ಶುಕ್ರವಾರ, ಮೇ 14, 2021
32 °C

ರಾಜ್ಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ:ಗಣಿ ಉದ್ದಿಮೆಗಳ ಪುನರ್ವಸತಿ ತುರ್ತಾಗಿ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಎಲ್ಲ ಗಣಿ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಈ ಕೂಡಲೇ ಪುನರ್ವಸತಿ ಹಾಗೂ ಸುಧಾರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಗಣಿ ಪ್ರದೇಶಗಳಲ್ಲಿ ಪುನರ್ವಸತಿ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಯೋಜಿಸಿದ ಕೇಂದ್ರ ಉನ್ನತಾಧಿಕಾರ ಸಮಿತಿ ಸಲ್ಲಿಸಿದ ಶಿಫಾರಸುಗಳನ್ನು ಪರಿಶೀಲಿಸಿದ ಕೋರ್ಟ್ ಈ ನಿರ್ದೇಶನ ನೀಡಿದೆ. ನೈಸರ್ಗಿಕ ಸಂಪನ್ಮೂಲವನ್ನು ಹೊರತೆಗೆಯುವ ವಿಚಾರದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಗಣಿಗಾರಿಕೆ ಕೈಗೊಂಡವರು ಉಲ್ಲಂಘಿಸಿರುವುದರಿಂದ ಅಲ್ಲಿಯ ಪರಿಸರದ ಮೇಲಾಗಿರುವ ಪ್ರತಿಕೂಲ ಪರಿಣಾಮದ ಕುರಿತು ಕಳವಳ ವ್ಯಕ್ತಪಡಿಸಿದ ಕೋರ್ಟ್ ಈ ಸಂಬಂಧ ಈಗಾಗಲೇ ವಿಧಿಸಿರುವ ನಿಷೇಧ ತೆರವುಗೊಳಿಸಲು ನಿರಾಕರಿಸಿದೆ.ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಜಾಗದಲ್ಲಿ ಬಿದ್ದ ಗುಂಡಿಗಳನ್ನು ಭರ್ತಿ ಮಾಡುವುದು, ಹಾಳಾದ ಮಣ್ಣಿನ ಫಲವತ್ತತೆ ಕಾಪಾಡಲು ಕ್ರಮ ಕೈಗೊಳ್ಳುವುದು, ಜತೆಗೆ ದೇಶಿಯ ಜೀವವೈವಿಧ್ಯ ರಕ್ಷಿಸಲು ಅನುಕೂಲವಾಗುವಂತೆ ಅರಣ್ಯೀಕರಣ ಕೈಗೊಳ್ಳುವುದು ಪುನರ್ವಸತಿ ಕಾರ್ಯಕ್ರಮದಲ್ಲಿ ಸೇರಿವೆ.ಗಣಿಗಾರಿಕೆ ನಿಷೇಧ ಮುಂದುವರಿಕೆ`ಗಣಿ ಪ್ರದೇಶಗಳಲ್ಲಿ ಕೂಡಲೇ ಪುನರ್ವಸತಿ ಕಾರ್ಯ ಕೈಗೊಳ್ಳಬೇಕಾಗಿದ್ದು ಗಣಿಗಾರಿಕೆ ನಿಷೇಧ ಮುಂದುವರೆಯಲಿದೆ~ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಪೀಠ ಹೇಳಿದೆ.

ಪುನರ್ವಸತಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಕೇಂದ್ರ ಉನ್ನತಾಧಿಕಾರ ಸಮಿತಿಯ ನೇತೃತ್ವದಲ್ಲೇ ನಡೆಯಬೇಕಾಗಿದ್ದು ಇದಕ್ಕೆಲ್ಲ ತಗಲುವ ಖರ್ಚುವೆಚ್ಚ ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.ಸಮಿತಿ ಪರವಾಗಿ ಹಾಜರಾಗಿದ್ದ ವಕೀಲ ಶ್ಯಾಂ ದಿವಾನ್, ಪುನರ್ವಸತಿಗೆ ಸಂಬಂಧಿಸಿದಂತೆ ಸಮಿತಿಯ ಶಿಫಾರಸುಗಳನ್ನು ಕೋರ್ಟ್ ಸ್ವೀಕರಿಸಿದಲ್ಲಿ ಎ ದರ್ಜೆಯಲ್ಲಿ ಒಳಗೊಳ್ಳುವ 20 ಹಾಗೂ ಬಿ ದರ್ಜೆಯಲ್ಲಿ ಸೇರ್ಪಡೆಯಾಗುವ ಸುಮಾರು 29 ಗಣಿ ಕಂಪೆನಿಗಳ ಪುನರ್ವಸತಿ ಕಾರ್ಯವನ್ನು ಕ್ರಮವಾಗಿ ಮೊದಲ ಹಾಗೂ ಎರಡನೆ ಹಂತದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.