ರಾಜ್ಯದಲ್ಲಿ ಪ್ರಥಮ ಬಾರಿ ಸಿಪಿಎಂಗೆ ಆಡಳಿತ

7

ರಾಜ್ಯದಲ್ಲಿ ಪ್ರಥಮ ಬಾರಿ ಸಿಪಿಎಂಗೆ ಆಡಳಿತ

Published:
Updated:

ಚಿಕ್ಕಬಳ್ಳಾಪುರ: ಪ್ರಸಕ್ತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯು ಹಲವು ವಿಶೇಷ, ಅಚ್ಚರಿಗಳಿಗೆ ಕಾರಣವಾಗಿದೆ. ಅಂಥ ವಿಶೇಷಗಳಲ್ಲಿ ಸಿಪಿಎಂ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತಾಲ್ಲೂಕು ಪಂಚಾಯಿತಿಯ ಚುಕ್ಕಾಣಿ ಹಿಡಿದಿರುವುದು ಕೂಡ ಒಂದು.ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸಿಪಿಎಂ ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದು, ತಾಲ್ಲೂಕು ಪಂಚಾಯಿತಿಯ 15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಲಿ ಕಾಂಗ್ರೆಸ್ ಶಾಸಕರ ಪ್ರಭಾವ ನಡುವೆಯೂ ಬಾಗೇಪಲ್ಲಿಯನ್ನು ಭದ್ರಕೋಟೆಯನ್ನಾಗಿಸಿಕೊಂಡಿದ್ದ ಸಿಪಿಎಂ ಕಸಬಾ ಮತ್ತು ಗೂಳೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.ಬಾಗೇಪಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ 70 ವರ್ಷಗಳಿಂದ ಜನಪರ ಹೋರಾಟ ನಡೆಸಿದ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿದ ಪರಿಣಾಮ ಗೆಲುವು ಸಾಧ್ಯವಾಗಿದೆ ಎಂದು ಸಿಪಿಎಂ ಮುಖಂಡರು ಹೇಳುತ್ತಾರೆ. ಪಕ್ಕದ ಗುಡಿಬಂಡೆ ತಾಲ್ಲೂಕು ಪಂಚಾಯಿತಿಯಲ್ಲಿ 11 ಸ್ಥಾನಗಳ ಪೈಕಿ 5 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಉಳಿದ 4 ಸ್ಥಾನಗಳು ಕಾಂಗ್ರೆಸ್, 2 ಸ್ಥಾನಗಳು ಜೆಡಿಎಸ್ ಪಾಲಾಗಿವೆ. ಕಾಂಗ್ರೆಸ್, ಬಿಜೆಪಿಯನ್ನು ಸಮಾನವಾಗಿ ದೂರ ಇಟ್ಟಿರುವ ಸಿಪಿಎಂ, ಜೆಡಿಎಸ್ ಜೊತೆ ಸಮ್ಮಿಶ್ರ ಆಡಳಿತ ನಡೆಸುವ ನಿರೀಕ್ಷೆ ಹೊಂದಿದೆ.ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಎರಡನೇ ಅವಧಿಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಕೆಲವೇ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಎನ್.ಸಂಪಂಗಿ ಶಾಸಕರಾಗಿ ಆಯ್ಕೆಯಾದ ನಂತರದ ಎರಡೂವರೆ ವರ್ಷಗಳಲ್ಲಿ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ, ಸಮಸ್ಯೆಗಳು ಪರಿಹಾರಗೊಳ್ಳಲಿಲ್ಲ. ಇದರಿಂದ ಬೇಸತ್ತ ಜನರು ಮತ್ತೆ ಜನಪರ ಹೋರಾಟಕ್ಕೆ ಮನ್ನಣೆ ನೀಡಿ ಸಿಪಿಎಂ ಪರ ಮತ ಚಲಾಯಿಸಿದ್ದಾರೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿಯ ದೇವರಗುಡಿಪಲ್ಲಿ, ಗೂಳೂರು, ನಲ್ಲಪರೆಡ್ಡಿಪಲ್ಲಿ, ಪರಗೋಡು, ಪಾತಪಾಳ್ಯ, ಪೋಳಿನಾಯಕನಪಲ್ಲಿ, ಸೋಮನಾಥಪುರ, ಯಲಂಪಲ್ಲಿ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿರುವ ಸಿಪಿಎಂ ಪ್ರಥಮ ಬಾರಿಗೆ ಆಡಳಿತ ನಡೆಸಲಿದೆ. ಗುಡಿಬಂಡೆ ತಾಲ್ಲೂಕಿನ ಚೆಂಡೂರು, ಹಂಪಸಂದ್ರ, ಕಾತೇನಹಳ್ಳಿ, ಸೋಮೇನಹಳ್ಳಿ, ತಿರುಮಣಿ ಕ್ಷೇತ್ರಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಸಿಪಿಎಂ, ಜೆಡಿಎಸ್ ಜೊತೆಗೂಡಿ ಆಡಳಿತ ನಡೆಸುವ ಸಾಧ್ಯತೆ ಹೆಚ್ಚಿದೆ. ಇದು ಸಾಧ್ಯವಾದಲ್ಲಿ ಸಿಪಿಎಂ ಒಟ್ಟು ಎರಡು ತಾಲ್ಲೂಕುಗಳಲ್ಲಿ ತನ್ನ ಹಿಡಿತ ಸಾಧಿಸಲಿದೆ.‘ಚುನಾವಣೆ ಸಂದರ್ಭದಲ್ಲಿ ಅಪಾರ ಪ್ರಮಾಣ ಹಣ, ಹೆಂಡ ಹಂಚಿಕೆಯಾದರೂ ಮತದಾರರು ಆಮಿಷಕ್ಕೆ ಒಳಗಾಗಲಿಲ್ಲ. ಜನರ ಸಮಸ್ಯೆಗಳಿಗೆ ಕೇಂದ್ರವಾಗಿಸಿಕೊಂಡು ಸಿಪಿಎಂ ಮಾತ್ರ ಹೋರಾಟ ನಡೆಸುವುದು ಎಂಬ ನಂಬಿಕೆಯಲ್ಲಿ ಜನರು ಸಿಪಿಎಂ ಪರ ಮತ ಚಲಾಯಿಸಿದ್ದಾರೆ. ನಾವು ಜನರ ನಂಬಿಕೆಯನ್ನು ಉಳಿಸಿಕೊಂಡು ಆಡಳಿತ ನಡೆಸುತ್ತೇವೆ’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕಿನಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷವಿದ್ದರೂ ಜೆಡಿಎಸ್ ಮತ್ತು ಬಿಜೆಪಿ ಕೂಡ ಪೈಪೋಟಿ ನೀಡಿದ ಕಾರಣ ಮತಗಳು ಒಡೆದು ಹೋಗುವ ಸಾಧ್ಯತೆಯಿತ್ತು. ತಂತ್ರ-ಪ್ರತಿತಂತ್ರ ಅನುಸರಿಸಿದರೂ , ಸಚಿವರಾದಿಯಾಗಿ ಪಕ್ಷದ ಪರ ಪ್ರಚಾರ ನಡೆಸಿದರೂ ಬಿಜೆಪಿಗೆ ಈ ಎರಡೂ ತಾಲ್ಲೂಕುಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲೂ ಕೂಡ ಗೌರಿಬಿದನೂರು ಜಿ.ಪಂ. ಒಂದು ಮತ್ತು ತಾ.ಪಂ. ನಾಲ್ಕು ಕ್ಷೇತ್ರ ಹೊರತುಪಡಿಸಿದರೆ ಬೇರೆಲ್ಲೂ ಕಮಲ ಅರಳಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry