ಸೋಮವಾರ, ಮಾರ್ಚ್ 1, 2021
29 °C

ರಾಜ್ಯಕ್ಕೆ ಬೇಕಿಲ್ಲವೇ ಅಂತರರಾಜ್ಯ ಚೆಕ್‌ಪೋಸ್ಟ್: ಕಳ್ಳದಂಧೆಗೆ ಇಲ್ಲ ಕಡಿವಾಣ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಕ್ಕೆ ಬೇಕಿಲ್ಲವೇ ಅಂತರರಾಜ್ಯ ಚೆಕ್‌ಪೋಸ್ಟ್: ಕಳ್ಳದಂಧೆಗೆ ಇಲ್ಲ ಕಡಿವಾಣ...!

ಮೊಳಕಾಲ್ಮುರು: ರಾಜ್ಯ ಕೆಲವು ಸೌಲಭ್ಯ ಕೇಳುವುದರಲ್ಲಿ ಹಾಗೂ ಪಡೆಯುವುದರಲ್ಲಿ ಹಿಂದೆ ಇದೆ ಎಂಬ ಆರೋಪಕ್ಕೆ ಪೂರಕ  ಎನ್ನುವಂತೆ ಇಲ್ಲಿನ ಆಂಧ್ರದ ಗಡಿಯಲ್ಲಿ ಅಂತರರಾಜ್ಯ ಚೆಕ್‌ಪೋಸ್ಟ್ ನಿರ್ಮಿಸುವಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ.ಪಟ್ಟಣದಿಂದ ಕೇವಲ 4 ಕಿ.ಮೀ. ದೂರ ರಾಯದುರ್ಗ ಮಾರ್ಗವಾಗಿ ಸಾಗಿದರೆ ಮಾರಮ್ಮ ದೇವಸ್ಥಾನ ಬಳಿ ಆಂಧ್ರಗಡಿ ಸಿಗುತ್ತದೆ. ಅಲ್ಲಿಂದ ಆರು ಕಿ.ಮೀ. ಮುಂದೆ ಸಾಗಿದರೆ ರಾಯದುರ್ಗ ಪಟ್ಟಣವಿದೆ. ರಾಯದುರ್ಗ ಪಟ್ಟಣಕ್ಕೂ ಮೊದಲು ಅಲ್ಲಿನ ಸರ್ಕಾರ ಅಂತರರಾಜ್ಯ ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಬರುವ ಹಾಗೂ ಹೋಗುವ ವಾಹನಗಳ ಬಗ್ಗೆ ಹಾಗೂ ಸಾಗಣೆ ಮಾಡುವ ಸರಕುಗಳ ಬಗ್ಗೆ ನಿಗಾ ವಹಿಸುತ್ತಿರುವುದು ಗಮನಾರ್ಹ. ಆದರೆ, ರಾಜ್ಯದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಇಲ್ಲೂ ಇದೇ ವಿಧದ ಚೆಕ್‌ಪೋಸ್ಟ್ ಸ್ಥಾಪಿಸಬೇಕು ಎಂಬ ಆಲೋಚನೆ ಏಕೆ ಹೊಳೆದಿಲ್ಲ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.ಗುರುವಾರ ಪೊಲೀಸ್ ವೃತ್ತ ನಿರೀಕ್ಷಕ ಎಸ್. ನಾಗರಾಜ್ ಮಾತನಾಡಿ, ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸುವ ಅಗತ್ಯ ಇದೆ. ಆದರೆ, ಇದನ್ನು ಸ್ಥಾಪಿಸುವ ಹೊಣೆ ಪೊಲೀಸ್ ಇಲಾಖೆಗೆ ಸೇರಿಲ್ಲ. ಅರಣ್ಯ ಮತ್ತುವಾಣಿಜ್ಯ ಹಾಗೂ ತೆರಿಗೆ ಇಲಾಖೆ ಅದನ್ನು ಮಾಡಬೇಕು. ಅವರು ಏಕೆ ಸ್ಥಾಪನೆ ಮಾಡಿಲ್ಲ ಎಂಬ ಕಾರಣ ಗೊತ್ತಿಲ್ಲ. ಚೆಕ್‌ಪೋಸ್ಟ್ ಇದ್ದರೆ ಅನೇಕ ಕಳ್ಳದಂಧೆಗಳನ್ನು ಶಮನಗೊಳಿಸಲು ಸಾಧ್ಯವಾಗುತ್ತದೆ. ಕೊನೆಪಕ್ಷ ತಪ್ಪು ಮಾಡುವವರಿಗೆ ಭಯ ಇರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ದರೋಡೆ, ಕಳ್ಳತನ, ಅಪಹರಣ ಸೇರಿದಂತೆ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಪೊಲೀಸ್ ಇಲಾಖೆ ತಾತ್ಕಾಲಿಕ ಚೆಕ್‌ಪೋಸ್ಟ್ ನಿರ್ಮಿಸಿ ತನಿಖೆ ನಡೆಸುತ್ತಿದೆ. ಉಳಿದಂತೆ ರಾತ್ರಿ ವೇಳೆ ಕೆಲಕಾಲ ಪಟ್ಟಣ ಮೂಲಕ ಹಾದು ಹೋಗುವ ವಾಹನಗಳ ತಪಾಸಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.ಈ ಭಾಗವು ನಕ್ಸಲ್ ಬಾಧಿತ ಎಂದು ಗುರುತಿಸಿಕೊಂಡಿರುವ ಜತೆಗೆ, ತಾಲ್ಲೂಕು ಮತ್ತು ಸುತ್ತಮುತ್ತ ಅನೇಕ ಅಪರಾಧಗಳು ನಡೆದಾಗ ಅಪರಾಧಿಗಳು ಕೃತ್ಯದ ನಂತರ ಅಂಧ್ರದಲ್ಲಿ ಕಡೆಗೆ ತಲೆ ಮರೆಸಿಕೊಂಡಿದ್ದ ಹಲವು ಘಟನೆಗಳು ನಡೆದಿವೆ.ಸಿಮೆಂಟ್, ಅರಣ್ಯ ಉತ್ಪನ್ನಗಳು, ಕಲ್ಲು, ಮರಳು, ವಿವಿಧ ಆಹಾರ ಧಾನ್ಯಗಳು ಹೊತ್ತ ವಾಹನಗಳು ಈ ಮಾರ್ಗವಾಗಿ ದಿನನಿತ್ಯ ಓಡಾಡುವುದು ಸಾಮಾನ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಂಭವನೀಯ ಸಮಸ್ಯೆ ತಪ್ಪಿಸಲು ಹಾಗೂ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ನಷ್ಟ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.