ಭಾನುವಾರ, ಜನವರಿ 26, 2020
28 °C

ರಾಜ್ಯದ ಆರ್ಥಿಕ ಸ್ಥಿತಿ ಶ್ವೇತಪತ್ರ ಹೊರಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಮುಖ್ಯಮಂತ್ರಿಗಳು ಬಜೆಟ್‌ಗೂ ಮೊದಲು ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಜನತೆ ಮುಂದಿಡಲು ಶ್ವೇತಪತ್ರ ಹೊರಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಯಡಿಯೂರಪ್ಪ ರೂ.83 ಸಾವಿರ ಕೋಟಿ ಬಜೆಟ್ ಮಂಡಿಸಿದರು. ಈ ವರ್ಷಕ್ಕೆ ಲಕ್ಷ ಕೋಟಿ ರೂಪಾಯಿ ಬಜೆಟ್ ನೀಡುವುದಾಗಿ ಹೇಳಿದ್ದರು. ವಾಸ್ತವದ ಆದಾಯ ಮತ್ತು ವೆಚ್ಚದ ಅರಿವೇ ಇಲ್ಲದೆ ಅಂತಹ ಮಂಡಿಸಿದರು.ಆದರೆ, ಕಳೆದ ಬಜೆಟ್‌ನಲ್ಲಿ ಪ್ರಕಟಿಸಿರುವ ಅನುದಾನದಲ್ಲಿ ಶೇ.50ರಷ್ಟು ಹಣ 18 ಜಿಲ್ಲೆಗಳಲ್ಲಿ ವೆಚ್ಚವಾಗಿಲ್ಲ ಎಂಬುದನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬಹಿರಂಗವಾಗಿ ಹೇಳುತ್ತಿದ್ದಾರೆ. ಮಾರ್ಚ್‌ನಲ್ಲಿ ಬಜೆಟ್ ಮಂಡಿಸುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಅದಕ್ಕೂ ಮೊದಲು ಶ್ವೇತಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.ರಾಜ್ಯದ 110 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಿದರೂ ಪರಿಹಾರ ಕಾರ್ಯಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸರಿಯಾದ ನಿರ್ದೇಶನ ನೀಡಲಿಲ್ಲ. ಕೇಂದ್ರದಿಂದ ಬಂದಿದ್ದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿಲ್ಲ. ಅಂಗವಿಕಲರು, ಅಂಧರು, ವೃದ್ಧರಿಗೆ ಕಳೆದ ಒಂದು ವರ್ಷದಿಂದ ಮಾಸಿಕ ವೇತನ ನೀಡಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೇ? ಎನ್ನುವ ಸಂಶಯ ಮೂಡಿದೆ ಎಂದರು.ಸಮಾವೇಶ ಉದ್ಘಾಟಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಬಿಜೆಪಿಯಿಂದ ರಾಷ್ಟ್ರಕ್ಕೆ ಜನಪರವಾದ ಒಂದೇ ಒಂದು ಶಾಶ್ವತ ಯೋಜನೆ ಆಗಲಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಬಳ್ಳಾರಿಯಲ್ಲಿ ಗಣಿ ಲೂಟಿ ನಡೆಸಿ ರಾಷ್ಟ್ರಮಟ್ಟದಲ್ಲಿ ಅಪಕೀರ್ತಿ ಸಂಪಾದಿಸಿದೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದ ವೈಫಲ್ಯವನ್ನು ಅವಲೋಕಿಸಿದರೆ ನಮ್ಮ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಪಕ್ಷ ಸಂಘಟಿಸಲು ಇನ್ನಷ್ಟು ಉತ್ಸಾಹ, ಉತ್ತೇಜನ ಬರಲಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಹೇಳಿದರು. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ,  ಎಐಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಡಿ.ಸಿ.ಗೀತಾ, ಕೆಪಿಸಿಸಿ ಕಾರ್ಯದರ್ಶಿ ವಿನಯ್‌ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ, ಮಾಜಿ ಸಚಿವರಾದ ಡಿ.ಕೆ.ತಾರಾದೇವಿ ಸಿದ್ದಾರ್ಥ, ಜಯಪ್ರಕಾಶ್ ಹೆಗಡೆ, ಬಿ.ಬಿ.ನಿಂಗಯ್ಯ, ಸಗೀರ್ ಅಹಮದ್, ಬಿಬಿಎಂಪಿ ಮಾಜಿ ಮೇಯರ್ ಮಮ್ತಾಜ್ ಬೇಗಂ ಇನ್ನಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)