ರಾಜ್ಯದಲ್ಲಿ ಪ್ರತಿಭಟನೆ, ತಮಿಳುನಾಡಿನಲ್ಲಿ ಸಂಭ್ರಮ

7
ಕೇಂದ್ರ ಸರ್ಕಾರದಿಂದ ಕಾವೇರಿ ಐತೀರ್ಪು ಅಧಿಸೂಚನೆ ಪ್ರಕಟಣೆ

ರಾಜ್ಯದಲ್ಲಿ ಪ್ರತಿಭಟನೆ, ತಮಿಳುನಾಡಿನಲ್ಲಿ ಸಂಭ್ರಮ

Published:
Updated:
ರಾಜ್ಯದಲ್ಲಿ ಪ್ರತಿಭಟನೆ, ತಮಿಳುನಾಡಿನಲ್ಲಿ ಸಂಭ್ರಮ

ಮುಖ್ಯಮಂತ್ರಿ ಜಯಾ ಶ್ಲಾಘನೆ

ಚೆನ್ನೈ (ಪಿಟಿಐ): 
ಕೇಂದ್ರ ಸರ್ಕಾರ ಕಾವೇರಿ ನ್ಯಾಯಮಂಡಳಿ ಐತೀರ್ಪಿನ ಅಧಿಸೂಚನೆ ಹೊರಡಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕಾವೇರಿ ಐತೀರ್ಪಿನ ಅಧಿಸೂಚನೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, `ನನಗೆ ಮತ್ತು ನನ್ನ ಸರ್ಕಾರಕ್ಕೆ ಇದು ದೊಡ್ಡ ಜಯ. 22 ವರ್ಷಗಳ ನಂತರ ನಮಗೆ ನ್ಯಾಯ ದೊರಕಿದೆ. ಕರ್ನಾಟಕ ಈಗ ನೀರು ಬಿಡಲೇಬೇಕಿದೆ' ಎಂದು ಹೇಳಿದ್ದಾರೆ.

ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇದರಿಂದ ನ್ಯಾಯ ದೊರಕಿದಂತಾಗಿದೆ. ಕರ್ನಾಟಕ ಈಗ ನೀರು ಬಿಡುವುದಿಲ್ಲ ಎನ್ನುವಂತಿಲ್ಲ.ಅಧಿಸೂಚನೆ ಪ್ರಕಾರ ನೀರು ಬಿಡಲೇಬೇಕಿದೆ. ಅದೇ ರೀತಿ ನೀರಿನ ಅಭಾವದ ಕಾಲದಲ್ಲಿ ತಮಿಳುನಾಡು ನ್ಯಾಯಮಂಡಳಿ ತೀರ್ಪಿನಂತೆ ನೀರು ಹಂಚಿಕೆ ಸೂತ್ರಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.`ಇದೊಂದು ಅಭೂತಪೂರ್ವ ಗೆಲುವು. 30 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿ  ನನಗೆ ಸಂತೃಪ್ತಿ ಹಾಗೂ ಸಾಧನೆಯ ಅನುಭವವಾಗುತ್ತಿದೆ. ಹೊಸ ಸಚಿವಾಲಯ ಕಟ್ಟಡವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಲು ಸಹ ರಾಷ್ಟ್ರೀಯ ಪರಿಸರ ನ್ಯಾಯಮಂಡಳಿ ಬುಧವಾರ ಅನುಮತಿ ನೀಡಿದೆ. ಇದೊಂದು ವಿಶೇಷ ದಿನ' ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದ್ದಾರೆ.ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಸಹ ಯುಪಿಎ ಸರ್ಕಾರ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.ನಿರ್ವಹಣಾ ಮಂಡಳಿ ಬೇಡ: ಶೆಟ್ಟರ್

ಬೆಂಗಳೂರು:
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ಅಸ್ತಿತ್ವಕ್ಕೆ ತರಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬುಧವಾರ ಇಲ್ಲಿ ಹೇಳಿದರು.

ನಗರದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ವಿವಾಹ ಸಮಾರಂಭಕ್ಕೆ ಆಗಮಿಸಿದ ಅವರು ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಿಂದ ಹಲವಾರು ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಈ ಸಿವಿಲ್ ಪ್ರಕರಣಗಳು ಇತ್ಯರ್ಥವಾಗದೇ ನಿರ್ವಹಣಾ ಮಂಡಳಿಯನ್ನು ಅಸ್ತಿತ್ವಕ್ಕೆ ತರಬಾರದು ಎಂದು ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೆ ಮನವಿ ಮಾಡಿದ್ದೇವೆ. ಅವರು ಕಾನೂನು ಸಚಿವರ ಜತೆ ಚರ್ಚಿಸಿ, ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದಾರೆ.ಈಗಾಗಲೇ ಸುಪ್ರೀಂ ಕೋರ್ಟ್ ಅಧಿಸೂಚನೆ ಹೊರಡಿಸಿದೆ. ಕಾವೇರಿ ನ್ಯಾಯ ಮಂಡಳಿಯ ತೀರ್ಪಿನ ಸೆಕ್ಷನ್ 6 (ಎ) ಪ್ರಕಾರ ನಿರ್ವಹಣಾ ಮಂಡಳಿಯನ್ನು ರೂಪಿಸಬೇಕಾಗುತ್ತದೆ.  ಅದನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೆ, ಅದನ್ನು ಅಸ್ತಿತ್ವಕ್ಕೆ ತರಬಾರದು ಎಂಬುದು ನಮ್ಮ ಮನವಿ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೋ ಕಾದು ನೋಡಬೇಕು ಎಂದರು.ಅನ್ಯಾಯವಾಗಲು ಬಿಡಲಾರೆವು

ಕಾನೂನು ಹೋರಾಟಕ್ಕೆ ರಾಜ್ಯ ಸರಕಾರಕ್ಕೆ ಇನ್ನೂ ಅವಕಾಶವಿದೆ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನ ನಡೆಸಿದೆ. ಈ  ವಿಚಾರದಲ್ಲಿ 50 ವರ್ಷಗಳ ಅವಧಿಯಲ್ಲಿ ಕೇವಲ 4 ವರ್ಷ ಮಾತ್ರ ರಾಜ್ಯದ ಜನತೆಗೆ ತೊಂದರೆಯಾಗಿದೆ. ಐತೀರ್ಪು ಅಧಿಸೂಚನೆ ಕುರಿತಂತೆ ಈಗಲೂ ರಾಜ್ಯ ಸರ್ಕಾರ ಆಶಾಭಾವನೆ ಹೊಂದಿದ್ದು, ಜನತೆ ಆತಂಕಪಡಬೇಕಿಲ್ಲ'

- ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿಬಸ್ ಸಂಚಾರ ಸ್ಥಗಿತ

ಉದಕಮಂಡಲಂ (ಪಿಟಿಐ):
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಹೊರಡಿಸಲಾದ ಐತೀರ್ಪಿನ ಅಧಿಸೂಚನೆ ನಂತರ ಉಂಟಾಗಿರುವ ತ್ವೇಷಮಯ ವಾತಾವರಣದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ ತೆರಳುವ ತನ್ನ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.ಇಲ್ಲಿಂದ ಚಾಮರಾಜನಗರ, ಮೈಸೂರು ಹಾಗೂ ಮಂಡ್ಯಗಳಿಗೆ ತೆರಳುವ ತಮಿಳುನಾಡಿನ ಬಸ್ ಸೇವೆಯನ್ನು ಬುಧವಾರ ಮಧ್ಯಾಹ್ನದಿಂದ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿರುವ ಇತರೆ ವಾಹನಗಳು ಕರ್ನಾಟಕ ಪ್ರವೇಶಿಸಬಾರದು ಎಂದು ಪೊಲೀಸರು ತಿಳಿಸಿದ್ದಾರೆ.ಅಧಿಸೂಚನೆಯ ಅನುಕೂಲ - ಅನನುಕೂಲ

ಕಾವೇರಿ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿರುವುದರಿಂದ ಸಂಪುರ್ಣವಾಗಿ ನಿರಾಶರಾಗಬೇಕಿಲ್ಲ. ಇದರಿಂದ ಅನುಕೂಲ, ಅನನುಕೂಲ ಎರಡೂ ಇದೆ. ಮಧ್ಯಂತರ ತೀರ್ಪಿನ ಪ್ರಕಾರ ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡಬೇಕಾಗಿತ್ತು. ಅಂತಿಮ ತೀರ್ಪಿನ ಪ್ರಕಾರ 192 ಟಿಎಂಸಿ ಅಡಿ ನೀರು ಬಿಡಬೇಕಾಗುತ್ತದೆ ಅಷ್ಟೇ.

ಮಧ್ಯಂತರ ತೀರ್ಪಿನಲ್ಲಿ ಕರ್ನಾಟಕದ ಅಚ್ಚುಕಟ್ಟು ಪ್ರದೇಶವನ್ನು 11.02 ಲಕ್ಷ ಎಕರೆಗೆ ಸೀಮಿತಗೊಳಿಸಲಾಗಿತ್ತು. ಆದರೆ, ಈಗ 18.85 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಆದರೆ ಒಟ್ಟಾರೆ ನೋಡುವುದಾದರೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.ಕರ್ನಾಟಕ, 465 ಟಿಎಂಸಿ ಅಡಿ ನೀರು ಅವಶ್ಯಕತೆ ಇದೆ ಎಂದು ನ್ಯಾಯಮಂಡಳಿಗೆ ಮನವರಿಕೆ ಮಾಡಿಕೊಟ್ಟಿತ್ತು. ಆದರೆ, 270 ಟಿಎಂಸಿ ಅಡಿ ನೀರು ಮಾತ್ರ ಹಂಚಿಕೆ ಮಾಡಿದೆ. ವರ್ಷದಲ್ಲಿ ಕುಡಿಯುವುದಕ್ಕೆ 30 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಈಗ 1.8 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಾಗಲಿದೆ. ಏತ ನೀರಾವರಿ ಯೋಜನೆಗಳಿಗೆ ನೀರು ಹಂಚಿಕೆ ಆಗಿಲ್ಲ.ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಏತ ನೀರಾವರಿ ಯೋಜನೆಗಳು ಬೇರೆ ಬೇರೆ ಹಂತದಲ್ಲಿ ಪ್ರಗತಿಯಲ್ಲಿವೆ. ಅವುಗಳಿಗೆ ್ಙ 200 ಕೋಟಿ ವೆಚ್ಚ ಮಾಡಲಾಗಿದೆ. ಇದೆಲ್ಲ ನಷ್ಟವಾಗಲಿದೆ. ಕೇರಳಕ್ಕೆ 30 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ್ದು, ಅದು ಕೇವಲ 9 ಟಿಎಂಸಿ ಅಡಿ ಮಾತ್ರ ಬಳಸಿಕೊಳ್ಳಲಿದೆ. ಆ ರಾಜ್ಯವು ಬಳಸಿಕೊಳ್ಳಲು ಆಗದ 21 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹಂಚಿಕೆ ಮಾಡಲಾಗಿದೆ.ತಮಿಳುನಾಡಿನಲ್ಲಿ ಅಂತರ್ಜಲದಿಂದ 30 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಇದನ್ನು ಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ ಪರಿಸರ ಸಂರಕ್ಷಣೆಗಾಗಿ ತಮಿಳುನಾಡಿಗೆ 10 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಹೀಗಾಗಿ ತಮಿಳುನಾಡಿಗೆ ಅನುಕೂಲವಾಗಿದೆ.ಐತೀರ್ಪು ಪ್ರಶ್ನಿಸಿ ಈಗಾಗಲೇ ನಾಲ್ಕೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಅಲ್ಲಿ ಕರ್ನಾಟಕ ಸಮರ್ಥವಾಗಿ ಕಾನೂನು ಹೋರಾಟ ಮುಂದುವರಿಸಬೇಕು. ಬೆಳೆ ಪದ್ಧತಿ, ನೀರಾವರಿ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. 3-4 ವರ್ಷಗಳಿಂದ ನಿಗದಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಇನ್ನು ಮುಂದಾದರೂ ಆ ನೀರನ್ನು ಉಳಿಸಿಕೊಳ್ಳಬೇಕು. ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜನೆಗಳನ್ನು ರೂಪಿಸಬೇಕು.

  - ಟಿ.ತಿಮ್ಮೇಗೌಡ, ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ`ರಾಜ್ಯಕ್ಕೆ ನಷ್ಟ'

ಅಧಿಸೂಚನೆ ಹೊರಡಿಸಿರುವುದರಿಂದ ರಾಜ್ಯಕ್ಕೆ ಪೂರ್ಣ ನಷ್ಟವಾಗಲಿದೆ. 1924ರ ಒಪ್ಪಂದ ಪುನರಾವರ್ತನೆ ಆಗಲಿದೆ. ಕುಡಿಯುವ ನೀರು, ನೀರಾವರಿಗೆ ತೊಂದರೆಯಾಗಲಿದೆ. ಜಲಾಶಯಗಳ ಮೇಲೆ ನಮಗೆ ಯಾವುದೇ ಹಿಡಿತ ಇರುವುದಿಲ್ಲ. ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಆಗಲಿದೆ.ಕಾವೇರಿ ಜಲಾನಯನ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ. ಕಬ್ಬು ಬೆಳೆ ವಿಸ್ತರಣೆಗೆ ಅವಕಾಶ ಇಲ್ಲದಂತಾಗಿದೆ. ಸಕ್ಕರೆ ಕಾರ್ಖಾನೆಗಳು ಮುಚ್ಚಲಿವೆ. ಯಾವ ರೀತಿಯಿಂದ ನೋಡಿದರೂ ರಾಜ್ಯಕ್ಕೆ ಲಾಭವಾಗುವುದಿಲ್ಲ.

- ಕ್ಯಾ.ರಾಜಾರಾವ್, ನೀರಾವರಿ ತಜ್ಞರುಮಧ್ಯಂತರ `ಕಿರಿಕಿರಿಯಿಂದ' ಮುಕ್ತಿ

ಮಧ್ಯಂತರ ಆದೇಶದಿಂದ ಹೊರ ಬಂದಿದ್ದೇವೆ. ತಮಿಳುನಾಡು ಪ್ರತಿ ಬಾರಿಯೂ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಿತ್ತು. ಅಲ್ಲಿ ರಾಜ್ಯಕ್ಕೆ ನ್ಯಾಯ ಸಿಗುತ್ತಿರಲಿಲ್ಲ. ತಮಿಳುನಾಡು ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತದೆ. ಆ ರಾಜ್ಯದ ಲಾಬಿಯಿಂದಾಗಿ ಕರ್ನಾಟಕಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಮಾತು ಇದುವರೆಗೆ ಕೇಳಿ ಬಂದಿತ್ತು.ಇನ್ನು ಮುಂದೆ ಇದಕ್ಕೆ ಅವಕಾಶ ಇರುವುದಿಲ್ಲ. ನೀರು ನಿರ್ವಹಣಾ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಎರಡೂ ರಾಜ್ಯಗಳಿಗೆ ಸೇರದ ನೀರಾವರಿ ತಜ್ಞರು, ಎಂಜಿನಿಯರ್‌ಗಳು ಆ ಮಂಡಳಿಯಲ್ಲಿ ಇರುತ್ತಾರೆ. ಅಲ್ಲಿ ವಾಸ್ತವ ಸ್ಥಿತಿ ತಿಳಿಸಲು ಅವಕಾಶ ಇರುತ್ತದೆ. ಸಂಕಷ್ಟ ಇದ್ದಾಗ ಕಡಿಮೆ ನೀರು ಬಿಡುತ್ತೇವೆ ಎಂದು ತಿಳಿಸಬಹುದು. ಐತೀರ್ಪಿನಲ್ಲಿ ಅದಕ್ಕೆ ಅವಕಾಶ ಇದೆ.

- ಸಿ.ನರಸಿಂಹಪ್ಪ, ಭಾರತೀಯ ರೈತ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry