ಶನಿವಾರ, ಏಪ್ರಿಲ್ 17, 2021
23 °C

ರಾಜ್ಯದ ಅಭಿವೃದ್ಧಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನನ್ನ ಗುರಿಯಾದರೂ ಮಂದ ಗತಿಯಲ್ಲಿ ಸಾಗಿರುವ ಉತ್ತರ ಕರ್ನಾಟಕದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸುತ್ತೇನೆ~ ಎಂದು ರಾಜ್ಯದ ನೂತನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಭಾನುವಾರ ತಮ್ಮ ತವರೂರಿಗೆ  ಆಗಮಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

`ಉತ್ತರ ಕರ್ನಾಟಕಕ್ಕೆ ಸೇರಿದ ನಾನು ಮುಖ್ಯಮಂತ್ರಿ ಆಗಿರುವುದರಿಂದ ಸಹಜವಾಗಿಯೇ ಈ ಭಾಗದ ಜನರಲ್ಲಿ ನಿರೀಕ್ಷೆಗಳು ಅಧಿಕವಾಗಿವೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಈ ಭಾಗದ ಹಲವು ಯೋಜನೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ನೆನೆಗುದಿಗೆ ಬಿದ್ದಿವೆ. ಅವುಗಳಿಗೆ ತೀವ್ರ ಗತಿಯಿಂದ ಚಾಲನೆ ನೀಡುವುದೇ ನನ್ನ ಮೊದಲ ಆದ್ಯತೆಯಾಗಿದೆ~ ಎಂದು ಹೇಳಿದರು.

`ಬೆಣ್ಣೆ ಹಳ್ಳ ಮತ್ತು ಡೋಣಿ ನದಿ ಮಹಾಪೂರ ತಡೆಗಟ್ಟಲು ತಜ್ಞರು ನೀಡಿರುವ ವರದಿಯನ್ನೇ ಆಧಾರವಾಗಿ ಇಟ್ಟುಕೊಂಡು ಜಲ ಸಂಪನ್ಮೂಲ ಇಲಾಖೆ ಆಗಲೇ ಯೋಜನೆ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ಗೆ ಎರಡು ದಿನಗಳಲ್ಲಿ ವಿವರವಾದ ಪತ್ರ ಬರೆದು ಮಾತುಕತೆಯಲ್ಲೇ ವಿವಾದ ಬಗೆಹರಿಸಲು ಯತ್ನಿಸಲಾಗುವುದು~ ಎಂದರು.

`ಗುರುವಾರದಿಂದ ಶುರುವಾಗುವ ಅಧಿವೇಶನ ಮುಗಿದ ಬಳಿಕ ಬೆಳಗಾವಿ ಸುವರ್ಣ ಸೌಧದ ಉದ್ಘಾಟನಾ ಸಮಾರಂಭ ನಡೆಸಲಿದ್ದೇವೆ. ಮುಂದಿನ ಅಧಿವೇಶವನ್ನು ಸುವರ್ಣ ಸೌಧದಲ್ಲೇ ನಡೆಸಲು ಯತ್ನಿಸುತ್ತೇವೆ~ ಎಂದು ಶೆಟ್ಟರ್ ಹೇಳಿದರು. `ಆಡಳಿತದಲ್ಲಿ ಚುರುಕು ಮುಟ್ಟಿಸಲು 17ರಂದು ಎಲ್ಲ ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯದ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಭ್ರಷ್ಟಾಚಾರ ರಹಿತವಾದ ಪಾರದರ್ಶಕ ಆಡಳಿತ ನೀಡುವುದೇ ನನ್ನ ಗುರಿಯಾಗಿದೆ~ ಎಂದು ತಿಳಿಸಿದರು.

`ಅತ್ಯಂತ ಕ್ಲಿಷ್ಟ ಸನ್ನಿವೇಶದಲ್ಲಿ ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದೇನೆ. ಹತ್ತು ತಿಂಗಳಲ್ಲೇ ಚುನಾವಣೆ ಇದೆ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಇರುವ ಕಾಲಾವಕಾಶ ಬಹಳ ಕಡಿಮೆ. ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದೇನೆ. ಹಿರಿಯರು ಇಟ್ಟಿರುವ ಭರವಸೆಗೆ ಚ್ಯುತಿ ಬರದಂತೆ ಚುರುಕಿನಿಂದ ಕಾರ್ಯ ನಿರ್ವಹಿಸುತ್ತೇನೆ~ ಎಂದು ಶೆಟ್ಟರ್ ನುಡಿದರು.

`ಲೋಕಾಯುಕ್ತರ ನೇಮಕ ಹಾಗೂ ರೈತರ ಸಾಲಮನ್ನಾ ಸೇರಿದಂತೆ ಪ್ರಮುಖ ವಿಷಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು~ ಎಂದು ಹೇಳಿದರು.

`ಈ ಮುಖ್ಯಮಂತ್ರಿ ಸ್ವತಂತ್ರ~

ಹುಬ್ಬಳ್ಳಿ: `ಈ ಮುಖ್ಯಮಂತ್ರಿ ಸಂಪೂರ್ಣ ಸ್ವತಂತ್ರವಾಗಿದ್ದು, ಯಾರ ಕೈಗೊಂಬೆಯಾಗಿಯೂ ಕಾರ್ಯ ನಿರ್ವಹಿಸುವುದಿಲ್ಲ~

-ಹೀಗೆಂದು ಸ್ಪಷ್ಟಪಡಿಸಿದವರು ಜಗದೀಶ ಶೆಟ್ಟರ್. ವರದಿಗಾರರಿಂದ ಕೋರಸ್‌ನಲ್ಲಿ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಅವರು, `ಈ ಹಿಂದೆ ವಿರೋಧ ಪಕ್ಷದ ನಾಯಕನಾಗಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ, ಸಚಿವನಾಗಿ, ಸ್ಪೀಕರ್ ಆಗಿ ಎಷ್ಟು ಸ್ವತಂತ್ರನಾಗಿ ಕಾರ್ಯ ನಿರ್ವಹಿಸಿದ್ದೇನೋ, ಅಷ್ಟೇ ಸ್ವತಂತ್ರವಾಗಿ ಈಗಲೂ ಕೆಲಸ ಮಾಡುತ್ತೇನೆ~ ಎಂದು ಹೇಳಿಕೊಂಡರು.

`ಸ್ಪೀಕರ್ ಆದಾಗ ನನ್ನ ರಾಜಕೀಯ ಜೀವನವೇ ಮುಗಿಯಿತು ಎಂಬ ಆತಂಕ ಬೆಂಬಲಿಗರಲ್ಲಿ ಇತ್ತು. ಭವಿಷ್ಯದ ಬಗೆಗೆ ನಾನು ಆಶಾವಾದಿಯಾಗಿದ್ದೆ. ಈಗ ಅವಕಾಶ ತಾನೇ ಒಲಿದು ಬಂದಿದೆ. ಮುಖ್ಯಮಂತ್ರಿ ಪಟ್ಟವನ್ನು ನನಗೇ ವಹಿಸಿಕೊಡಬೇಕು ಎನ್ನುವ ಸಾರ್ವಜನಿಕ ಅಭಿಪ್ರಾಯ ರಾಜ್ಯದಲ್ಲಿ ಸೃಷ್ಟಿಯಾಗಿತ್ತು. ಎಲ್ಲ 121 ಶಾಸಕರು ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಹಿರಿಯರೂ ಆಶೀರ್ವದಿಸಿದರು~ ಎಂದರು.

ಪ್ರತಿಕ್ರಿಯೆಗೆ ನಕಾರ: `ಕಳಂಕಿತ ಸಚಿವರ ಕುರಿತು ರಾಜ್ಯಪಾಲರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ~ ಎಂದ ಅವರು, `ಸರ್ಕಾರ ಸ್ಥಿರವಾಗಿ ತನ್ನ ಅಧಿಕಾರಾವಾಧಿ ಮುಗಿಸಲಿದೆ~ ಎಂದು ಭರವಸೆ ವ್ಯಕ್ತಪಡಿಸಿದರು.

ಬಿತ್ತನೆಗೆ ಮೋಡಗಳು ಪಕ್ವವಾಗಿಲ್ಲ: ಶೆಟ್ಟರ್

ಹುಬ್ಬಳ್ಳಿ:  ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳು ವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ರೈತಾಪಿ ವರ್ಗದ ಸಂಕಷ್ಟ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡುವಂತೆ ರೈತ ಸಂಘಟನೆಗಳಿಂದ ಹಾಗೂ ಪಕ್ಷದ ಮುಖಂಡರಿಂದ ಈಗಾಗಲೇ ಮನವಿ ಬಂದಿದೆ. ಆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಮೋಡ ಬಿತ್ತನೆಗೆ ಹವಾಮಾನ ಸೂಕ್ತವಾಗಿಲ್ಲ ಎಂದು ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆಷ್ಟೇ ನಡೆದ ಸಭೆಯಲ್ಲಿ ಹವಾಮಾನ ಇಲಾಖೆ ತಜ್ಞರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮೋಡಗಳು ಸಾಂದ್ರಗೊಳ್ಳದೆ ಬಿತ್ತನೆ ಮಾಡಬಹುದೇ ಎಂಬ ಬಗ್ಗೆ ಈಗಾಗಲೇ ಪುಣೆಯ ಕಂಪೆನಿಯೊಂದರ ಜೊತೆ ಮಾತುಕತೆ ನಡೆಸಲಾಗಿದೆ. ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡು ಹವಾಮಾನ ಸ್ಪಂದಿಸುತ್ತಿದ್ದಂತೆಯೇ ಮೋಡ ಬಿತ್ತನೆ ಆರಂಭಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.