ಮಂಗಳವಾರ, ಏಪ್ರಿಲ್ 13, 2021
28 °C

ರಾಜ್ಯದ ಪ್ರಯಾಣಿಕರಿಗೆ ಅನ್ಯಾಯ

ಪ್ರಜಾವಾಣಿ ವಾರ್ತೆ/ ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಯಶವಂತಪುರ-ದಾದರ್ -ಯಶವಂತಪುರ ಚಾಲುಕ್ಯ ಎಕ್ಸ್‌ಪ್ರೆಸ್ ರೈಲನ್ನು (ಸಂಖ್ಯೆ:11017ಹಾಗೂ 11018) ಪುದುಚೇರಿ ಮತ್ತು ತಿರುನಲ್ವೇಲಿಗೆ ವಿಸ್ತರಿಸಿದ ಪರಿಣಾಮ ಕರ್ನಾಟಕದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ವಿಸ್ತರಣೆ ನಂತರವೂ ಈ ರೈಲು ಕರ್ನಾಟಕದಲ್ಲಿ ಸುಮಾರು 16 ತಾಸು ಸಂಚರಿಸುತ್ತದೆ. ಆದರೂ ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಹಿಡಿದು ಬೆಳಗಾವಿ ಜಿಲ್ಲೆಯ ಕುಡಚಿವರೆಗಿನ 17 ನಿಲ್ದಾಣಗಳಿಂದ ಸಂಚರಿಸಲು ಟಿಕೆಟ್ (ಬರ್ತ್) ಸಿಗದಿರುವುದರಿಂದ ರಾಜ್ಯದ ರೈಲ್ವೆ ಬಳಕೆದಾರರು ಅಸಮಾಧಾನಗೊಂಡಿದ್ದಾರೆ.

ಬೆಂಗಳೂರಿನಿಂದ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ನಗರಗಳ ಮೂಲಕ ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ಸಂಪರ್ಕಿಸಲು 17 ವರ್ಷಗಳ ಹಿಂದೆ ಚಾಲುಕ್ಯ ಎಕ್ಸ್‌ಪ್ರೆಸ್ ರೈಲನ್ನು ದಾದರ್-ಯಶವಂತಪುರ ನಡುವೆ ಆರಂಭಿಸಲಾಗಿತ್ತು.

ಕಳೆದ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಪ್ರಕಟಿಸಿದಂತೆ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಮೂರು ದಿನ ತಮಿಳುನಾಡಿನ ತಿರುನಲ್ವೇಲಿ ಹಾಗೂ ಇನ್ನು ಮೂರು ದಿನ ಪುದುಚೇರಿಗೆ ಈ ತಿಂಗಳ 5 ರಿಂದ ವಿಸ್ತರಣೆಗೊಂಡಿದೆ. ಇದಕ್ಕೆ ಮೊದಲು ಯಶವಂತಪುರದಿಂದ ಈ ರೈಲು ಹೊರಡುತ್ತಿದ್ದಾಗ ಅದರಲ್ಲಿನ ಎಲ್ಲ 648 ಬರ್ತ್‌ಗಳೂ (ಸೀಟು) ರಾಜ್ಯದ ಪ್ರಯಾಣಿಕರಿಗೇ ಲಭ್ಯವಿರುತ್ತಿತ್ತು. ರೈಲಿನ ವಿಸ್ತರಣೆಯಿಂದಾಗಿ ರಾಜ್ಯಕ್ಕೆ ಕೇವಲ 65 ಸೀಟು ಮಾತ್ರ ನಿಗದಿಯಾಗಿದೆ. ಜತೆಗೆ ಕರ್ನಾಟಕದವರಿಗೆ ತತ್ಕಾಲ್ ಮತ್ತು ವಿಐಪಿ ಕೋಟಾ ಕೂಡ ಇಲ್ಲ.

ಪ್ರತಿಭಟನೆಗೆ ಸಿದ್ಧತೆ: ಈ ರೈಲಿನಲ್ಲಿ ಈ ಮೊದಲು ರಾಜ್ಯಕ್ಕೆ ಸಿಗುತ್ತಿದ್ದಷ್ಟೇ ಸೀಟುಗಳನ್ನು ನಿಗದಿಪಡಿಸಬೇಕು  ಅಥವಾ ಈ ಮಾರ್ಗದಲ್ಲಿ ಮುಂಬೈಗೆ ಹೊಸ ರೈಲು ಸಂಚಾರ ಆರಂಭಿಸಬೇಕು ಎಂದು `ಇಂಡಿಯನ್  ಟ್ರಾವೆಲರ್ಸ್‌ ಅಸೋಸಿಯೇಷನ್' ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಈಗಾಗಲೇ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿವೆ.

`ರಾಜ್ಯದ ಪಾಲಿನ ಕೋಟಾ ಕಡಿತಗೊಳಿಸುವ ಮೂಲಕ ರೈಲ್ವೆ ಕನ್ನಡಿಗರ ಹಕ್ಕನ್ನು ಕಸಿದುಕೊಂಡಿದೆ. ಸ್ಥಳೀಯರ ಮನವಿಗೆ ವಾರದ ಒಳಗೆ ಸಕರಾತ್ಮಕ ಪ್ರತಿಕ್ರಿಯೆ ಬರದಿದ್ದರೆ ಕನ್ನಡಪರ ಸಂಘಟನೆಗಳ ಜತೆಗೂಡಿ ಡಿಸೆಂಬರ್ ಮೊದಲ ವಾರದಲ್ಲಿ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿಗೆ ಅದು ಸಂಚರಿಸುವ ಮಾರ್ಗದಲ್ಲಿನ ಎಲ್ಲ ನಿಲ್ದಾಣಗಳಲ್ಲೂ ತಡೆ ಒಡ್ಡಲಾಗುವುದು' ಎನ್ನುತ್ತಾರೆ ಇಂಡಿಯನ್ ಟ್ರಾವೆಲರ್ಸ್‌ ಅಸೋಸಿಯೇಷನ್ ವಕ್ತಾರ ಉತ್ತಮ್ ಒ. ಸಾಥಿಯಾ.

`ಈ ರೈಲಿನಲ್ಲಿ ಮುಂಬೈ ಹಾಗೂ ಬೆಂಗಳೂರಿಗೆ ತೆರಳಲು ಕರ್ನಾಟಕದವರಿಗೆ ಟಿಕೆಟ್ ಸಿಗುತ್ತಿಲ್ಲ. ವಾಸ್ತವ ಸ್ಥಿತಿ ವಿವರಿಸಿ, ರಾಜ್ಯದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ರೈಲ್ವೆಯ ಈ ಅನ್ಯಾಯದ ವಿರುದ್ಧ ರಾಜ್ಯದ ಸಂಸದರ ನೇತೃತ್ವದಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ' ಎನ್ನುತ್ತಾರೆ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎನ್.ಪಿ. ಜವಳಿ.

ಹೆಚ್ಚುವರಿ ರೈಲಿಗೆ ಮನವಿ: ಮಿತ್ತಲ್

`ರೈಲು ಆರಂಭವಾಗುವ ನಿಲ್ದಾಣಗಳಿಗೆ ಸಾಮಾನ್ಯವಾಗಿ ಹೆಚ್ಚು ಸಂಖ್ಯೆಯ ಬರ್ತ್‌ಗಳ ಕೋಟಾ ನಿಗದಿಯಾಗಿರುತ್ತದೆ. ಈ ಮೊದಲು ಚಾಲುಕ್ಯ ಎಕ್ಸ್‌ಪ್ರೆಸ್‌ನ ಆರಂಭದ ನಿಲ್ದಾಣ ಯಶವಂತಪುರ ಆಗಿತ್ತು. ಈಗ ತಿರುನಲ್ವೇಲಿ ಹಾಗೂ ಪುದುಚೇರಿಯಿಂದ ಸಂಚಾರ ಆರಂಭವಾಗುವುದರಿಂದ ಸಹಜವಾಗಿಯೇ ಹೆಚ್ಚಿನ ಕೋಟಾ ಅಲ್ಲಿನವರಿಗೆ ನಿಗದಿಯಾಗಿದೆ' ಎನ್ನುತ್ತಾರೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ್ ಮಿತ್ತಲ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.