ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತ

ಶಿಕಾರಿಪುರ: ಗ್ರಾಮದ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನವನ್ನು ಗ್ರಾಮಸ್ಥರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಮಾರವಳ್ಳಿ ಗ್ರಾಮದಲ್ಲಿ ಗುರುವಾರ ನೂತನ ಆಂಜನೇಯ ಸ್ವಾಮಿ ದೇವಸ್ಥಾನ, ಸಮುದಾಯ ಭವನ, ಗಣಪತಿ ಹಾಗೂ ನವಗ್ರಹ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗ್ರಾಮದ ಅಭಿವೃದ್ಧಿಗೆ ನೀಡುವ ಅನುದಾನ ಮುಖ್ಯವಲ್ಲ. ಆ ಅನುದಾನವನ್ನು ಸಮಪರ್ಕವಾಗಿ ಗ್ರಾಮಸ್ಥರು ಸದ್ಬಳಕೆ ಮಾಡಿಕೊಂಡು ಗ್ರಾಮ ಅಭಿವೃದ್ಧಿಗೆ ಶ್ರಮಿಸುವುದು ಮುಖ್ಯ. ಉದ್ಘಾಟನೆಗೊಂಡ ಸಮುದಾಯ ಭವನದಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಮಸ್ಥರದ್ದಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಬಗ್ಗೆ ಗ್ರಾಮಸ್ಥರು ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
‘ರಾಜ್ಯದಲ್ಲಿ ಪ್ರಸ್ತುತ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದ್ದು, ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಂಜೂರಾದ ಕಾಮಗಾರಿಗಳು ಮಾತ್ರ ಪ್ರಸ್ತುತ ನಡೆಯುತ್ತಿವೆ. ಹೈಕಮಾಂಡ್ ಹಾಗೂ ಜಿಲ್ಲೆಯ ಮುಖಂಡರ ಒತ್ತಾಯದಂತೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನೀವೆಲ್ಲರೂ ಆಶೀರ್ವಾದ ಮಾಡ ಬೇಕು’ ಎಂದು ಮನವಿ ಮಾಡಿದರು.
ದಿಂಡದಹಳ್ಳಿ ಪಂಚಪೀಠ ಶಾಖಾಮಠದ ಶಿವಾನಾಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗಾಂಧೀಜಿ ಅವರ ಕನಸಿನಂತೆ ಇಂದು ಗ್ರಾಮಗಳು ಅಭಿವೃದ್ಧಿಯಾಗುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ತಹಶೀಲ್ದಾರ್ ಧರ್ಮೋಜಿ ರಾವ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಂತಮ್ಮ ಪ್ರೇಮ್ ಕುಮಾರ್ಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲೀಲಾವತಿ ಲಕ್ಷ್ಮಣ್, ಸದಸ್ಯ ಹನುಮಂತಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್.ಗುರುಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗದಿಗೆಪ್ಪ, ಸದಸ್ಯರಾದ ಮಾಲಾ ಪಾಟೀಲ್, ಸುಶೀಲಮ್ಮ, ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಚನ್ನಪ್ಪ, ಕಾರ್ಯದರ್ಶಿ ಅಶೋಕ್, ಚಂದ್ರೇಗೌಡ, ಮಂಜಪ್ಪ, ರುದ್ರಪ್ಪ, ಉಜ್ಜಪ್ಪ, ಚನ್ನಪ್ಪ, ಪ್ರಭು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.