೇಸಿ ಕಲ್ಲಿದ್ದಲು ಬಳಸಿದರೆ ನಿತ್ಯ 90 ಸಾವಿರ ಟನ್ ಕಲ್ಲಿದ್ದಲು ಬೇಕಾಗುತ್ತದೆ. ಆದರೆ, ಯಾವ ಯೋಜನೆಯಲ್ಲೂ ಪೂರ್ಣವಾಗಿ ದೇಸಿ ಕಲ್ಲಿದ್ದಲು ಬಳಸುವುದಿಲ್ಲ.

ಶೇ 75ರಷ್ಟು ದೇಸಿ ಹಾಗೂ ಶೇ 25ರಷ್ಟು ವಿದೇಶಿ ಕಲ್ಲಿದ್ದಲು ಬಳಸಲಾಗುತ್ತದೆ. ಆಗ ನಿತ್ಯ 63 ಸಾವಿರ ಟನ್ ದೇಸಿ ಕಲ್ಲಿದ್ದಲು ಬೇಕಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಬಾಯ್ಲರ್‌ಗಳನ್ನು ನಿರ್ಮಿಸಲಾಗುತ್ತದೆ.ಕಲ್ಲಿದ್ದಲು ಹಂಚಿಕೆಯಾಗಿರುವ ಬಗ್ಗೆ ಅಧಿಕೃತವಾಗಿ ಕೇಂದ್ರದಿಂದ ಪತ್ರ ಬಂದ ನಂತರ ಖರೀದಿ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದಾದ ನಂತರ ಗಣಿ ಪ್ರದೇಶದಲ್ಲಿ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಂಡು ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಆರು ರಾಜ್ಯಗಳಿಗೆ ಒಂದೇ ಕಡೆ ಕಲ್ಲಿದ್ದಲು ಹಂಚಿಕೆಯಾಗಿರುವುದರಿಂದ ಸಂಬಂಧಪಟ್ಟ ರಾಜ್ಯಗಳು ಒಪ್ಪಂದ ಮಾಡಿಕೊಂಡು ಗಣಿಯಿಂದ ಕಲ್ಲಿದ್ದಲು ತೆಗೆಯುವ ಕಾರ್ಯ ಕೈಗೊಂಡರೆ ವೆಚ್ಚ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಕಲ್ಲಿದ್ದಲು ದರದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಕೇಂದ್ರ ಸರ್ಕಾರವೇ ಗಣಿ ಹಂಚಿಕೆ ಮಾಡಿರುವುದರಿಂದ ಕಡಿಮೆ ದರದಲ್ಲಿ ಕಲ್ಲಿದ್ದಲು ದೊರೆಯುವ ನಿರೀಕ್ಷೆ ಇದೆ.ಶೀಘ್ರ ಟೆಂಡರ್: ಕಲ್ಲಿದ್ದಲು ಹಂಚಿಕೆಯ ಪತ್ರ ಬಂದ ಕೂಡಲೇ ಕರ್ನಾಟಕ ವಿದ್ಯುತ್ ನಿಗಮದ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಛತ್ತೀಸಗಡ ಮತ್ತು ಯದ್ಲಾಪುರ ಶಾಖೋತ್ಪನ್ನ ಯೋಜನೆಗಳಿಗೆ ಟೆಂಡರ್ ಕರೆಯಲಾಗುವುದು. ಕಾಮಗಾರಿ ಶುರುವಾದ 48 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಿಎಚ್‌ಇಎಲ್, ಎಲ್ ಅಂಡ್ ಟಿ, ಸಿಮನ್ಸ್ ಮೊದಲಾದ ದೊಡ್ಡ ಕಂಪೆನಿಗಳು ವಿದ್ಯುತ್ ಯೋಜನೆಗಳಲ್ಲಿ ತೊಡಗುವುದರಿಂದ ಬೇಗನೇ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry