ಶನಿವಾರ, ಮಾರ್ಚ್ 6, 2021
21 °C
ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ವಾಡಿಕೆಗಿಂತ 96ರಷ್ಟು ಹೆಚ್ಚು ಮಳೆ

ರಾಜ್ಯದಲ್ಲಿ ಇನ್ನೂ ಐದು ದಿನ ಉತ್ತಮ ಮಳೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಇನ್ನೂ ಐದು ದಿನ ಉತ್ತಮ ಮಳೆ?

ಬೆಂಗಳೂರು: ಗುಜರಾತ್‌ನಿಂದ ಕರ್ನಾಟಕ ಕರಾವಳಿ ಭಾಗದವರೆಗೆ ಕಡಲಾಚೆಯ ಕನಿಷ್ಠ ವಾಯುಭಾರ ಪ್ರದೇಶ (ಆಫ್‌ಷೋರ್‌ ಟ್ರಾಫ್‌) ಪ್ರಬಲವಾಗಿರುವ ಕಾರಣ ಆಗಸ್ಟ್‌ 6ರಿಂದ 10ರವರೆಗೆ ರಾಜ್ಯದ ವಿವಿಧೆಡೆ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ.‘ಕರಾವಳಿ ಪ್ರದೇಶದಲ್ಲಿ ನೈರುತ್ಯ ಮಳೆ ಹೆಚ್ಚು ಕ್ರಿಯಾಶೀಲವಾಗಿದೆ. ಈ ಭಾಗದಲ್ಲಿ ಆಗಸ್ಟ್‌ 10ರವರೆಗೆ ವ್ಯಾಪಕ ಮಳೆ ಬೀಳಲಿದೆ. 6, 7ರಂದು ಏಳು ಸೆಂ.ಮೀ.ಗಿಂತ ಹೆಚ್ಚು ಮಳೆ ಬೀಳಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಅನೇಕ ಸ್ಥಳಗಳಲ್ಲಿ 9ರವರೆಗೂ ಉತ್ತಮ ಮಳೆಯಾಗಲಿದ್ದು, 10ರಂದು ಚದುರಿದ ಮಳೆ ಬರುವ ಸಾಧ್ಯತೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಎಂ. ಮೇತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.‘ಒಡಿಶಾ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳದ ನಡುವೆ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ ಕರ್ನಾಟಕದ ಉತ್ತರ, ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ಬೀಸುತ್ತಿದೆ. ಬೆಂಗಳೂರು ನಗರದಲ್ಲಿ ಒಂದೆರಡು ಬಾರಿ ಬಿರುಗಾಳಿ ಸಹಿತ ಮಳೆಯಾಗಲಿದೆ’ ಎಂದರು.‘ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 352 ಮಿ.ಮೀ., ತುಮಕೂರು ಜಿಲ್ಲೆಯಲ್ಲಿ 283 ಮಿ.ಮೀ., ಮಂಡ್ಯ ಜಿಲ್ಲೆಯಲ್ಲಿ 209 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ 96ರಷ್ಟು ಹೆಚ್ಚಿನ ಮಳೆ ಬಿದ್ದಿದೆ.  ಬೆಂಗಳೂರು ನಗರದಲ್ಲಿ 348 ಮಿ.ಮೀ. (ಶೇ 87), ಕೋಲಾರ ಜಿಲ್ಲೆಯಲ್ಲಿ 283 ಮಿ.ಮೀ. (ಶೇ 85), ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 311 ಮಿ.ಮೀ. (ಶೇ 83) ಮಳೆ ದಾಖಲಾಗಿದೆ. ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚಿನ ಮಳೆ ಬಿದ್ದಿದೆ’ ಎಂದು ವಿವರಿಸಿದರು.‘ಕಲಬುರ್ಗಿ ಜಿಲ್ಲೆಯಲ್ಲಿ 446 ಮಿ.ಮೀ., ಬೀದರ್‌ ಜಿಲ್ಲೆಯಲ್ಲಿ 506 ಮಿ.ಮೀ., ಬಾಗಲಕೋಟೆ ಜಿಲ್ಲೆಯಲ್ಲಿ 219 ಮಿ.ಮೀ., ಕೊಪ್ಪಳ ಜಿಲ್ಲೆಯಲ್ಲಿ 210 ಮಿ.ಮೀ., ಬೆಳಗಾವಿ ಜಿಲ್ಲೆಯಲ್ಲಿ 441 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ  ಮಳೆಯಾಗಿದೆ’ ಎಂದರು.‘ಚಿಕ್ಕಮಗಳೂರು ಜಿಲ್ಲೆಯಲ್ಲಿ 774 ಮಿ.ಮೀ. ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ 33ರಷ್ಟು ಕಡಿಮೆ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ 1,171 ಮಿ.ಮೀ. ಮಳೆಯಾಗಿದ್ದು, ಶೇ 24ರಷ್ಟು ಕಡಿಮೆ ಮಳೆ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,917 ಮಿ.ಮೀ. ಮಳೆಯಾಗಿದ್ದು, ಶೇ 19ರಷ್ಟು ಮಳೆ ಕಡಿಮೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ’ ಎಂದು ಹೇಳಿದರು.ಮಹಾರಾಷ್ಟ್ರದಿಂದ ಇನ್ನಷ್ಟು ನೀರು

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.21 ಲಕ್ಷ ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದೆ. ಇದಲ್ಲದೇ, ಅಲ್ಲಿನ  ಪ್ರಮುಖ ಅಣೆಕಟ್ಟೆ ಕೊಯ್ನಾದಲ್ಲೂ ನೀರಿನ ಸಂಗ್ರಹ ಮಟ್ಟ ಗಣನೀಯವಾಗಿ ಏರುತ್ತಿದೆ. 105 ಟಿ.ಎಂ.ಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟೆಯಲ್ಲಿ ಈಗಾಗಲೇ 79.04 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. 90ರಿಂದ 95 ಟಿ.ಎಂ.ಸಿ ಮೀರುತ್ತಿದ್ದಂತೆ ನೀರು ಹೊರಬಿಡುವ ಸಾಧ್ಯತೆ ಇದೆ.

ಇದರ ಜೊತೆಗೆ ವಾರಣಾ ಅಣೆಕಟ್ಟೆಯಲ್ಲಿ 31.49 ಟಿ.ಎಂ.ಸಿ (ಗರಿಷ್ಠ ಮಟ್ಟ 34.2 ಟಿ.ಎಂ.ಸಿ), ಕಣೇರ ಅಣೆಕಟ್ಟೆಯಲ್ಲಿ 9.20 ಟಿ.ಎಂ.ಸಿ (ಗರಿಷ್ಠ ಮಟ್ಟ 10 ಟಿ.ಎಂ.ಸಿ) ಹಾಗೂ ಧೂಮ ಜಲಾಶಯ 11.42 ಟಿ.ಎಂ.ಸಿ (ಗರಿಷ್ಠ ಮಟ್ಟ 13.5 ಟಿ.ಎಂ.ಸಿ) ನೀರು ಸಂಗ್ರಹವಾಗಿದ್ದು, ಭರ್ತಿಯಾಗುವ ಹಂತದಲ್ಲಿವೆ.ಈ ಅಣೆಕಟ್ಟುಗಳಿಂದ ನೀರು ಹೊರಬಿಟ್ಟರೆ ಕೃಷ್ಣಾ ಹಾಗೂ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ, ಘಟಪ್ರಭಾ, ಮಲಪ್ರಭಾ ನದಿಗಳ ನೀರಿನ ಮಟ್ಟ ಹೆಚ್ಚಳವಾಗಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಮೈದುಂಬಿ ಹರಿಯುತ್ತಿವೆ. ಜಮಖಂಡಿ ತಾಲ್ಲೂಕು ಹಿಪ್ಪರಗಿ ಜಲಾಶಯಕ್ಕೆ 1.32 ಲಕ್ಷ ಕ್ಯುಸೆಕ್‌ ಒಳವು ಹರಿವು ಇದ್ದು, ಅಷ್ಟೆ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.