ರಾಜ್ಯದ ದೇವಾಲಯಕ್ಕೆ ಸಿಎಂ ಹೋಗಲಿ: ಸಿದ್ದು

7

ರಾಜ್ಯದ ದೇವಾಲಯಕ್ಕೆ ಸಿಎಂ ಹೋಗಲಿ: ಸಿದ್ದು

Published:
Updated:

ನಾಗಮಂಗಲ : ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಪಾಪ, ಕರ್ಮಗಳನ್ನು ಕಡಿಮೆ ಮಾಡಿ ಕೊಳ್ಳಲು ನೆರೆಯ ರಾಜ್ಯದ ದೇವಾಲಯಗಳಿಗೆ ತೆರಳಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ಅದರ ಬದಲು ರಾಜ್ಯದ ದೇವರುಗಳಿಗೆ ಪೂಜೆ ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಲೇವಡಿ ಮಾಡಿದರು. ಸೋಮವಾರ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದ ಹುಚ್ಚಮ್ಮ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದರು.ದೇವರನ್ನು ನಾವು ನೋಡಲು ಸಾಧ್ಯವಿಲ್ಲ. ದೇವಸ್ಥಾನಗಳನ್ನು ನಿರ್ಮಿಸಿ ದೇವರುಗಳನ್ನು ಪ್ರತಿಷ್ಠಾಪಿಸುವುದು ಭಯ, ಭಕ್ತಿ, ನಂಬಿಕೆ ಆತ್ಮತೃಪ್ತಿಗಾಗಿ. ನಾನು ಮನಸ್ಸಿನಲ್ಲಿ ದೇವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಹಾಗಾಗಿ ದೇವಾಲಯಗಳಿಗೆ ಹೆಚ್ಚು ಭೇಟಿ ನೀಡುವುದಿಲ್ಲ. ಆದರೆ ಯಡಿಯೂರಪ್ಪ ತಮ್ಮ ಸ್ವಗ್ರಾಮದ ದೇವರಿಗೆ ಕೈ ಮುಗಿಯದಿದ್ದರೂ ನೆರೆ ರಾಜ್ಯದ ದೇವರುಗಳಿಗೆ ಹೆಚ್ಚು ಭಕ್ತಿ ತೋರುವುದನ್ನು ನೋಡಿದರೆ ರಾಜ್ಯದ ಜನತೆಗೆ ಮೋಸ ಮಾಡಿದ್ದೇನೆ ನನ್ನನ್ನು ಕ್ಷಮಿಸು ಎಂದರ್ಥ. ಮಾಟ, ಮಂತ್ರ, ವಾಮಾಚಾರಗಳಲ್ಲಿ ತೊಡಗಿರುವ ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಯತ್ತ ಕಿಂಚಿತ್ತಾದರು ಗಮನ ಹರಿಸಲಿ ಎಂದು ಕಟುವಾಗಿ ನುಡಿದರು.ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿರುವ ಬಿಂಡೇನಹಳ್ಳಿ ಗ್ರಾಮದ ಮಹೇಶ್ ಅವರು ಯುವ ಪೀಳಿಗೆಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಶಾಸಕ ಸುರೇಶ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಜಿ.ಪಂ ಸದಸ್ಯ ಹುಚ್ಚೇಗೌಡ, ಚಂದ್ರೇಗೌಡ, ತಾ.ಪಂ ಸದಸ್ಯ ಎನ್.ಬಿ.ಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry