ಶನಿವಾರ, ಮೇ 28, 2022
31 °C

ರಾಜ್ಯದಲ್ಲಿ ಹಾಲಿನ ಹೊಳೆ-ಕರಾವಳಿಯಲ್ಲಿ ಬರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದಲ್ಲಿ ಈ ಬಾರಿ ಹಾಲಿನ ಉತ್ಪಾದನೆ 52 ಲಕ್ಷ ಲೀಟರ್ ಮೀರಿ ದಾಖಲೆ ನಿರ್ಮಾಣವಾಗಿರಬಹುದು, ಆದರೆ ಕರಾವಳಿಯ ದ.ಕ., ಉಡುಪಿ ಜಿಲ್ಲೆಗಳಲ್ಲಿ 1 ಲಕ್ಷ ಲೀಟರ್‌ಗೂ ಅಧಿಕ ಹಾಲಿನ ಕೊರತೆ ಇದೆ. ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ರೈತರಿಗೆ ಹಾಲಿಗೆ ದರ ದೊರೆತರೂ ಹೈನುಗಾರಿಕೆಯಲ್ಲಿ ಜಿಲ್ಲೆ ವಿಶೇಷ ಸಾಧನೆ ಮಾಡಿಲ್ಲ!ವಿಶ್ವ ಹಾಲು ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಕುಲಶೇಖರದಲ್ಲಿರುವ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೇಳಿಬಂದ ಕಳವಳ ಇದು. ಹಾಲು ಉತ್ಪಾದನೆ ಹೆಚ್ಚಳಕ್ಕೆ ಒಕ್ಕೂಟ ಕೈಗೊಂಡ ಉತ್ತೇಜನ ಕ್ರಮಗಳಿಗೆ ಅಂತಹ ಬೆಲೆ ದೊರಕದೆ ಇರುವ ವಿಚಾರವೂ ಇದೇ ಸಂದರ್ಭದಲ್ಲಿ ಬಹಿರಂಗವಾಯಿತು.ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ಹಾಲಿನ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದನ್ನು ಬೆಟ್ಟುಮಾಡಿ ತೋರಿಸಿದರು. ಹಾಲಿನ ಬದಲಿಗೆ ಕೋಕ್ ಇಂದು ಮಕ್ಕಳ ಪಾನೀಯವಾಗುತ್ತಿದೆ. ಜಿಲ್ಲೆಯಲ್ಲಿ ರೈತರಿಗೆ ರಾಜ್ಯದಲ್ಲೇ ಅಧಿಕ ಪ್ರಮಾಣದಲ್ಲಿ ಪ್ರೋತ್ಸಾಹಧನ ನೀಡಿದರೂ ಹಾಲಿನ ಉತ್ಪಾದನೆಯೂ ಹೆಚ್ಚಾಗದೆ ಇರುವುದು ವಿಶೇಷ. ರೈತರಿಗೆ ನೀಡವ ವಿಶೇಷ ಪ್ರೋತ್ಸಾಹಧನವನ್ನು ಇನ್ನೊಂದು ತಿಂಗಳು ನೀಡುವುದಾಗಿ ತಿಳಿಸಿದರು.ಒಕ್ಕೂಟವು ಉತ್ತಮ ಗುಣಮಟ್ಟದ ತಾಜಾ, ಶುದ್ಧ ಹಾಲನ್ನು ಹೈನುಗಾರರಿಂದ ಖರೀದಿಸಿ, ಶೇಖರಿಸಿ ಒಕ್ಕೂಟದ ಮಣಿಪಾಲ ಮತ್ತು ಮಂಗಳೂರು ಡೇರಿಗಳಲ್ಲಿ ಅತ್ಯಾಧುನಿಕ ಯಂತ್ರಗಳಲ್ಲಿ ಸಂಸ್ಕರಿಸಿ ಗ್ರಾಹಕರಿಗೆ ಒದಗಿಸುತ್ತಿದೆ ಎಂದರು. ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ 7 ದಿನಗಳಿಗಿಂತ ಕಡಿಮೆ ಜೀವಿತಾವಧಿ ಇದ್ದರೆ ಪ್ಯಾಕೇಟ್ ಮೇಲೆ `ಇಷ್ಟು ದಿನಾಂಕದೊಳಗೆ ಬಳಸಬೇಕು~ ಎಂಬುದು ನಮೂದಾಗಿರಬೇಕು.ಏಳು ದಿನಗಳಿಗಿಂತ ಹೆಚ್ಚು ಜೀವಿತಾವಧಿ ಇರುವ ಉತ್ಪನ್ನಗಳ ಪ್ಯಾಕಿಂಗ್ ದಿನಾಂಕ ನಮೂದಿಸುವಾಗ `ಈ ದಿನಾಂಕಕ್ಕಿಂತ ಮೊದಲು ಬಳಕೆ ಉತ್ತಮ~ ಎಂಬುದನ್ನು ನಮೂದಿಸಬೇಕು. ಈ ನಿಟ್ಟಿನಲ್ಲಿ ಒಕ್ಕೂಟವು ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಕಾಯ್ದೆಯನ್ನು ಸಮರ್ಪಕವಾಗಿ ಪಾಲಿಸುತ್ತಿದೆ ಎಂದರು.ಒಕ್ಕೂಟದ ನಿರ್ವಾಹಕ ನಿರ್ದೇಶಕ ರವಿಕುಮಾರ್ ಕಾಕಡೆ ಮಾತನಾಡಿ, ಹೈನೋದ್ಯಮದಿಂದ ಉಭಯ ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕರ ಪರಿವಾರಗಳು ಕೃಷಿ ಆದಾಯದೊಂದಿಗೆ ಹೆಚ್ಚುವರಿ ಆದಾಯ ಗಳಿಸುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು.ಎರಡೂ ಜಿಲ್ಲೆಗಳಲ್ಲಿನ ಹಾಲು ಉತ್ಪಾದಕರಿಗೆ 2011-12ನೇ ಸಾಲಿನಲ್ಲಿ 164.98 ಕೋಟಿ ರೂಪಾಯಿ ಸಂದಾಯ ಮಾಡಲಾಗಿದೆ. ಹೈನೋದ್ಯಮದಿಂದ 7,725 ಮಂದಿ ಉದ್ಯೋಗ ಗಳಿಸಿಕೊಂಡಿದ್ದಾರೆ ಎಂದರು.

ವಿಶ್ವ ಹಾಲು ದಿನಾಚರಣೆ ಉದ್ಘಾಟಿಸಿದ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಕೆ.ಸೀತಾರಾಮ ರೈ ಮಾತನಾಡಿ, ಹಾಲು ಉತ್ಪಾದನೆಯತ್ತ ಜಿಲ್ಲೆ ಇನ್ನಷ್ಟು ಗಮನ ಹರಿಸಲೇಬೇಕಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮೈಸೂರುಪಾಕ್, ಪೇಡಾ ಮಾರಾಟದ ಬಹುಮಾನ ಯೋಜನೆಯಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ನಂದಿನಿ ಉತ್ಪನ್ನಗಳ ಬಗೆಗಿನ ಮಾಹಿತಿ ಪುಸ್ತಕ ಬಿಡುಗಡೆ ಮಾಡಲಾಯಿತು. 2010-11ನೇ ಸಾಲಿನ ಉತ್ತಮ ಡೀಲರ್‌ಗಳಿಗೆ ಬಹುಮಾನ ವಿತರಿಸಲಾಯಿತು.ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಒಕ್ಕೂಟದ ವತಿಯಿಂದ ಮಂಗಳೂರಿನ ಮೂರು ಕಡೆ ಹಾಗೂ ಉಡುಪಿಯ ಎರಡು ಕಡೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅನಾಥ, ಅಶಕ್ತರು, ವೃದ್ಧರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಕೆ.ವಿ.ಹಲಗಪ್ಪ, ಹಾಲು ಒಕ್ಕೂಟದ ನಿರ್ದೇಶಕ ಮುಕುಂದ ನಾಯಕ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.