ರಾಜ್ಯಕ್ಕೆ ಹೆಚ್ಚಿನ ಆದ್ಯತೆ ಯಡಿಯೂರಪ್ಪ ಸಂತಸ

7

ರಾಜ್ಯಕ್ಕೆ ಹೆಚ್ಚಿನ ಆದ್ಯತೆ ಯಡಿಯೂರಪ್ಪ ಸಂತಸ

Published:
Updated:

ಬೆಂಗಳೂರು:  ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ 2011-12ರ ರೈಲ್ವೆ ಬಜೆಟ್ ಅನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ‘ಬಜೆಟ್ ಸಂತಸ ತಂದಿದೆ, ಇದರಲ್ಲಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಬ್ಯಾನರ್ಜಿ ಅವರು ರಾಜ್ಯಕ್ಕೆ 11 ನೂತನ ರೈಲು ಮಂಜೂರು ಮಾಡಿರುವುದು ಮತ್ತು ಈಗಾಗಲೇ ಸಂಚಾರ ನಡೆಸುತ್ತಿರುವ ನಾಲ್ಕು ರೈಲ್ವೆ ಮಾರ್ಗಗಳನ್ನು ವಿಸ್ತರಿಸಿರುವುದು ಶ್ಲಾಘನೀಯ’ ಎಂದರು.ಕೋಲಾರದಲ್ಲಿ ಖಾಸಗಿ ಸಹಭಾಗಿತ್ವದಡಿ ರೈಲ್ವೆ ಕೋಚ್ ಘಟಕ ಸ್ಥಾಪನೆ, ಧಾರವಾಡದಲ್ಲಿ ರೈಲ್ವೆ ತರಬೇತಿ ಕೇಂದ್ರ ಸ್ಥಾಪನೆ, ಬೆಂಗಳೂರು-ಹುಬ್ಬಳ್ಳಿ ಮಾರ್ಗ ವಿದ್ಯುದೀಕರಣಕ್ಕೆ ಅನುಮೋದನೆ ಹಾಗೂ ಉಪನಗರ ರೈಲು ಸಂಪರ್ಕ ಜಾಲ ಯೋಜನೆಯಲ್ಲಿ ಬೆಂಗಳೂರನ್ನು ಸೇರಿಸಿರುವುದನ್ನು ಅವರು ಸ್ವಾಗತಿಸಿದರು.ಬಜೆಟ್‌ನಲ್ಲಿ ಘೋಷಿಸಿರುವಂತೆ ಹೊಸದಾಗಿ ಹತ್ತು ಮಾರ್ಗಗಳ ಸಮೀಕ್ಷೆ ಮತ್ತು ಆರು ಜೋಡಿ ಮಾರ್ಗಗಳ ನಿರ್ಮಾಣ ಕಾರ್ಯವನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕೆಂದರು. ಮುಂದಿನ ಮೂರು ವರ್ಷಗಳಲ್ಲಿ ಹೊಸ ರೈಲು ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ 487 ಕೋಟಿ ರೂಪಾಯಿ ನೀಡಲಿದೆ ಎಂದರು.‘ಹುಬ್ಬಳ್ಳಿ-ಅಂಕೋಲಾ ಮಾರ್ಗ ಸೇರಿದಂತೆ ಅನೇಕ ಯೋಜನೆಗಳ ಕುರಿತಂತೆ ರಾಜ್ಯದ ಸಂಸದರ ಜೊತೆ ಚರ್ಚಿಸುತ್ತೇನೆ. ಇವು ಸಂಸತ್ತಿನಲ್ಲಿ ಪ್ರಸ್ತಾಪ ಆಗುವಂತೆ ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry