ಮಂಗಳವಾರ, ಜೂನ್ 22, 2021
27 °C
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪ್ಪ ಆರೋಪ

ರಾಜ್ಯದಲ್ಲಿ ದುರಾಡಳಿತ; ಅಭಿವೃದ್ಧಿ ಶೂನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೇಂದ್ರ, ರಾಜ್ಯ ಸರ್ಕಾರ ಯುವ ಜನತೆಗೆ ಅಗತ್ಯವಾಗಿರುವ ಉದ್ಯೋಗ ಸೃಷ್ಟಿಸಲಿಲ್ಲ. ಶಿಕ್ಷಣ, ರಸ್ತೆ ಮುಂತಾದ ಮೂಲ­ಸೌಲಭ್ಯ ಕಲ್ಪಿಸುತ್ತಿಲ್ಲ. ಅಭಿವೃದ್ಧಿ ಮರೆತು, ₨ 1ಕ್ಕೆ ಅಕ್ಕಿ ಕೊಡುವುದೇ ದೊಡ್ಡ ವಿಚಾರವಲ್ಲ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಯುವ ಜೆಡಿಎಸ್ ಸಮಾವೇಶ ಮತ್ತು ಪದಗ್ರಹಣ ಕಾರ್ಯ­ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ದುರಾಡಳಿತಕ್ಕೆ ಜನತೆ ಬೇಸತ್ತಿದ್ದಾರೆ. ಮುಂದಿನ ವರ್ಷ ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸಿದ್ದರಾಮಯ್ಯ ಅಧಿಕಾರ­ದಲ್ಲಿ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಗಮನ ಕೊಡುತ್ತಿಲ್ಲ. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಗರ ಪ್ರದೇಶದ ಶ್ರೀಮಂತರ ಮಕ್ಕಳ ಜತೆ ಗ್ರಾಮೀಣ ಬಡ ಮಕ್ಕಳು ಸ್ಪರ್ಧಿಸುವಂತಾಗಿದೆ. ಕಳೆದ 10 ವರ್ಷದಿಂದ ಕೇಂದ್ರ ಸರ್ಕಾರ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬದಲಿಗೆ, ಜನರ ಸಮಸ್ಯೆಗಳನ್ನು ಬಗೆ­ಹರಿಸುವ ನಿಟ್ಟಿನಲ್ಲಿ ರಾಜಕಾರಣಿಗಳು ಮುಂದಾಗ­ಬೇಕು. ಯುವ ಜನತೆಗೆ ಉದ್ಯೋಗ ಭರವಸೆ ನೀಡಬೇಕು. ಜನರನ್ನು ಸಬಲರನ್ನಾಗಿ ಮಾಡಲು ಯೋಜನೆ ರೂಪಿಸಬೇಕು. ರಾಜ್ಯದಲ್ಲಿ ತೆಂಗು ನಶಿಸಿ ಹೋಗುತ್ತಿದೆ. ಆದರೆ ಸರ್ಕಾರ ರೈತರ ಪರ ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿದೆ ಎಂದು ಟೀಕಿಸಿದರು.ಬಿಜೆಪಿ ಸರ್ಕಾರ 5 ವರ್ಷ ರಾಜ್ಯವನ್ನು ವಿನಾಶದತ್ತ ಕೊಂಡೊಯ್ದಿತ್ತು. ಅಲಿಬಾಬಾ ಮತ್ತು 40 ಮಂದಿ ಕಳ್ಳರಂತೆ ಕೊಳ್ಳೆ ಹೊಡೆಯ­ಲಾಯಿತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ­ಯಾದ ನಂತರವಾದರೂ ಜನರ ಸಮಸ್ಯೆ ಕೇಳುವ ಬದಲಿಗೆ ಜಾತಿ ಜಾತಿಗಳನ್ನು ಒಡೆದು ಆಳುವ ಜಾತಿ ರಾಜಕೀಯಕ್ಕೆ ಮುಂದಾಗಿದ್ದಾರೆಂದು ಅವರು ವಾಗ್ದಾಳಿ ನಡೆಸಿದರು.ಪ್ರಧಾನ ಕಾರ್ಯದರ್ಶಿ ಅಬ್ದುಲ್‌ಅಜೀಂ ಮಾತ­ನಾಡಿ, ಸಮಾವೇಶಗಳಿಗೆ ಸಾವಿರಾರು ಮಂದಿಯನ್ನು ಹಣ ಕೊಟ್ಟು ಕರೆದುಕೊಂಡು ಬರುವುದರಿಂದ ಗೆಲುವು ಸಾಧ್ಯವಿಲ್ಲ. ಅತಿ ಹೆಚ್ಚು ಹಣ ಜನರನ್ನು ಕರೆದು ತರುವುದಕ್ಕೆ ವ್ಯರ್ಥ­ವಾಗುತ್ತಿದೆ. ಇದರಿಂದ ಭ್ರಷ್ಟಾಚಾರ ಸಹ ಹೆಚ್ಚುತ್ತಿದೆ ಎಂದು ವಿಷಾದಿಸಿದರು.ನರೇಂದ್ರಮೋದಿ ಕೇವಲ ಉತ್ಸವ ಮೂರ್ತಿ­ಯಾಗಿದ್ದು, ಪ್ರಧಾನಿಯಾಗಲು ಸಾಧ್ಯವಿಲ್ಲ. ಹೊರ­ಗಿನಿಂದ ಬಂದ ಸೋನಿಯಾಗಾಂಧಿ ಮನಮೋಹನ್‌ ಸಿಂಗ್ ಅವರನ್ನು ಮುಂದಿಟ್ಟುಕೊಂಡು 10 ವರ್ಷ ದೇಶ ಆಳಿದ್ದಾರೆ. ಈ ದೇಶದ ಜನರ ನೋವುಗಳ ಅರಿವು ಅವರಿಗೆ ಇಲ್ಲ. ಕಾಂಗ್ರೆಸ್‌ ಸರ್ಕಾರದಿಂದ ಮಹಿಳೆಯರ ಮೇಲಿನ ದೌರ್ಜನ್ಯ ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಅವರು ಟೀಕಿಸಿದರು.ಯುವ ಜೆಡಿಎಸ್‌ ನೂತನ ಜಿಲ್ಲಾಧ್ಯಕ್ಷರಾಗಿ ಬೆಳ್ಳಿ ಲೋಕೇಶ್‌ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್‌.ಹುಲಿನಾಯ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ನಾರಾಯಣ­ರಾವ್‌, ಯುವ ಜೆಡಿಎಸ್‌ ಕಾರ್ಯಾಧ್ಯಕ್ಷ ಬಿ.ಎಚ್‌.ಚಂದ್ರಶೇಖರ್‌, ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಾಯ್ಕರ್‌, ಲಕ್ಷ್ಮಮ್ಮ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌, ಮುಖಂಡರಾದ ನರಸೇಗೌಡ, ಬಿ.ಎನ್‌.ಬಸವರಾಜ್‌ ಪಾದಯಾತ್ರಿ, ರೇವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ, ಸದಸ್ಯರಾದ ಬಡೀರಣ್ಣ, ಹುಚ್ಚಯ್ಯ, ಸಿ.ಆರ್‌.ಉಮೇಶ್‌, ಜಗದೀಶ್‌, ಪ್ರೇಮಾ ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.