ರಾಜ್ಯಕ್ಕೆ ನಾಲ್ವರು ಸಿ.ಎಂ.ಗಳು: ಕಾಂಗ್ರೆಸ್ ವ್ಯಂಗ್ಯ

7

ರಾಜ್ಯಕ್ಕೆ ನಾಲ್ವರು ಸಿ.ಎಂ.ಗಳು: ಕಾಂಗ್ರೆಸ್ ವ್ಯಂಗ್ಯ

Published:
Updated:
ರಾಜ್ಯಕ್ಕೆ ನಾಲ್ವರು ಸಿ.ಎಂ.ಗಳು: ಕಾಂಗ್ರೆಸ್ ವ್ಯಂಗ್ಯ

ಗಂಗಾವತಿ: ಮತಪಡೆದು ಹೋದವರು ಜನರ ಆಶೋತ್ತರಕ್ಕೆ ಸ್ಪಂದಿಸಬೇಕು. ಆದರೆ ಕಾಲಕ್ಷೇಪಕ್ಕೆ ಹೋಗಿ ಬ್ಲೂಫಿಲ್ಮ್ ನೋಡುವ ಮೂಲಕ ರಾಜ್ಯದ ಬಿಜೆಪಿ ಸಚಿವರು ರಾಜ್ಯದ ಮರ್ಯಾದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹನುಮಂತರಾವ್ ದೂರಿದರು.ಒಂದೊಮ್ಮೆ ಕರ್ನಾಟಕ ಎಂದರೆ ಇಡೀ ದೇಶದಲ್ಲಿ ಮಾದರಿ ರಾಜ್ಯವಾಗಿತ್ತು. ಇಲ್ಲಿನ ಜನ ಸ್ನೇಹ ಸೌಹಾರ್ದತೆಗೆ ಮಾತಾಗಿದ್ದರು. ಆದರೆ ನೀಲಿ ಚಿತ್ರ ವೀಕ್ಷಣೆಯಿಂದಾಗಿ ಬಿಜೆಪಿ ಸಚಿವರು ಇಡೀ ರಾಜಕಾರಣಿಗಳ ಕುಲಕ್ಕೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದರು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ಚನ್ನಬಸವಸ್ವಾಮಿ ತಾಲ್ಲೂಕು ಕ್ರೀಡಾಂಗಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಯಲ್ಲಿ ನಾಯಕತ್ವದ ಗೊಂದಲವಿದೆ. ಇಂದು ರಾಜ್ಯ ನಾಲ್ವರು ಸಿ.ಎಂ.ಗಳನ್ನು ಕಾಣುವಂತಾಗಿದೆ. ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ ಮತ್ತು ಜಗದೀಶ ಶೆಟ್ಟರ್ ಯಾರಿಗೆ ಅವರೇ ಸಿಎಂ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.  ಬಿಜೆಪಿಯ ರಾಷ್ಟ್ರೀಯ ನಾಯಕ ಎಲ್.ಕೆ. ಅದ್ವಾನಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ದೇಶದಾದ್ಯಂತ ರಥಯಾತ್ರೆ ಮಾಡಿದರು. ಆದರೆ ಬೆಂಗಳೂರಿಗೆ ಬಂದಾಗ ಅಕ್ರಮಗಳಿಂದ ಜೈಲುಪಾಲಾದ ಯಡಿಯೂರಪ್ಪ ಅವರ ಬಗ್ಗೆ ಒಂದೂ ಮಾತಾಡಲಿಲ್ಲ.ಆದರೆ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆ. ಸುರೇಶ ಕಲ್ಮಾಡಿ, ಎ.ರಾಜಾ, ಕನಿಮೋಳಿ ಅವರನ್ನು ಜೈಲಿಗಟ್ಟಿದೆ. ಆದರೆ ಬಿಜೆಪಿ ಸರ್ಕಾರ ಎಷ್ಟು ಸಚಿವರನ್ನು ಜೈಲಿಗೆ ಕಳುಹಿಸಿದೆ ಎಂದು ಪ್ರಶ್ನಿಸಿದರು.ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿ, ನಾವು ಈ ಹಿಂದೆ ಅಧಿಕಾರದಲ್ಲಿದ್ದಾಗ ಜನತೆಗಾಗಿ ಸಂವಿಧಾನದಡಿಯಲ್ಲಿ ರಾಜಕೀಯ ಮಾಡಿದ್ದೇವೆ. ಆದರೆ ಬಿಜೆಪಿ ಶಾಸಕ ಸಚಿವರಂತೆ ಜನರ ದುಡ್ಡು ಕೊಳ್ಳೆ ಹೊಡೆಯಲಿಲ್ಲ ಎಂದರು.ರಾಜ್ಯ ಬಿಜೆಪಿ ಸರ್ಕಾರ ಹೈ-ಕ 371ನೇ ಕಲಂ ಜಾರಿಯ ವಿಷಯವಾಗಿ ಯುವಕರನ್ನು ದಾರಿ ತಪ್ಪಿಸುತ್ತಿದೆ. ಈಗಾಗಲೆ ಕೇಂದ್ರದ ಸಂಸದೀಯ ಸಚಿವ ವೀರಪ್ಪಮೋಯ್ಲಿ ಬೇಸಿಗೆಯ ಅಧಿವೇಶನದಲ್ಲಿ ವಿಶೇಷ ಸ್ಥಾನ ನೀಡುವ ಬಗ್ಗೆ ಅಂತಿಮಗೊಳಿಸುವ ವಿಷಯ ಪ್ರಕಟಿಸಿದ್ದಾರೆ ಎಂದರು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟ್ರಾವ್ ಘೋರ್ಪಡೆ, ಕೊಪ್ಪಳ ಡಿಸಿಸಿ ಅಧ್ಯಕ್ಷ ಬಸವರಾಜ ಹಿಟ್ನಾಳ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಎಸ್.ಬಿ., ಖಾದ್ರಿ ಇತರರು ಮಾತನಾಡಿದರು.ಕಾಂಗ್ರೆಸ್ ಮುಖಂಡರಾದ ಅಮರಜ್ಯೋತಿ ದುರುಗಪ್ಪ, ಅನ್ನಪೂರ್ಣಸಿಂಗ್, ರಜೀಯಾಬೇಗಂ, ಶೈಲಜಾ ರಮೇಶ, ವೀರಭದ್ರಪ್ಪ ನಾಯಕ, ಬಸಪ್ಪ ನಾಯಕ, ಬಿ. ಲಿಂಗರಾಜಪ್ಪ, ಸಂಪಂಗಿಸಾಬ, ಕೃಷ್ಣಪ್ಪ ನಾಯಕ ಮೊದಲಾದವರು ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಗಂಗಾವತಿ ನಗರ ಮತ್ತು ಗ್ರಾಮೀಣ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ಹನುಮಂತಪ್ಪ ನಾಯಕ, ರಾಮಕೃಷ್ಣ ಅವರಿಗೆ ಹನುಮಂತರಾವ್ ಪಕ್ಷದ ಬಾವುಟ ನೀಡಿದರು. ಬಿಜೆಪಿ ಮತ್ತು ಜೆಡಿಎಸ್ ತೊರೆದ ನೂರಾರು ಯುವಕರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry