ಬುಧವಾರ, ಜನವರಿ 29, 2020
29 °C

ರಾಜ್ಯದ ಪ್ರವಾಸಿ ಕೇಂದ್ರಗಳಲ್ಲಿ ತೀರದ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ನೋಡಿದಷ್ಟೂ ಮುಗಿಯದ ಪ್ರವಾಸಿ ಕೇಂದ್ರಗಳಿರುವುದು ಕನ್ನಡಿಗರಿಗೆ ಒಂದು ಹೆಮ್ಮೆಯ ವಿಷಯ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಅವನ್ನು ನೋಡಿದಾಗ ಅಲ್ಲಿ ಇನ್ನಷ್ಟು ಹೊತ್ತು ಕಳೆಯಬೇಕು ಎಂಬ ಭಾವನೆ ಬರುತ್ತದೆ.ಚಾರಿತ್ರಿಕ, ಶಿಲ್ಪಕಲೆಗಳ ಪ್ರತೀಕದಂತಿರುವ ದೇವಾಲಯಗಳು, ಕೋಟೆ ಕೊತ್ತಲಗಳಿವೆ. `ನಮ್ಮ ರಾಜ್ಯದಲ್ಲಿ ಅದ್ಭುತವಾದ ಪ್ರವಾಸಿ ತಾಣಗಳಿವೆ. ಅವನ್ನು ನೋಡಲು ಬನ್ನಿ~ ಎಂದು ದೇಶ, ವಿದೇಶಗಳ ಜನರಿಗೆ ಹೇಳಬಹುದಾದಂತಹ ಪ್ರವಾಸಿ ತಾಣಗಳು ಕರ್ನಾಟಕದಲ್ಲಿವೆ. ವಿಷಾದದ ಸಂಗತಿ ಎಂದರೆ ಪ್ರವಾಸಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳು ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಇಲ್ಲದಿರುವುದು. ಇವುಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ತಾಳಿದೆ.ಇತ್ತೀಚೆಗೆ  ಸಮಾನಮನಸ್ಕರಾದ ಏಳೆಂಟು ಜನ ಮೈಸೂರು  ಸುತ್ತುಮುತ್ತಲಿನ ಸೋಮನಾಥಪುರ, ತಲಕಾಡು, ನಂಜನಗೂಡು, ಹಿಮವದ್ಗೋಪಾಲಸ್ವಾಮಿ ಬೆಟ್ಟ (ಗುಂಡ್ಳುಪೇಟೆ ಸಮೀಪ) ಮತ್ತು ಮೇಲುಕೋಟೆಗೆ ನಮ್ಮದೇ ವಾಹನದಲ್ಲಿ ಹೋಗಿದ್ದೆವು.

 

ಆ ಜಾಗಗಳನ್ನು ನೋಡಿ ಎಷ್ಟು ಸಂತೋಷವಾಗಿತ್ತೋ, ಅದಕ್ಕಿಂತ ಹೆಚ್ಚು ಖಿನ್ನತೆಯಿಂದ ಮರಳಿದೆವು. ಎರಡು ವರ್ಷಗಳ ಹಿಂದೆ ಶಿವನಸಮುದ್ರಕ್ಕೆ ಹೋದಾಗಲೂ ಇಂಥದೇ ಅನುಭವವಾಗಿತ್ತು. ಅಂದರೆ ಪ್ರವಾಸಿ ತಾಣಗಳ ಪರಿಸ್ಥಿತಿ ಏನೂ ಸುಧಾರಿಸಿಲ್ಲ ಎಂಬುದು ನಿಚ್ಚಳ.ಯಾವುದೇ ಪ್ರವಾಸಿ ತಾಣಕ್ಕೆ ಪ್ರಮುಖವಾದ ಸೌಲಭ್ಯಗಳೆಂದರೆ ಉತ್ತಮ ರಸ್ತೆ ಮತ್ತು ಸ್ಥಳದ ಮಹತ್ವವನ್ನು ಸರಿಯಾಗಿ ವಿವರಿಸುವ ಶಕ್ತಿ ಇರುವ ಮಾರ್ಗದರ್ಶಿಗಳು (ಗೈಡ್), ಉತ್ತಮ ಉಪಹಾರ ಗೃಹಗಳು, ಶೌಚಾಲಯ ಮತ್ತು ನೈರ್ಮಲ್ಯ.ನಾವು ಹೋದ ಪ್ರತಿಯೊಂದು ತಾಣದಲ್ಲೂ ಇವುಗಳ ಕೊರತೆ ಎದ್ದು ಕಾಣುತ್ತಿತ್ತು. ಖಾಸಗಿ ವಾಹನಗಳಲ್ಲಿ  ಪ್ರಯಾಣಿಸುವವರಿಗೆ ಸರಿಯಾದ ರಸ್ತೆ ಮತ್ತು ಕೂಡು ರಸ್ತೆಗಳು ಬಂದಾಗ ಸೂಕ್ತವಾದ ಮಾರ್ಗದರ್ಶನ ಮಾಡುವ ಫಲಕಗಳಿರಬೇಕು ಮತ್ತು ದೂರವನ್ನು ಸರಿಯಾಗಿ ತಿಳಿಸುವ ಬೋರ್ಡುಗಳು ಇರಬೇಕು.ಹಲವು ಕಡೆ ಇವುಗಳಿಲ್ಲದೆ ನಾವು ಎಡವ್ದ್ದಿದೆವು. ರಸ್ತೆಗಳಂತೂ ಕೆಟ್ಟು ಹಾಳಾಗಿವೆ. ಹೊಂಡ ಬಿದ್ದ ರಸ್ತೆಗಳಲ್ಲಿ ವಾಹನದಲ್ಲಿ ಪ್ರಯಾಣ ಮಾಡುವುದೇ  ಪ್ರಯಾಸದ ಕೆಲಸ. ಅನೇಕ ಕಡೆ ರಸ್ತೆಯೇ ಇ್ಲ್ಲಲವೆಂದು ಅನಿಸುತ್ತಿತ್ತು. ಸೋಮನಾಥಪುರದಿಂದ ತಲಕಾಡಿಗೆ ಹೋಗುವ ಮತ್ತು ಗುಂಡ್ಳುಪೇಟೆಯಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆಗಳ ಪರಿಸ್ಥಿತಿಯನ್ನು ಹೇಳತೀರದು.ಅನೇಕ ಪ್ರವಾಸಿ ಕೇಂದ್ರಗಳ ಬಗ್ಗೆ ಕನಿಷ್ಠ ಮಾಹಿತಿ ಅಥವಾ ಮಾರ್ಗಸೂಚಿ ಫಲಕಗಳು ಇಲ್ಲದೆ ಪ್ರವಾಸಿಗಳಿಗೆ ಸರಿಯಾದ ಸ್ಥಳದ ಇತಿಹಾಸ ಗೊತ್ತಾಗುವುದಿಲ್ಲ. ತಲಕಾಡು ಮತ್ತು ಮೇಲುಕೋಟೆಯಲ್ಲಿ ಅವುಗಳ ಕಾಣದೆ ನಾವು ಬರೀ ದೇವಸ್ಥಾನಗಳನ್ನು ನೋಡಿ ಹಿಂದಿರುಗಿದೆವು.ಶಿಲ್ಪಕಲೆ ಮತ್ತು ಸಂಸ್ಕೃತಿಯ ಪ್ರತೀಕವಾದ ದೇವಸ್ಥಾನಗಳ ಬಳಿ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದ ಮತ್ತು ತಿಳುವಳಿಕೆ ಹೊಂದಿದ ಮಾರ್ಗದರ್ಶಿಗಳಿಲ್ಲದೆ ಪ್ರವಾಸಿಗಳು ದೇವಾಲಯಗಳಿಗೆ ಹೋಗಿ ದೇವರ ದರ್ಶನ ಮಾಡಿ ಬರುವಂತಾಗಿದೆ.ಬಹುತೇಕ ಕಡೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. `ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದೇವೆ~ ಎಂದು  ಹೇಳಿಕೊಳ್ಳುವ ವ್ಯಕ್ತಿಗಳು ವಾಹನ ಶುಲ್ಕವೆಂದು ರೂ.10ರಿಂದ 30ರ ವರೆಗೆ ಶುಲ್ಕ ವಸೂಲು ಮಾಡುತ್ತಾರೆ. ಆದರೆ ವಾಹನಗಳಿಗೆ ಸೂಕ್ತ ರಕ್ಷಣೆಯ ಭರವಸೆ ಸಿಗುವುದಿಲ್ಲ.ಬಹುತೇಕ ಪ್ರವಾಸಿ ತಾಣಗಳಲ್ಲಿ ಶೌಚಾಲಯಗಳಿಲ್ಲ. ರಸ್ತೆಬದಿಯಲ್ಲಿ ದೇಹಬಾಧೆ ತೀರಿಸಿಕೊಳ್ಳಬೇಕಾದ ಪರಿಸ್ಥಿತಿ. ತಲಕಾಡು ಮತ್ತು ಮೇಲುಕೋಟೆಗಳಲ್ಲಿ ಶೌಚಾಲಯಗಳಿದ್ದರೂ ಅವಕ್ಕೆ ಬೀಗ ಹಾಕಲಾಗಿತ್ತು. ಮೇಲುಕೋಟೆಯ ಯೋಗಾನರಸಿಂಹ ದೇವಸ್ಥಾನದಿಂದ ಕೆಳಗೆ ಬಂದಾಗ ಮೂಗು ಮುಚ್ಚಿ ನಡೆಯುವಂತಹ ಪರಿಸ್ಥಿತಿ ಇದೆ.

 

ಪಕ್ಕದ ಕಲ್ಯಾಣಿಯ ಸುತ್ತಮುತ್ತ ಮಲ ಮೂತ್ರ ವಿಸರ್ಜನೆ ಮಾಡುವವರ ಹಾವಳಿಯಿಂದ ನಡೆದಾಡಲೂ ಅಸಹ್ಯವೆನಿಸುತ್ತಿತ್ತು. ಈ ಅವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಸ್ಥಳೀಯ ಆಡಳಿತಗಳು ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ.ಹಂಪಿಯ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಅಲ್ಲಿಯೂ ಅವ್ಯವಸ್ಥೆಗಳಿವೆ. ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳ ಸುತ್ತಲಿನ ಪ್ರದೇಶವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿ ಬೋರ್ಡುಗಳನ್ನು ಹಾಕಿದೆ. ಆದರೆ ಸ್ಥಳ ಇತಿಹಾಸ ಹೇಳುವವರಿಲ್ಲ.

 

ಇರುವ ಕೆಲವೇ ಮಂದಿ ಗೈಡ್‌ಗಳು ಎಲ್ಲ ಪ್ರವಾಸಿಗಳಿಗೂ ಲಭ್ಯರಿರುವುದಿಲ್ಲ. ಕೆಲವರು ವಿದೇಶಿ ಪ್ರವಾಸಿಗಳಿಗೆ ಸ್ಥಳಗಳನ್ನು ತೋರಿಸಲು ಆಸಕ್ತಿ ತೋರುತ್ತಾರೆ. ಕಾಲು ನಡಿಗೆಯಲ್ಲಿ ಸ್ಮಾರಕಗಳನ್ನು ನೋಡಿ ದಣಿದು ಹಸಿದವರಿಗೆ ಊಟದ ಹೋಟೆಲ್‌ಗಳಿಲ್ಲ. ಇರುವ ಸ್ಥಳೀಯ ಹೋಟೆಲ್‌ಗಳಲ್ಲಿ ಸ್ವಚ್ಛತೆಯ ಅಭಾವ. ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗಳಲ್ಲಿ ಸಿಗುವ ತಿನಿಸುಗಳು ದುಬಾರಿ. ಹೀಗಾಗಿ ಪ್ರವಾಸಿಗರು ಎಳೆನೀರು, ಬಾಳೆಹಣ್ಣು ತಿಂದು ಹಸಿವು ಹಿಂಗಿಸಿಕೊಳ್ಳಬೇಕಷ್ಟೆ.

ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಹಣ ಖರ್ಚು ಮಾಡುತ್ತದೆ. ಆದರೆ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯಗಳೇ ಇಲ್ಲದಿದ್ದರೆ ಏನು ಪ್ರಯೋಜನ?

ಪ್ರತಿಕ್ರಿಯಿಸಿ (+)