ರಾಜ್ಯದಲ್ಲಿ ಇನ್ನೆರಡು ಹೂಡಿಕೆ ವಲಯ

7
ಡಿಸೆಂಬರ್ ವೇಳೆಗೆ ಹೊಸ ಕೈಗಾರಿಕಾ ನೀತಿ

ರಾಜ್ಯದಲ್ಲಿ ಇನ್ನೆರಡು ಹೂಡಿಕೆ ವಲಯ

Published:
Updated:

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು `ರಾಷ್ಟ್ರೀಯ ತಯಾರಿಕಾ ಹೂಡಿಕೆ ವಲಯ' (ಎನ್.ಎಂ.ಐ.ಝೆಡ್) ಸ್ಥಾಪಿಸಲು ಸರ್ಕಾರ ಪ್ರಯತ್ನ ನಡೆಸಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ತಿಳಿಸಿದರು.ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯದಲ್ಲಿ ಕೈಗಾರಿಕಾ ವ್ಯವಸ್ಥೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ತುಮಕೂರಿನಲ್ಲಿ ಒಂದು ಎನ್‌ಎಂಐಝೆಡ್ ಇದೆ. ಗುಲ್ಬರ್ಗ ಮತ್ತು ಕೋಲಾರದಲ್ಲೂ ಇದೇ ಮಾದರಿಯ ವಲಯ ಆರಂಭಿಸಲು ಪ್ರಯತ್ನ ನಡೆದಿದೆ.ದೇಶದಲ್ಲಿ ಒಟ್ಟು ಒಂಬತ್ತು ವಲಯಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ' ಎಂದು ಹೇಳಿದರು.ಒಂದು ಹೂಡಿಕೆ ವಲಯ ಆರಂಭಿಸಲು ಅಂದಾಜು 12,500 ಎಕರೆ ಜಮೀನು ಬೇಕು. ಕೈಗಾರಿಕೆಗಳ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ಹೊಸ ಕೈಗಾರಿಕಾ ನೀತಿ ರೂಪಿಸಲಾಗುವುದು. ಇದು ಡಿಸೆಂಬರ್ ವೇಳೆಗೆ ಸಿದ್ಧಗೊಳ್ಳಲಿದೆ ಎಂದರು.

ಹೂಡಿಕೆದಾರರ ಸಮಾವೇಶ

`ದೇಶದಲ್ಲಿ ಒಟ್ಟು 16 ರಾಜ್ಯಗಳು ಹೂಡಿಕೆದಾರರ ಸಮಾವೇಶ ಆಯೋಜಿಸುತ್ತಿವೆ. ಸಮಾವೇಶದಲ್ಲಿ ಮಾಡಿಕೊಳ್ಳುವ ಒಪ್ಪಂದಗಳ ಪೈಕಿ ಅನುಷ್ಠಾನಕ್ಕೆ ಬರುವ ಒಪ್ಪಂದಗಳ ರಾಷ್ಟ್ರೀಯ ಸರಾಸರಿ ಶೇಕಡ 30ರಷ್ಟಿದೆ. ಆದರೆ ಕರ್ನಾಟಕದಲ್ಲಿ ಅದರ ಪ್ರಮಾಣ ಶೇ 40ರಷ್ಟಿದೆ' ಎಂದು ವಿವರಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, `ಕೈಗಾರಿಕೆಗಳು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತಗೊಳ್ಳಬಾರದು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಕೈಗಾರಿಕೆಗಳು ಅಲ್ಲಿಯೂ ಆರಂಭಗೊಳ್ಳಬೇಕು' ಎಂದು ಹೇಳಿದರು.ಚೀನಾಕ್ಕೆ ಪೈಪೋಟಿ

`ಜಾಗತಿಕ ಮಟ್ಟದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಮತ್ತು ಚೀನಾ ದೇಶಗಳ ಕೊಡುಗೆಯ ನಡುವೆ ದೊಡ್ಡ ಅಂತರವಿದೆ. ಚೀನಾವನ್ನು ಹಿಂದಿಕ್ಕಲು ನಾವು ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಯತ್ನ ನಡೆಸಬೇಕು' ಎಂದು ಸಲಹೆ ನೀಡಿದರು. ಅಸೋಚಾಂ ದಕ್ಷಿಣ ವಲಯ ಕೈಗಾರಿಕಾ ಕಾರ್ಯಪಡೆ ಅಧ್ಯಕ್ಷ ವಿನೋದ್ ನೋವಲ್, ದಕ್ಷಿಣ ಭಾರತ ಪರಿಷತ್ತಿನ ಜಂಟಿ ಅಧ್ಯಕ್ಷ ಜೆ. ಕ್ರಾಸ್ತಾ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry