ರಾಜ್ಯದ ತೆರಿಗೆ ಆದಾಯದಲ್ಲಿ ಶೇ 30 ಹೆಚ್ಚಳ

7

ರಾಜ್ಯದ ತೆರಿಗೆ ಆದಾಯದಲ್ಲಿ ಶೇ 30 ಹೆಚ್ಚಳ

Published:
Updated:

ಬೆಂಗಳೂರು: ರಾಜ್ಯದ ಪ್ರಸ್ತುತ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ (ಜಿಎಸ್‌ಡಿಪಿ) ದರ ಶೇಕಡ 8.2ರಷ್ಟಿದೆ. ಈ ಅವಧಿಯಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯದ ಪ್ರಮಾಣದಲ್ಲಿ ಶೇಕಡ 30ರಷ್ಟು ಹೆಚ್ಚಳವಾಗಿದೆ ಎಂದು 2010-11ರ ಆರ್ಥಿಕ ಸಮೀಕ್ಷೆ ಹೇಳಿದೆ.ಗುರುವಾರದಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಯೋಜನೆ. ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 2010-11ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಕರ್ನಾಟಕವು ಅತ್ಯುನ್ನತ ತಲಾ ಆದಾಯ ಇರುವ ರಾಜ್ಯಗಳಲ್ಲಿ ಸ್ಥಾನ ಪಡೆದಿದೆ ಎಂಬ ಅಂಶ ವರದಿಯಲ್ಲಿದೆ.2010-11ನೇ ಸಾಲಿನಲ್ಲಿ ಪ್ರಾಥಮಿಕ ವಲಯದ ಜಿಎಸ್‌ಡಿಪಿ ದರ ಶೇ 5.7ಕ್ಕೆ ಮತ್ತು ತೃತೀಯ ವಲಯದ ದರ ಶೇ 9.7ಕ್ಕೆ ಹೆಚ್ಚಿದೆ. 2009-10ರ ಅವಧಿಯಲ್ಲಿ ಈ ದರ ಅನುಕ್ರಮವಾಗಿ ಶೇ 3.3 ಮತ್ತು ಶೇ 3.7 ಇತ್ತು. ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ತೃತೀಯ ವಲಯದ ಪ್ರಾಬಲ್ಯ ಮುಂದುವರಿದಿದೆ. ದ್ವಿತೀಯ ವಲಯದಲ್ಲೂ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದ್ದು ಜಿಎಸ್‌ಡಿಪಿ ದರ ಶೇ 7ರಲ್ಲಿ ಉಳಿಯಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.ತೆರಿಗೆ ಆದಾಯ ಹೆಚ್ಚಳ: ಪ್ರಸ್ತುತ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ. ಈ ವಲಯದಲ್ಲಿ ಪ್ರಮುಖ ಮೂಲವಾಗಿರುವ ಮಾರಾಟ ತೆರಿಗೆ/ವ್ಯಾಟ್‌ನ ಸಂಗ್ರಹದಲ್ಲಿ ಶೇ 30.17ರಷ್ಟು ಹೆಚ್ಚಳ ಕಂಡುಬಂದಿದೆ. ಮತ್ತೊಂದು ಮೂಲವಾದ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ 10.24ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.2010-11ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ತೆರಿಗೆ ಆದಾಯವು 45,288.40 ಕೋಟಿ ರೂಪಾಯಿ ಆಗುವ ನಿರೀಕ್ಷೆ ಇದೆ. ಅದರಲ್ಲಿ ಮಾರಾಟ ತೆರಿಗೆ/ವ್ಯಾಟ್‌ನ ಪ್ರಮಾಣ ಶೇ 55.65 ಇದೆ. ಕೇಂದ್ರದ ತೆರಿಗೆಗಳಲ್ಲಿ ರಾಜ್ಯಕ್ಕೆ ದೊರೆಯುವ ಪಾಲಿನಲ್ಲೂ ಶೇ 29.43ರಷ್ಟು ಹೆಚ್ಚಳ ದಾಖಲಾಗಿದೆ.ತೆರಿಗೆಯೇತರ ಆದಾಯದ ಮೊತ್ತವು 2,819.90 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜು ಮಾಡಲಾಗಿದೆ. 2009-10ರಲ್ಲಿ ಈ ಮೊತ್ತ ರೂ 2,494.81 ಕೋಟಿ ಇತ್ತು. 2010-11ರಲ್ಲಿ ಈ ಆದಾಯದಲ್ಲಿ ಶೇ 13.03ರಷ್ಟು ಏರಿಕೆ ಕಂಡುಬಂದಿದೆ.ಕೇಂದ್ರ ಸರ್ಕಾರದಿಂದ ದೊರೆಯುವ ಅನುದಾನದ ಮೊತ್ತದಲ್ಲಿ ಶೇ 26.97ರಷ್ಟು ಇಳಿಕೆ ಆಗಿದೆ ಎಂದು ವರದಿ ಹೇಳಿದೆ. ಈ ಮೊತ್ತ 2009-10ರಲ್ಲಿ ರೂ 7,572.50 ಕೋಟಿ ಇದ್ದು, 2010-11ರಲ್ಲಿ ರೂ 5,530.47 ಕೋಟಿಗೆ ಇಳಿಯುವ ನಿರೀಕ್ಷೆ ಇದೆ ಎಂಬ ಅಂಶ ವರದಿಯಲ್ಲಿದೆ.ಸಾಲದಲ್ಲೂ ಮೇಲು: ರಾಜ್ಯವು ಸಾಲ ಎತ್ತುವುದರಲ್ಲೂ ಮುಂಚೂಣಿಯಲ್ಲಿದೆ ಎಂಬ ವಿಷಯವನ್ನು ಆರ್ಥಿಕ ಸಮೀಕ್ಷೆ ಬಹಿರಂಗಪಡಿಸಿದೆ.2010-11ನೇ ಹಣಕಾಸು ವರ್ಷದಲ್ಲಿ ರಾಜ್ಯವು ಕೇಂದ್ರ ಸರ್ಕಾರ ಮತ್ತು ಆಂತರಿಕ ಮಾರುಕಟ್ಟೆಗಳಲ್ಲಿ ಪಡೆದಿರುವ ಸಾಲದ ಮೊತ್ತದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಆಗಿರುವುದನ್ನು ಎತ್ತಿ ತೋರಿದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ರೂ 1,142 ಕೋಟಿ ಸಾಲ ಪಡೆಯಲಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಕೇಂದ್ರದಿಂದ ಪಡೆದ ಸಾಲದ ಮೊತ್ತದಲ್ಲಿ ಶೇ 57.28ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಸಾಲಿನಲ್ಲಿ ಆಂತರಿಕ ಮಾರುಕಟ್ಟೆ ಸಾಲು ಎತ್ತುವಳಿಯಲ್ಲಿ ಶೇ 19.98ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.ತಲಾ ಆದಾಯದಲ್ಲಿ ಬೆಳವಣಿಗೆ: ಪ್ರಸಕ್ತ ಬೆಲೆಗಳಲ್ಲಿ ರಾಜ್ಯದ ತಲಾ ಆದಾಯದ ಮೊತ್ತವು 60 ಸಾವಿರ ರೂಪಾಯಿ ತಲುಪುವ ಸಾಧ್ಯತೆ ಇದೆ. 2009-10ನೇ ಹಣಕಾಸು ವರ್ಷದಲ್ಲಿ ಈ ಮೊತ್ತ ರೂ 51,858 ಇತ್ತು. ತಲಾ ಆದಾಯದ ಬೆಳವಣಿಗೆ ದರ ಶೇ 15.7 ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.ಈ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿನ ಆಹಾರ ಧಾನ್ಯಗಳ ಉತ್ಪಾದನೆ 1.25 ಕೋಟಿ ಟನ್ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ಹಿಂದಿನ ವರ್ಷ ಈ ಪ್ರಮಾಣ 1.10 ಕೋಟಿ ಟನ್ ಇದ್ದು, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ 15 ಲಕ್ಷ ಟನ್‌ಗಳಷ್ಟು ಹೆಚ್ಚಳ ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry