ರಾಜ್ಯಕ್ಕೆ ಮರಳುವಂತೆ ಈಶಾನ್ಯ ರಾಜ್ಯದ ನಾಗರಿಕರಿಗೆ ಅಶೋಕ್ ಮನವಿ
ಬೆಂಗಳೂರು (ಐಎಎನ್ಎಸ್): ವದಂತಿಗೆ ಕಿವಿಗೊಟ್ಟ ರಾಜ್ಯ ತೊರೆದಿರುವ ಈಶಾನ್ಯ ರಾಜ್ಯದ ಪ್ರಜೆಗಳನ್ನು ಶೀಘ್ರದಲ್ಲಿ ಭೇಟಿ ಮಾಡಿ ಕರ್ನಾಟಕ ಸುರಕ್ಷಿತ ಹಾಗೂ ಇಲ್ಲಿ ರಕ್ಷಣೆ ಆಬಾಧಿತವಾಗಿದೆ ಎಂದು ಮನವರಿಕೆ ಮಾಡುವುದಾಗಿ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
`ನಾಗಾಲ್ಯಾಂಡ್ ಹಾಗೂ ಮಣಿಪುರದ ನಾಯಕರು ನನ್ನನ್ನು ಆಹ್ವಾನಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಕೂಡಾ ಅಹ್ವಾನ ನೀಡಿದ್ದಾರೆ. ಅತಿ ಶೀಘ್ರದಲ್ಲಿ ಆ ರಾಜ್ಯಗಳಿಗೆ ಭೇಟಿ ನೀಡಲಿದ್ದೇನೆ. ಆದರೆ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಬೇಕಿದೆ~ ಎಂದು ಅವರು ತಿಳಿಸಿದರು.
`ಅಸ್ಸಾಂನಲ್ಲಿ ನಡೆದ ಗಲಭೆ ನಂತರ ತಮ್ಮ ಮೇಲೂ ಹಲ್ಲೆ ನಡೆಯಬಹುದೆಂಬ ವದಂತಿಯನ್ನು ನಂಬಿ ಆಗಸ್ಟ್ 15ರಿಂದ 19ರೊಳಗೆ ಈಶಾನ್ಯ ರಜ್ಯ 25 ಸಾವಿರ ಮಂದಿ ರಾಜ್ಯವನ್ನು ತೊರೆದಿದ್ದಾರೆ. ವದಂತಿ ಹರಡಿದವರು ಆಗಸ್ಟ್ 20ರೊಳಗೆ ಹಲ್ಲೆ ನಡೆಬಹುದಾದ ಸಾಧ್ಯತೆ ಇರುವುದರಿಂದ ರಾಜ್ಯವನ್ನು ತೊರೆಯುವಂತೆ ಹೇಳಿದ್ದರು. ಆದರೆ ಬೆಂಗಳೂರಿನಲ್ಲಿ ಅಂಥ ಯಾವುದೇ ಘಟನೆಗಳು ಜರುಗಿಲ್ಲ. ಹೀಗಾಗಿ ನಗರವನ್ನು ತೊರೆದಿರುವ ಈಶಾನ್ಯ ರಾಜ್ಯದ ನಾಗರಿಕರು ಪುನಃ ರಾಜ್ಯಕ್ಕೆ ಮರಳಬೇಕು~ ಎಂದು ಸಚಿವರು ಮನವಿ ಮಾಡಿಕೊಂಡರು.
`ರಾಜ್ಯದಲ್ಲಿ ಈಶಾನ್ಯ ರಾಜ್ಯದ 3.5 ಲಕ್ಷ ಮಂದಿ ನೆಲೆಸಿದ್ದಾರೆ. ಅವರಲ್ಲಿ 2.4 ಲಕ್ಷ ಮಂದಿ ಬೆಂಗಳೂರಿನಲ್ಲೇ ಇದ್ದಾರೆ. ಆದರೆ ಇಡೀ ರಾಜ್ಯವನ್ನು ಪರಿಗಣಿಸಿದರೆ ಕೇವಲ 25 ಸಾವಿರ ಮಂದಿ ಮಾತ್ರ ತಮ್ಮ ತವರೂರಿಗೆ ತೆರಳಿದ್ದಾರೆ~ ಎಂದು ಅಶೋಕ್ ಅವರು ತಿಳಿಸಿದರು.
ಅಸ್ಸಾಂನ ಸಾರಿಗೆ ಸಚಿವ ಚಂದನ್ ಬ್ರಹ್ಮ ಹಾಗೂ ಕೃಷಿ ಮಂತ್ರಿ ನೀಲಮಣಿ ಸೇನ್ ದೆಕಾ ಹಾಗೂ ನಾಗಾಲ್ಯಾಂಡ್ ಇಂಧನ ಸಚಿವ ದೊಶೆಹಿ ವೈ. ಸೆಮಾ ಸೇರಿದಂತೆ ಈಶಾನ್ಯ ರಾಜ್ಯಗಳ ಗಣ್ಯರು ಇಲ್ಲಿನ ಪರಿಸ್ಥಿತಿ ಅರಿಯಲು ಕಳೆದ ವಾರ ಪ್ರತ್ಯೇಕವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ನಾಗರಿಕರು ಸುರಕ್ಷಿತವಾಗಿದ್ದಾರೆ ಎಂಬ ಭರವಸೆಯನ್ನೂ ನೀಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.