ರಾಜ್ಯದಲ್ಲಿ ಮುಂದುವರಿದ ಮಳೆ: ನಾಲ್ವರು ಬಲಿ

7

ರಾಜ್ಯದಲ್ಲಿ ಮುಂದುವರಿದ ಮಳೆ: ನಾಲ್ವರು ಬಲಿ

Published:
Updated:

ಬೆಂಗಳೂರು: ರಾಜ್ಯದ ಕರಾವಳಿ ಮತ್ತು  ಉತ್ತರ ಕರ್ನಾಟದ ವಿವಿಧೆಡೆ ಬುಧವಾರವೂ ಮಳೆ ಮುಂದುವರಿದಿದೆ. ಮಳೆ ಸಂಬಂಧಿ ಅನಾಹುತಗಳಲ್ಲಿ ಮಂಗಳವಾರ ಸಂಜೆಯಿಂದೀಚೆಗೆ ನಾಲ್ವರು ಸತ್ತಿದ್ದಾರೆ.ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಬುಧವಾರ ಇನ್ನಷ್ಟು ಹರಿವು ಹೆಚ್ಚಿದೆ.ಔರಾದ್‌ ವರದಿ: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಇಬ್ಬರು ಬಲಿಯಾಗಿದ್ದಾರೆ.

ಸಿಡಿಲು ಬಡಿದು ಕೊರೆಕಲ್‌ ತಾಂಡಾದ ರಾಜು ಲಕ್ಷ್ಮಣ (34) ಮೃತಪಟ್ಟರೆ,  ರಾತ್ರಿ ಹೊಲದಿಂದ ಮನೆಗೆ ಬರುವ ವೇಳೆ ಮಹಾಡೋಣಗಾಂವ್‌ ಬಳಿಯ ನಾಲೆ ನೀರಿನ ಸೆಳೆತಕ್ಕೆ ಕಲಾವತಿ  (34) ಕೊಚ್ಚಿಹೋಗಿದ್ದಾರೆ. ಬುಧವಾರ ಸಂಜೆವರೆಗೂ ಕಲಾವತಿ ಶವ ಪತ್ತೆಯಾಗಿಲ್ಲ ಎಂದು ಎಪಿಎಂಸಿ ಸದಸ್ಯ ಗೋವಿಂದ ಇಂಗಳೆ ತಿಳಿಸಿದ್ದಾರೆ. ಮಂಗಳವಾರ ಸಂಜೆಯಿಂದ ಬುಧವಾರ ಬೆಳಿಗ್ಗೆವರೆಗೆ ತಾಲ್ಲೂಕಿನ ಚಿಂತಾಕಿ ಹೋಬಳಿಯಲ್ಲಿ 70 ಮಿ.ಮೀ. ಮಳೆಯಾಗಿದೆ.ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಕೃಷಿ ಕೆಲಸದಲ್ಲಿ ತೊಡಗಿದ್ದ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಜಕನಾಯಕನಕೊಪ್ಪದಲ್ಲಿ ಮಂಗಳವಾರ ನಡೆದಿದೆ. ಮೃತಳನ್ನು ಈರವ್ವ ಬಸಪ್ಪ ಹನಮನಿ (55) ಎಂದು ಗುರುತಿಸಲಾಗಿದೆ. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತೇಬೆನ್ನೂರು (ದಾವಣಗೆರೆ ಜಿಲ್ಲೆ) ವರದಿ: ಇಲ್ಲಿಗೆ ಸಮೀಪದ ಚೆನ್ನಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯ ಕಾರಣ ಮನೆಯ ಗೋಡೆ ಕುಸಿದು ಸುರೇಶ (32) ಎಂಬುವವರು ಮೃತಪಟ್ಟಿದ್ದಾರೆ.  ಈ ಮನೆ ಮಲ್ಲಪ್ಪ ಎಂಬುವವರಿಗೆ ಸೇರಿದೆ. ಸುರೇಶ ಅವರು ರಾತ್ರಿ 8.45ರ ವೇಳೆಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಮನೆ ಪಾಠದಿಂದ ಕರೆತರಲು ನಡೆದುಕೊಂಡು  ಓಣಿ ದಾಟುವಾಗ ಅವರ ಮೇಲೆ ಗೋಡೆ ಕುಸಿದಿದೆ. ಅವಶೇಷಗಳಡಿ ಸಿಕ್ಕಿ ಹಾಕಿಕೊಂಡ ಅವರನ್ನು ತಕ್ಷಣ ಹೊರತೆಗೆಯಲಾಯಿತು.ತೀವ್ರ ಗಾಯಗೊಂಡ ಅವರು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಕೊನೆಯುಸಿರೆಳೆದರು. ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದರು.ವಿಜಾಪುರ ವರದಿ:  ಜಿಲ್ಲೆಯ ತಾಳಿಕೋಟೆ ಸುತ್ತಮುತ್ತ ರಭಸದ ಮಳೆಯಾಗಿದ್ದು, ರಸ್ತೆ ಮಟ್ಟದ ಹಡಗಿನಾಳ ಸೇತುವೆ ಜಲಾವೃತವಾಗಿ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ವಾಹನಗಳು ಸುಮಾರು 10 ಕಿ.ಮೀ. ಸುತ್ತಿಬಳಸಿ ಸಂಚರಿಸುವಂತಾಗಿದೆ.ಆಲಮಟ್ಟಿಗೆ ಇನ್ನಷ್ಟು ನೀರು: ಆಲಮಟ್ಟಿ ಜಲಾಶಯದ ಒಳಹರಿವು ಬುಧವಾರ 53,000 ಕ್ಯೂಸೆಕ್ ಇತ್ತು. ಜಲಾಶಯದಿಂದ ವಿದ್ಯುತ್‌ ಉತ್ಪಾದನೆ ಮತ್ತು ನದಿಗೆ ಒಟ್ಟು 61,000 ಕ್ಯೂಸೆಕ್ ನೀರು ಬಿಡಲಾಯಿತು. ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಮುಳುಗಡೆ ಪ್ರದೇಶಕ್ಕಿಂತಲೂ ಒಂದು ಅಡಿ ಹೆಚ್ಚಿಗೆ ನೀರು ಬಂದಿದೆ. ಕೃಷ್ಣಾ ತೀರದ ಅನೇಕ ಕಡೆ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ ಎಂದು ರೈತರು ದೂರಿದ್ದಾರೆ.123 ಟಿ.ಎಂ.ಸಿ. ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ 120 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕದ ವಿಜಾಪುರ, ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಬುಧವಾರ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry