ರಾಜ್ಯದಲ್ಲಿ ಜೆಡಿಎಸ್ ಪರ ಅಲೆ: ಸೈಯದ್ ಹುಸೇನ್

7

ರಾಜ್ಯದಲ್ಲಿ ಜೆಡಿಎಸ್ ಪರ ಅಲೆ: ಸೈಯದ್ ಹುಸೇನ್

Published:
Updated:

ಮಾನ್ವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭ್ರಷ್ಟಾಚಾರ ಹಾಗೂ ಜನವಿರೋಧಿಸಿ ನೀತಿಗಳಿಂದ ಜನತೆ ಬೇಸತ್ತಿರುವ ಕಾರಣ ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಜಾತ್ಯತೀತ ಜನತಾದಳ ಪಕ್ಷದ ಪರವಾದ ಅಲೆ ಇದೆ.   ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ವಿವಿಧ ಕಡೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಪಾರ ಸಂಖ್ಯೆಲ್ಲಿ ಜನ ಸೇರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸೈಯದ್ ಹುಸೇನ್  ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರ 20ತಿಂಗಳ ಅಧಿಕಾರದ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಪಕ್ಷದಲ್ಲಿ ಯುವಕರ ಪಾತ್ರದ ಮಹತ್ವ ಅರಿತುಕೊಂಡು ಎಲ್ಲಾ ವರ್ಗಗಳ ಯುವಕರನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.ಮಾನ್ವಿ ವಿಧಾನಸಭೆ ಕ್ಷೇತ್ರ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಪಕ್ಷ ಸಂಘಟನೆ ಜವಾಬ್ದಾರಿಯನ್ನು ತಮಗೆ ನೀಡಲಾಗಿದ್ದು, ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಪ್ರವಾಸ ಕೈಗೊಂಡು ಯುವ ಕಾರ್ಯಕರ್ತರನ್ನು ಸಂಘಟಿಸುವುದಾಗಿ ಸೈಯದ್ ಹುಸೇನ್ ಹೇಳಿದರು. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾಚಾರ್ ವರದಿ ಜಾರಿಗೆ ತರುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಪಕ್ಷ ಈಗ ನಿರ್ಲಕ್ಷ್ಯವಹಿಸಿದೆ. ಅಲ್ಪಸಂಖ್ಯಾತರಿಗೆ ಸುಳ್ಳು ಭರವಸೆಗಳನ್ನು ನೀಡಿ ತಮ್ಮ ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಮುಖಂಡರು ಯತ್ನಿಸುತ್ತಿದ್ದಾರೆ ಎಂದು ಸೈಯದ್ ಹುಸೇನ್ ಟೀಕಿಸಿದರು.ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಎಂ.ಡಿ.ಮೋಹಿನ್‌ಖಾನ್, ಸ್ಥಳೀಯ ವಿವಿಧ ಘಟಕಗಳ ಪದಾಧಿಕಾರಿಗಳಾದ ಜೆ.ಎಚ್.ದೇವರಾಜ, ಇಬ್ರಾಹಿಂ ಖುರೇಷಿ, ಸುಭಾನ್‌ಬೇಗ್, ಎಸ್.ಎ.ರಷೀದ್. ಎಂ.ಡಿ.ಉಸ್ಮಾನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry